Advertisement

ಕುಡಿಯುವ ನೀರು, ಮರಳು ಸಮಸ್ಯೆ ಪರಿಹಾರ ಯತ್ನ

01:00 AM Mar 20, 2019 | Team Udayavani |

ಉಡುಪಿ: ಉಡುಪಿ ಜಿಲ್ಲೆಯ ಕೆಲವು ಗ್ರಾಮ ಪಂಚಾಯತ್‌ಗಳಲ್ಲಿ ಉಂಟಾಗಿರುವ ಕುಡಿಯುವ ನೀರಿನ ಸಮಸ್ಯೆ ಹಾಗೂ ಸಿಆರ್‌ಝಡ್‌ ವ್ಯಾಪ್ತಿಯಲ್ಲಿರುವ ಮರಳು ಸಮಸ್ಯೆಯ ಪರಿಹಾರಕ್ಕಾಗಿ ಜಿಲ್ಲಾಡಳಿತ ತನ್ನ ಮಿತಿಯಲ್ಲಿ ಪ್ರಯತ್ನ ನಡೆಸಲಿದೆ. ಈ ಕಾರಣಗಳಿಗೆ ಮತದಾನ ಬಹಿಷ್ಕಾರಕ್ಕೆ ಯಾರೂ ಮುಂದಾಗಬಾರದು ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ,  ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಮನವಿ ಮಾಡಿದ್ದಾರೆ.

Advertisement

ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿ, “ಜಿಲ್ಲೆಯ 4 ಗ್ರಾ.ಪಂ.ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿರುವ ಹಾಗೂ ಇತರ ಕೆಲವೆಡೆ ಸಾಧಾರಣ ಸಮಸ್ಯೆ ಇರುವ ಮಾಹಿತಿ ಬಂದಿದೆ. ಸ್ಥಳೀಯ ಮಟ್ಟದಲ್ಲಿಯೇ ಇಂತಹ ಸಮಸ್ಯೆ ಪರಿಹರಿಸಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ.

ಅಗತ್ಯವಿರುವಲ್ಲಿ ಕೊಳವೆಬಾವಿ, ಟ್ಯಾಂಕರ್‌ ಮೂಲಕ ನೀರು ಪೂರೈಕೆಗೆ  ತಹಶೀಲ್ದಾರ್‌ಗಳಿಗೆ ಸೂಚನೆ ನೀಡಲಾಗಿದೆ. ಮರಳು ಸಮಸ್ಯೆಯನ್ನು ಕಾನೂನಿನ ಇತಿಮಿತಿಯಲ್ಲಿ ಬಗೆಹರಿಸಲಾಗುವುದು’ ಎಂದರು.

“ಸರ್ವಜನೋತ್ಸವ’ ಸಂಘಟಕರ ವಿರುದ್ಧ ಕ್ರಮ 
ನೀತಿಸಂಹಿತೆ ಜಾರಿ ಬಳಿಕವೂ ರಾಜಕೀಯ ಪಕ್ಷಗಳ ಪಾಲ್ಗೊಳ್ಳುವಿಕೆಯಲ್ಲಿ ಸಹಬಾಳ್ವೆ ಸಂಘಟನೆ ವತಿಯಿಂದ ನಡೆದ ಸರ್ವಜನೋತ್ಸವ ಕಾರ್ಯಕ್ರಮಕ್ಕೆ ಅನುಮತಿ ನೀಡಿರುವ ಕುರಿತು ಪ್ರಶ್ನಿಸಿದಾಗ “ಷರತ್ತುಗಳನ್ನು ವಿಧಿಸಿ ಅನುಮತಿ ನೀಡಲಾಗಿತ್ತು. ಆದರೆ ಅದರಲ್ಲಿ ರಾಜಕೀಯ ಪಕ್ಷಗಳ ಮುಖಂಡರು ಕೂಡ ಪಾಲ್ಗೊಂಡಿರುವ ದೂರುಗಳು ಬಂದಿವೆ. ಕಾರ್ಯಕ್ರಮವನ್ನು ಚುನಾವಣಾ ವೀಕ್ಷಕರು ಖುದ್ದಾಗಿ ಗಮನಿಸಿದ್ದಾರೆ. ವೀಡಿಯೋ ಚಿತ್ರೀಕರಣ ಕೂಡ ಇದೆ. ನಿಯಮ ಉಲ್ಲಂಘನೆ ಖಚಿತವಾದರೆ ಆ ಕಾರ್ಯಕ್ರಮದ ಖರ್ಚನ್ನು ರಾಜ ಕೀಯ ಪಕ್ಷಗಳ ವೆಚ್ಚದ ಖಾತೆಗೆ ಹಾಕಲಾಗುವುದು. ಸಂಘಟಕರ ವಿರುದ್ಧವೂ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಹೇಳಿದರು.

