Advertisement

ದಟ್ಟ: ಟ್ಯಾಂಕ್‌ ಇದ್ದರೂ ನೀರು ಬಿಡುತ್ತಿಲ್ಲ

08:20 AM Apr 27, 2018 | Karthik A |

ಕೆಯ್ಯೂರು: ಕೆಯ್ಯೂರು ಗ್ರಾ.ಪಂ. ವ್ಯಾಪ್ತಿಯ ದಟ್ಟ ಎಂಬಲ್ಲಿ ಲಕ್ಷಾಂತರ ರೂ. ವ್ಯಯಿಸಿ ನಿರ್ಮಿಸಿದ ಕುಡಿಯುವ ನೀರಿನ ಟ್ಯಾಂಕ್‌ ಬಳಸದೆ ಬರೋಬ್ಬರಿ ಮೂರು ವರ್ಷ ಸಂದಿದೆ. ಈ ಪರಿಸರದ 40ಕ್ಕೂ ಅಧಿಕ ಮನೆಗಳಿಗೆ ಕುಡಿಯುವ ನೀರಿನ ಕೊರತೆ ಇದ್ದರೂ ಸ್ಥಳೀಯಾಡಳಿತ ಟ್ಯಾಂಕ್‌ ಸದ್ಬಳಕೆಗೆ ಚಿಂತನೆ ನಡೆಸಿಲ್ಲ. ಸುಸಜ್ಜಿತ ಟ್ಯಾಂಕ್‌ ಇದ್ದರೂ, ಜನರಿಗೆ ಕುಡಿಯುವ ನೀರಿನ ಬವಣೆ ನೀಗದ ಸ್ಥಿತಿ ಇಲ್ಲಿನದು.

Advertisement

12 ಲಕ್ಷ ರೂ. ಖರ್ಚು
2012-13ನೇ ಸಾಲಿನಲ್ಲಿ ಜಿ.ಪಂ. ವತಿಯಿಂದ ಅಂದಾಜು 12 ಲಕ್ಷ ರೂ. ವೆಚ್ಚದಲ್ಲಿ ದಟ್ಟ ಪರಿಸರದಲ್ಲಿ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳಿಸಲಾಗಿತ್ತು. ಈ ಅನುದಾನದಲ್ಲಿ ಕೊಳವೆಬಾವಿ, ಪೈಪ್‌ಲೈನ್‌, ವಿದ್ಯುತ್‌ ಸಂಪರ್ಕ, ನೀರು ಸಂಗ್ರಹಣ ಟ್ಯಾಂಕ್‌ ನಿರ್ಮಿಸಲಾಗಿತ್ತು. ಕಾಮಗಾರಿ ಪೂರ್ಣಗೊಂಡ ಮೊದಲ ಎರಡು ವರ್ಷದಲ್ಲಿ 30 ಸಾವಿರ ಲೀಟರ್‌ ಸಾಮರ್ಥ್ಯದ ಟ್ಯಾಂಕ್‌ನಿಂದ ನಳ್ಳಿ ಮೂಲಕ ನೀರು ಪೂರೈಸಲಾಗುತಿತ್ತು.

ಎಲ್ಲಿಗೆ ಅನುಕೂಲ?
ಈ ಟ್ಯಾಂಕಿಯಿಂದ ಕೆಯ್ಯೂರು ಗ್ರಾಮದ ದಟ್ಟ, ಪಾತುಂಜ, ಸಂತೋಷ್‌ನಗರ, ಸಣಂಗಲ ಮೊದಲಾದೆಡೆಯ 40 ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸಲಾಗಿತ್ತು. ಇಲ್ಲಿ ಪರಿಶಿಷ್ಟ ಜಾತಿ ಸಮುದಾಯದ ಮನೆಗಳು ಅತ್ಯಧಿಕ ಸಂಖ್ಯೆಯಲ್ಲಿವೆ. ಬಹುತೇಕ ಮನೆಗಳಿಗೆ ಕುಡಿಯುವ ನೀರಿಗೆ ನಳ್ಳಿ ಸಂಪರ್ಕವೇ ಆಧಾರವಾಗಿದೆ. ಪ್ರತಿ ನಳ್ಳಿ ಸಂಪರ್ಕದಾರರು ನಿಗದಿತ ದರವಾಗಿ 100 ರೂ., ಹೆಚ್ಚು ನೀರು ಬಳಸಿದರೆ, ಹೆಚ್ಚುವರಿ ಮೊತ್ತವನ್ನು ಕೆಯ್ಯೂರು ಗ್ರಾ.ಪಂ.ಗೆ ಪಾವತಿಸುತ್ತಾರೆ.

