Advertisement

ಕುಡಿವ ನೀರಿನ ಕರ ಅಲ್ಪ ಏರಿಕೆಗೆ ತೀರ್ಮಾನ

05:21 PM Feb 06, 2018 | |

ದಾವಣಗೆರೆ: ಸದ್ಯ ನಗರಪಾಲಿಕೆ ವ್ಯಾಪ್ತಿಯಲ್ಲಿ ಸಮರ್ಪಕ ಕುಡಿಯುವ ನೀರು ಪೂರೈಕೆಯಾಗದಿದ್ದರೂ ಸರ್ಕಾರದ ಸೂಚನೆ ಹಿನ್ನೆಲೆಯಲ್ಲಿ ನೀರಿನ ಕರ ಅಲ್ಪ ಪ್ರಮಾಣ ಏರಿಸಿ, ಅದನ್ನೇ ಮನ್ನಾ ಮಾಡಲು ಕೋರಿ ಸರ್ಕಾರಕ್ಕೆ ಮನವಿ ಸಲ್ಲಿಸಲು ಸೋಮವಾರ ನಡೆದ ಮಹಾನಗರ ಪಾಲಿಕೆ ಸಾಮಾನ್ಯ ಸಭೆ ತೀರ್ಮಾನಿಸಿದೆ.

Advertisement

ಮೇಯರ್‌ ಅನಿತಾಬಾಯಿ ಮಾಲತೇಶ್‌ ಅಧ್ಯಕ್ಷತೆಯಲ್ಲಿ ನಗರಪಾಲಿಕೆಯ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ನೀರಿನ ಕರ ಏರಿಕೆ
ವಿಷಯ ಪ್ರಸ್ತಾಪ ಮಾಡಿದಾಗ ಮಾತನಾಡಿದ ಕಾಂಗ್ರೆಸ್‌ನ ಹಿರಿಯ ಸದಸ್ಯ ಶಿವನಹಳ್ಳಿ ರಮೇಶ್‌, 2014ರಿಂದಲೂ ಮಳೆ ಕೊರತೆಯಿಂದಾಗಿ ಜನರಿಗೆ
ಸರಿಯಾಗಿ ನೀರು ಕೊಡಲಾಗುತ್ತಿಲ್ಲ. ಈಗಲೂ ಸಹ ವಾರಕೊಮ್ಮೆ ನೀರು ಕೊಡುತ್ತಿದ್ದೇವೆ. ಇಂತಹ ಸಮಯದಲ್ಲಿ ಕರ ಏರಿಕೆ ಮಾಡುವುದು ಸರಿಯಲ್ಲ
ಎಂದರು.

ಈಗ ಒಂದು ವರ್ಷಕ್ಕೆ ಮನೆಗಳಿಗೆ 2,100, ವಾಣಿಜ್ಯ ಬಳಕೆಗೆ 8,500 ರೂ. ತೆರಿಗೆ ವಸೂಲಿ ಮಾಡಲಾಗುತ್ತಿದೆ. ಅಲ್ಲಿಗೆ ಮನೆಗಳಿಗೆ ಒಮ್ಮೆ ನೀರು
ಕೊಟ್ಟರೆ 44 ರೂ. ವಸೂಲು ಮಾಡಿದಂತಾಗುತ್ತದೆ. ಪೂರೈಕೆಯಾಗುವ ನೀರು ಸಾಕಾಗದೆ ಜನ ಟ್ಯಾಂಕರ್‌ ನೀರಿಗೆ ಮೊರೆ ಹೋಗಿದ್ದಾರೆ. ಇದಕ್ಕಾಗಿ
ಅವರು ಸಾವಿರಾರು ರೂ. ಖರ್ಚು ಮಾಡುತ್ತಿದ್ದಾರೆ. 65 ಕೋಟಿ ರೂ. ಅನುದಾನದಲ್ಲಿ ಜಲಸಿರಿ ಯೋಜನೆ ಅನುಷ್ಠಾನ ಆಗಲಿದೆ. ತುಂಗಭದ್ರಾ
ನದಿಗೆ ಬ್ಯಾರೇಜ್‌ ನಿರ್ಮಾಣ ಮಾಡಿ, ಪ್ರತೀ ಮನೆಗೂ ನಲ್ಲಿ ಅಳವಡಿಸಿ, ನಿರಂತರ ನೀರು ಪೂರೈಕೆ ಮಾಡಲಾಗುವುದು. ಆಗ ಕರ ಏರಿಕೆ
ಮಾಡಬಹುದು ಎಂದರು. 

