ದೊಡ್ಡಬಳ್ಳಾಪುರ: ಕೇಂದ್ರದ ಮಾಜಿ ಸಚಿವ ಆರ್.ಎಲ್. ಜಾಲಪ್ಪ ಅವರ ದೂರದೃಷ್ಟಿ ಯಿಂದ ನಿರ್ಮಿಸಿರುವ ಜಕ್ಕಲಮಡುಗು ಯೋಜನೆಯಿಂದಾಗಿ ದೊಡ್ಡಬಳ್ಳಾಪುರ ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಸಾಧ್ಯವಾಗಿದೆ ಎಂದು ನಗರಸಭೆ ಅಧ್ಯಕ್ಷ ಕೆ.ಬಿ.ಮುದ್ದಪ್ಪ ಅಭಿಪ್ರಾಯಪಟ್ಟರು. ತಾಲೂಕಿನ ಸಮೀಪವಿರುವ ಜಕ್ಕಲಮಡಗು ಜಲಾಶಯದಲ್ಲಿ ಕೋಡಿ ಬಿದ್ದಿರುವುದರಿಂದ
ಜಲಾಶಯಕ್ಕೆ ಶಾಸಕ ಟಿ.ವೆಂಕಟರಮಣಯ್ಯ ದಂಪತಿ, ನಗರಸಭೆ ಅಧ್ಯಕ್ಷ ಕೆ.ಬಿ.ಮುದ್ದಪ್ಪ ದಂಪತಿ ಬಾಗಿನ ಅರ್ಪಿಸಿ ಅವರು ಮಾತನಾಡಿದರು.
ಭಾರತರತ್ನ ವಿಶ್ವೇಶ್ವರಯ್ಯ ಅವರಂತಹ ಮಹನೀಯರು ಹಲವಾರು ಜಲಾಶಯಗಳನ್ನು ನಿರ್ಮಿಸಿ ಲಕ್ಷಾಂತರ ಮಂದಿ ಇಂದಿಗೂ ನೆನೆಸಿಕೊಳ್ಳಲು ಕಾರಣರಾಗಿದ್ದಾರೆ. ಜಕ್ಕಲಮಡಗು ಅಣೆಕಟ್ಟು ನಿರ್ಮಾಣಕ್ಕೂ ಯೋಜನೆ ರೂಪಿಸಿ ಅನುಷ್ಠಾನಗೊಳಿಸಿದ್ದಾರೆ ಎಂದು ಸ್ಮರಿಸಿದರು.
ಜಲಾಶಯ ಕೋಡಿ ಬಿದ್ದಿದ್ದರಿಂದ ಹರ್ಷ: ನೀರಾವರಿ ಆಶ್ರಯವಿಲ್ಲದ ಹಾಗೂ ಕೊಳವೆ ಬಾವಿಗಳ ಮೇಲೆ ಅವಲಂಬಿತವಾಗಿದ್ದ ದೊಡ್ಡ ಬಳ್ಳಾಪುರಕ್ಕೆ ಒಂದು ವ್ಯವಸ್ಥಿತ ಯೋಜನೆ ಅಗತ್ಯವನ್ನು ಮನಗಂಡ ಜಾಲಪ್ಪಯೋಜನೆ ರೂಪಿಸಿದರು. ಕೆಲಕಾಲ ಸ್ಥಗಿತವಾಗಿ ಯೋಜನೆಯನ್ನು ಮಾಜಿ ಶಾಸಕ ಜೆ.ನರಸಿಂಹಸ್ವಾಮಿ ಮುಂದುವರಿಸಲು ಬೇಕಾದ ವ್ಯವಸ್ಥೆ ಮಾಡಿದ್ದರು. ಜಲಾಶಯ ಕೋಡಿ ಬಿದ್ದಿರುವುದು ಎಲ್ಲರಿಗೂ ಹರ್ಷ ತಂದಿದೆ. ಮುಂದಿನ ವರ್ಷಗಳಲ್ಲಿಯೂ ಹೀಗೆಯೇ ತುಂಬಲಿ ಎಂದು ಆಶಿಸಿದರು.