ನೀರು ಹರಿಸದೆ ಮೂರು ವರ್ಷ
ಟ್ಯಾಂಕಿ ಮೂಲಕ ಹರಿಯುವ ನೀರು ಎಲ್ಲ ಮನೆಗಳಿಗೆ ಸಮರ್ಪಕವಾಗಿ ತಲುಪುತ್ತಿಲ್ಲ ಎಂಬ ಕಾರಣ ಒಡ್ಡಿ ಮೂರು ವರ್ಷಗಳ ಹಿಂದೆ ಟ್ಯಾಂಕ್‌ನಲ್ಲಿ ನೀರು ಸಂಗ್ರಹಿಸುವುದನ್ನು ಸ್ಥಗಿತಗೊಳಿಸಲಾಗಿದೆ. ಟ್ಯಾಂಕಿ ಮೂಲಕ ಮನೆಗಳಿಗೆ ನೀರು ಹರಿಸುವುದನ್ನು ಬಿಟ್ಟು, ಕೊಳವೆ ಬಾಯಿಂದಲೇ ನೇರವಾಗಿ ನಳ್ಳಿ ಸಂಪರ್ಕ ಕಲ್ಪಿಸಲಾಗಿದೆ. ಹಾಗಾಗಿ ಲಕ್ಷಾಂತರ ರೂ.ವೆಚ್ಚದ ಟ್ಯಾಂಕ್‌ ಪ್ರಯೋಜನಕ್ಕೆ ಬಾರದೆ ಅನಾಥ ಸ್ಥಿತಿಯಲ್ಲಿ ಇದೆ.

ವಿದ್ಯುತ್‌ ಸಮಸ್ಯೆ
ವಿದ್ಯುತ್‌ ಕಣ್ಣಾಮುಚ್ಚಾಲೆ ಪರಿಣಾಮ, ಇಲ್ಲಿ ಎರಡು ದಿನಕ್ಕೊಮ್ಮೆ ನೀರು ಬರುತ್ತಿದೆ. ವಿದ್ಯುತ್‌ ಕೈ ಕೊಟ್ಟರೆ, ಕೊಳವೆಬಾವಿ ಚಾಲೂ ಆಗದೆ ನೀರು ಪೂರೈಕೆ ಸ್ಥಗಿತಗೊಳ್ಳುತ್ತದೆ. ಹಾಗಾಗಿ ಇಲ್ಲಿ ವಿದ್ಯುತ್‌ ಲಭ್ಯ ಇರುವ ಸಂದರ್ಭದಲ್ಲಿ ಟ್ಯಾಂಕಿಗೆ ನೀರು ಹಾಯಿಸಿ, ವಿದ್ಯುತ್‌ ಇಲ್ಲದಿದ್ದಾಗ ಟ್ಯಾಂಕ್‌ ಮೂಲಕ ಹರಿಸಿದಲ್ಲಿ ಜನರಿಗೆ ಅನುಕೂಲ ಅನ್ನುತ್ತಾರೆ ಸ್ಥಳೀಯ ನಿವಾಸಿಗಳು.

Advertisement

ಸದ್ಬಳಕೆಗೆ ಪ್ರಯತ್ನ
ಟ್ಯಾಂಕ್‌ ತಗ್ಗು ಪ್ರದೇಶದಲ್ಲಿ ಇರುವ ಕಾರಣ, ಎಲ್ಲ ಮನೆಗಳಿಗೆ ನೀರು ಸರಾಗವಾಗಿ ಹರಿಯುವಲ್ಲಿ ತೊಡಕಾಗಿದೆ. ಅಲ್ಲಿನ ಸಮಸ್ಯೆ ಪರಿಹರಿಸಿ, ಟ್ಯಾಂಕ್‌ ಸದ್ಬಳಕೆ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ.
– ಸುಬ್ರಹ್ಮಣ್ಯ ಕೆ.ಎಂ. ಪ್ರಭಾರ ಪಿಡಿಒ, ಕೆಯ್ಯೂರು ಗ್ರಾ.ಪಂ.

— ಗೋಪಾಲಕೃಷ್ಣ  ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next