ರಮೇಶ್‌ ಸಲಹೆಗೆ ಧ್ವನಿಗೂಡಿಸಿದ ದಿನೇಶ್‌ ಕೆ. ಶೆಟ್ಟಿ, ಬಿಜೆಪಿ ಸರ್ಕಾರ ಇದ್ದಾಗ ಏಕಾಏಕಿ 600 ರೂಪಾಯಿಯಿಂದ 2,100 ರೂ.ಗೆ ಕರ ಏರಿಸಿತು.
ನಾವೂ ಅದನ್ನು ಒಪ್ಪಿದೆವು. ಒಪ್ಪಬಾರದಿತ್ತು ಎಂದರು. ನೀರಿನ ಕರ ಏರಿಕೆ ಮಾಡದೇ ಇದ್ದರೆ ನಮಗೆ ಬರುವ ಅನುದಾನ ಕಡಿಮೆಯಾಗಲಿದೆ. ಜೊತೆಗೆ ಆಡಳಿತಾತ್ಮಕ ವಿಷಯಗಳಲ್ಲೂ ತೊಂದರೆ ಖಚಿತ. ಈ ಹಿನ್ನೆಲೆಯಲ್ಲಿ ಏರಿಕೆ ಅನಿವಾರ್ಯ. ಅಲ್ಪ ಪ್ರಮಾಣದ ಕರ ಏರಿಕೆ ಮಾಡಿ, ಅದನ್ನು ಮನ್ನಾ ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಬಹುದು ಎಂದು ಆಯುಕ್ತ ಮಂಜುನಾಥ್‌ ಬಳ್ಳಾರಿ ನೀಡಿದ ಸಲಹೆಗೆ ಸಭೆ ಒಪ್ಪಿಗೆ ಸೂಚಿಸಿತು.
ಉಪ ಮೇಯರ್‌ ನಾಗರತ್ನಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷರು, ಸದಸ್ಯರು, ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ರಾಜೀನಾಮೆ ಇಂಗಿತ…
ನಾಮನಿರ್ದೇಶಿತ ಸದಸ್ಯ ಎಲ್‌.ಎಂ. ಹನುಮಂತಪ್ಪ ಸಭೆಯ ಆರಂಭದಲ್ಲಿ ಮಾತನಾಡಿ, ನಾನು ಪೌರ ಕಾರ್ಮಿಕರ ಮುಖಂಡ. ನನ್ನ ಜೊತೆ ನೂರಾರು ಪೌರ ಕಾರ್ಮಿಕರಿದ್ದಾರೆ. ಅವರಿಗೆ ನ್ಯಾಯ ಒದಗಿಸಬೇಕು. ಆದರೆ, ಈ ಅಜೆಂಡಾದಲ್ಲಿ ಅವರ ವಿಷಯವೇ ಇಲ್ಲ. ಇದಕ್ಕಾಗಿ ನಾನು
ಅಜೆಂಡಾ ಕಾಪಿ ವಾಪಸ್‌ ಮಾಡುತ್ತೇನೆ ಎಂದು ಮೇಯರ್‌ ಕೈಗಿತ್ತು, ಸಚಿವರು ಬಂದ ನಂತರ ಅಧಿಕಾರ ಇಲ್ಲದ ಈ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಸಭೆಯಿಂದ ಹೊರನಡೆಯಲು ಮುಂದಾದರು. ಆಗ ಬಿಜೆಪಿ ಸದಸ್ಯ ಕುಮಾರ್‌ ಅವರನ್ನು ತಡೆದರು.