ಸ್ವೀಪ್‌ ಮೂಲಕ ನಡೆಸಿದ ಮತದಾನ ಪ್ರಾತ್ಯಕ್ಷಿಕೆಯಲ್ಲಿ ಇದುವರೆಗೆ 40,000 ಮಂದಿ ಅಣಕು ಮತದಾನ ಮಾಡಿದ್ದಾರೆ. ಸುವಿಧಾ, ಚುನಾವಣಾ ಸೇರಿದಂತೆ ವಿವಿಧ ಆ್ಯಪ್‌ಗ್ಳು ಹಾಗೂ ವೋಟರ್‌ ಹೆಲ್ಪ್ಲೈನ್‌ ಮೂಲಕ ಮಾಹಿತಿ ನೀಡಲಾಗುತ್ತಿದೆ ಎಂದು ತಿಳಿಸಿದರು.

Advertisement

42 ಪ್ರಕರಣ; 17.81 ಲ.ರೂ. ಮದ್ಯ ವಶ
ಜಿಲ್ಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿ ಇದುವರೆಗೆ 42 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಇದರಲ್ಲಿ 39 ಅಬಕಾರಿ ಇಲಾಖೆಗೆ ಹಾಗೂ 3 ಪೊಲೀಸ್‌ ಇಲಾಖೆಗೆ ಸಂಬಂಧಿಸಿದ ಪ್ರಕರಣಗಳು. 17.81 ಲ.ರೂ. ಮೌಲ್ಯದ ಒಟ್ಟು 5,429 ಲೀ. ಮದ್ಯ, 1.50 ಲ.ರೂ ನಗದು, 1 ಟ್ರಕ್‌, 5 ದ್ವಿಚಕ್ರ ವಾಹನಗಳು, 30 ಟನ್‌ ಅಕ್ಕಿ, 3 ಲಾರಿಗಳು, 1 ಬೊಲೆರೊ ವಾಹನಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಇದಲ್ಲದೆ ಸಿ ವಿಜಿಲ್‌ ಆ್ಯಪ್‌ ಮೂಲಕ 29 ಹಾಗೂ ಹೆಲ್ಪ್ಲೈನ್‌ ಮೂಲಕ 22 ದೂರುಗಳನ್ನು ಸ್ವೀಕರಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಸೈನಿಕರಿಗೆ ಇಟಿಪಿಬಿಎಸ್‌ ತಂತ್ರಜ್ಞಾನ
ಸೈನಿಕರು ಇಟಿಪಿಬಿಎಸ್‌ ತಂತ್ರಾಂಶದ ಮೂಲಕ ಮತ ಚಲಾಯಿಸಲು ಅನುಕೂಲ ವಾಗುವಂತೆ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ 24 ಗಂಟೆಗಳೊಳಗೆ ಸೈನ್ಯದ ಘಟಕದ ಮುಖ್ಯಸ್ಥರಿಗೆ ಮತಪತ್ರವನ್ನು ಆನ್‌ಲೈನ್‌ ಮೂಲಕ ರವಾನಿಸಲಾಗುತ್ತದೆ. ಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣಾ ಕರ್ತವ್ಯ ನಿರತ ಮತದಾರರಿಗೆ ಚುನಾವಣಾ ಕರ್ತವ್ಯ ದೃಢಪತ್ರ (ಇಡಿಸಿ) ಹಾಗೂ ಕ್ಷೇತ್ರದ ಹೊರಗೆ ಚುನಾವಣಾ ಕರ್ತವ್ಯ ನಿರ್ವಹಿಸುವ ಮತದಾರರಿಗೆ ಅಂಚೆ ಮತ ಪತ್ರ ಮುದ್ರಣ ವ್ಯವಸ್ಥೆಯನ್ನು ಪ್ರತ್ಯೇಕವಾಗಿ ಮಾಡಲಾಗುತ್ತದೆ. ಬ್ಯಾಲೆಟ್‌ ಯೂನಿಟ್‌ ಮತಪತ್ರವನ್ನು ಚುನಾವಣಾ ಆಯೋಗ ಸೂಚಿಸುವ ಸರಕಾರಿ ಮುದ್ರಣಾಲಯದಲ್ಲಿ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ನಿಯಂತ್ರಣ  ಕೊಠಡಿಗಳು

ಸಾರ್ವಜನಿಕರು ಚುನಾವಣಾ ನೀತಿಸಂಹಿತೆ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಲು ಅನುಕೂಲ ವಾಗುವಂತೆ ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಕಂಟ್ರೋಲ್‌ ರೂಮ್‌ಗಳನ್ನು ತೆರೆಯಲಾಗಿದೆ. 

ಜಿಲ್ಲಾಧಿಕಾರಿ ಕಚೇರಿ – 1950

ಕಾರ್ಕಳ ತಾಲೂಕು ಕಚೇರಿ – 08258 230201 

ಕುಂದಾಪುರ ತಾಲೂಕು ಕಚೇರಿ-  08254 298058 

ಉಡುಪಿ ತಾಲೂಕು ಕಚೇರಿ –  0820 2521299 

ಕಾಪು ತಾಲೂಕು ಕಚೇರಿ-  0820 2551344, 2551345, 

ಬೈಂದೂರು ತಾಲೂಕು ಕಚೇರಿ- 08254 252057, 251657, 251857

Advertisement

Udayavani is now on Telegram. Click here to join our channel and stay updated with the latest news.

Next