ರೈತರು ನೀರನ್ನು ಮಿತವಾಗಿ ಬಳಸಿ: ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ಕಳೆದ 15-20 ವರ್ಷಗಳಿಂದ ಈ ಭಾಗದ ಜನರು ನೀರಿಗಾಗಿ ತುಂಬಾ ಬಳಲಿದ್ದು, ಈ ವರ್ಷ ಉತ್ತಮ ಮಳೆಯಾಗುತ್ತಿದೆ. ಕೆರೆ ಕುಂಟೆಗಳಿಗೆ ಸಾಕಷ್ಟು ನೀರು ಬಂದಿವೆ. ಆದರೆ ರೈತರು ನೀರನ್ನು ಮಿತವಾಗಿ ಬಳಕೆ ಮಾಡುವ ಮೂಲಕ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ತೊಂದರೆ ಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಇದೆ ಎಂದು ತಿಳಿಸಿದರು.
ಇದೇ ಮೊದಲ ಬಾರಿ ಕೋಡಿ: 2012ರಲ್ಲಿ ನಿರ್ಮಾಣ ಕಾರ್ಯ ಮುಕ್ತಾಯವಾದ ನಂತರ ಇದೇ ಪ್ರಥಮ ಬಾರಿಗೆ ಜಕ್ಕಲಮಡಗು ಜಲಾಶಯ ಕೋಡಿ ಬಿದ್ದಿದೆ. 48 ಅಡಿಯಷ್ಟು ಆಳ ನೀರು ನಿಲ್ಲುವ ಸಮರ್ಥ್ಯ ಹೊಂದಿರುವ ಈ ಜಲಾಶಯದಲ್ಲಿ ಒಟ್ಟಾರೆ 4,390 ದಶಲಕ್ಷ ಲೀಟರ್ ನೀರು ಸಂಗ್ರಹಣೆಯಾಗಲಿದೆ. ಇದರಲ್ಲಿ ದೊಡ್ಡಬಳ್ಳಾಪುರ ನಗರಕ್ಕೆ 1,390 ದಶಲಕ್ಷ ಲೀಟರ್, ಚಿಕ್ಕಬಳ್ಳಾಪುರ ನಗರಕ್ಕೆ 3,000 ದಶಲಕ್ಷ ಲೀಟರ್ ನೀರಿನ ಹಂಚಿಕೆಯಾಗಿದೆ ಎಂದು ನಗರಸಭೆ ನೀರು ಸರಬರಾಜು ವಿಭಾಗದ ಎಂಜಿನಿಯರ್ ರಾಮೇಗೌಡ ಮಾಹಿತಿ ನೀಡಿದರು.
ಇದೇ ವೇಳೆ ತಹಶೀಲ್ದಾರ್ ಬಿ.ಎ.ಮೋಹನ್, ನಗರಸಭೆ ಉಪಾಧ್ಯಕ್ಷೆ ಜಯಲಕ್ಷ್ಮೀ, ಸ್ಥಾಯಿ ಸಮಿತಿ ಅಧ್ಯಕ್ಷೆ ಸುಶೀಲಾ, ಪ್ರಭಾರಿ ಆಯುಕ್ತ ಶೇಕ್ ಪೀರೋಜ್ ಸೇರಿದಂತೆ ನಗರಸಭೆ ಸದಸ್ಯರು ಹಾಗೂ ನಗರಸಭೆ ನೀರು ಸರಬರಾಜು ವಿಭಾಗದ ಸಿಬ್ಬಂದಿ ಇದ್ದರು.
3 ದಿನಗಳಿಗೊಮ್ಮೆ ನೀರು ಬಿಡಿ: ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ಎರಡೂ ನಗರಗಳಿಗೂ ಕುಡಿಯುವ ನೀರು ಸರಬರಾಜು ಮಾಡುವ ಜಕ್ಕಲಮಡಗು ಜಲಾಶಯ ಇದೇ ಮೊದಲ ಬಾರಿಗೆ ತುಂಬಿದೆ. ಸದ್ಯ ದೊಡ್ಡಬಳ್ಳಾಪುರ ನಗರದಲ್ಲಿ 5 ದಿನಗಳಿಗೆ ಒಮ್ಮೆ ನಳಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತದೆ. ಈಗ ಜಲಾಶಯ ಕೋಡಿ ಬಿದ್ದಿರುವುದರಿಂದ ಮುಂದಿನ ದಿನಗಳಲ್ಲಿ 3 ದಿನಗಳಿಗೆ ಒಮ್ಮೆ ನೀರು ಸರಬರಾಜು ಮಾಡಬೇಕು ಎನ್ನುವುದು ನಾಗರಿಕರ ಒತ್ತಾಯವಾಗಿದೆ.