Advertisement

ಅಧಿಕಾರಿಗಳಿಂದ 11 ಜನರ ಕೆಲಸಕ್ಕೆ ಕುತ್ತು…
ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿದ್ದ 11 ಜನ ಪೌರ ಕಾರ್ಮಿಕರು ಖಾಯಂ ಆಗದೇ ಇರಲು ಕಾರಣವಾಗಿದ್ದು ನಗರಪಾಲಿಕೆ ಅಧಿಕಾರಿಗಳೇ ಹೊರತು, ಗುತ್ತಿಗೆ ಪಡೆದ ಸಂಸ್ಥೆಯಲ್ಲ ಎಂಬುದು ಸಾಮಾನ್ಯ ಸಭೆಯಲ್ಲಿ ಬೆಳಕಿಗೆ ಬಂತು. ಗುತ್ತಿಗೆ ಪೌರ ಕಾರ್ಮಿಕರನ್ನು ಕಾಯಂಗೊಳಿಸಲು ಸರ್ಕಾರ ಅಧಿಕಾರಿಗಳಿಂದ ಪಟ್ಟಿ ಕೇಳಿತ್ತು. ಪಟ್ಟಿ ಸಲ್ಲಿಸುವಾಗ ಅಧಿಕಾರಿಗಳು ಗುತ್ತಿಗೆ ಸಂಸ್ಥೆ ನೀಡಿದ್ದ ಪೌರ ಕಾರ್ಮಿಕರ ಪಟ್ಟಿಯನ್ನು ಯಥಾವತ್ತಾಗಿ ಕಳುಹಿಸಿದ್ದಾರೆ. ಗುತ್ತಿಗೆ ಸಂಸ್ಥೆ 11 ಪೌರ ಕಾರ್ಮಿಕರನ್ನು ಕಾರ್ಮಿಕರು ಎಂದು ಗುರುತಿಸದೆ ಮೇಲ್ವಿಚಾರಕರು ಎಂದು ಹೇಳಿತ್ತು. ಅಧಿಕಾರಿಗಳು ಇದನ್ನು ಸರಿಪಡಿಸದೆ ಕಳುಹಿಸಿದ್ದರಿಂದ ಅವರು ಕಾಯಂ ಆಗಲಿಲ್ಲ. ಕೊನೆಗೆ ಸಚಿವ ಮಲ್ಲಿಕಾರ್ಜುನ್‌ ಮಧ್ಯ ಪ್ರವೇಶಮಾಡಿ ಕಾಯಂ ಮಾಡಲು ಸೂಚಿಸಿದ್ದಾರೆ ಎಂಬುದನ್ನು ರಮೇಶ್‌ ಸಭೆಯ ಗಮನಕ್ಕೆ ತಂದರು. 

34ನೇ ವಾರ್ಡ್‌ಗ್ಯಾಕೆ 90 ಲಕ್ಷ…
ನಗರ ದೇವತೆ ದುಗ್ಗಮ್ಮನ ಜಾತ್ರೆ ಸಿದ್ಧತೆ ಕುರಿತು ಚರ್ಚಿಸುವ ವೇಳೆ ಸಿಪಿಐ ಸದಸ್ಯ ಉಮೇಶ್‌, ವಾರ್ಡ್‌ ನಂ.34 ಒಂದಕ್ಕೆ 90 ಲಕ್ಷ ರೂಪಾಯಿ ಅನುದಾನ ನೀಡಿರುವುದು ಏಕೆ? ಅಲ್ಲಿ ಮಾತ್ರ ಜಾತ್ರೆ ಮಾಡುತ್ತಾರಾ? ಎಂದು ಖಾರವಾಗಿ ಪ್ರಶ್ನಿಸಿದರು. ಈ ವೇಳೆ ರಮೇಶ್‌ ಮಾತನಾಡಿ, ದುಗ್ಗಮ್ಮನ ಜಾತ್ರೆ ಮಾಡುವುದು ಹಳೆ ಊರು ಮತ್ತು ಹೊಸ ಊರಿನ ಭಾಗದ ಕೆಟಿಜೆ ನಗರ, ನಿಟುವಳ್ಳಿ, ವಿನೋಬ ನಗರ, ಭಗತ್‌ ಸಿಂಗ್‌ ನಗರ.
ಹಾಗಾಗಿ 34ನೇ ವಾರ್ಡ್‌ಗೆ ಹೆಚ್ಚಿನ ಅನುದಾನ ನೀಡಲಾಗಿದೆ ಎಂದರು. ಇದಕ್ಕೆ ತೃಪ್ತರಾಗದ ಉಮೇಶ್‌, ಅಲ್ಲಿ ಮಾತ್ರ ಹಬ್ಬ ಮಾಡ್ತಾರಾ? ಎಂದು ಪುನಃ ಪ್ರಶ್ನಿಸಿದರು. ಆಗ 34ನೇ ವಾರ್ಡ್‌ನ ಸದಸ್ಯ ಆರ್‌. ಶ್ರೀನಿವಾಸ್‌ ಮಾತನಾಡಿ, ನಿಮ್ಮ ವಾರ್ಡ್‌ಗೂ 4 ಲಕ್ಷ ರೂಪಾಯಿ ನೀಡಲಾಗಿದೆ ಎಂದು ಸಮಜಾಯಿಷಿ ನೀಡಿದರು. ಕೊನೆಗೆ ರಮೇಶ್‌, ಇನ್ನಷ್ಟು ಅನುದಾನ ಬೇಕಿದ್ದರೆ ನೀಡಿ ಎಂದು ಹೇಳಿ ವಿಷಯ ಸಮಾಪ್ತಿಗೊಳಿಸಿದರು.

ಸವಾಲು ಹಾಕಿದ ರಮೇಶ್‌
ಬಿಜೆಪಿ ಸದಸ್ಯ ಕುಮಾರ್‌-ರಮೇಶ್‌ ನಡುವಿನ ವಾಕ್ಸಮರ ತಾರರಕ್ಕೇರಿದಾಗ ಕುಮಾರ್‌, ರಮೇಶ್‌ ಅವರು ತಮ್ಮ ವಾರ್ಡ್‌ಗೆ 3 ಕೋಟಿ ರೂಪಾಯಿ
ಸಿಮೆಂಟ್‌ ರಸ್ತೆ ಕಾಮಗಾರಿ ಹಾಕಿಕೊಂಡಿದ್ದಾರೆ. ನನ್ನ ವಾರ್ಡ್‌ಗೆ 25 ಲಕ್ಷ ಮಾತ್ರ ನೀಡಿದ್ದಾರೆ ಎಂದರು. ಆಗ ರಮೇಶ್‌, ನಿನ್ನ ವಾರ್ಡ್‌ನಲ್ಲಿನ
ಸಮಸ್ಯೆ ಬಗೆಹರಿಸು. ಅದು ಬಿಟ್ಟು ಇರಲಾರದ ವಿಷಯ ಮಾತಾಡೀ¤ಯ ಎಂದರು. ಇದಕ್ಕೆ ಎದುರಾಡಿದ ಕುಮಾರ್‌, ನೀವು ಮುಂದೆ
ಗೆಲ್ಲುವುದೇ ಇಲ್ಲ ಎಂದರು. ಆಗ ರಮೇಶ್‌, ಈಗಲೇ ನಾನು ರಾಜೀನಾಮೆ ಕೊಡಲು ಸಿದ್ಧ, ನೀನೂ ರಾಜೀನಾಮೆ ಕೊಡು. ಯಾರು ಗೆಲ್ಲುತ್ತಾರೆ
ನೋಡೋಣ ಎಂದು ಸವಾಲೆಸೆದರು.

ಕುತ್ತಿಗೆಗೆ ಕೈ ಹಾಕಿದರು…
ಸಭೆಯಿಂದ ಹೊರಹೋಗುತ್ತಿದ್ದ ಎಲ್‌.ಎಂ. ಹನುಮಂತಪ್ಪರನ್ನು ತಡೆದ ಬಿಜೆಪಿಯ ಏಕೈಕ ಸದಸ್ಯ ಡಿ.ಕೆ. ಕುಮಾರ್‌, ಪೌರ ಕಾರ್ಮಿಕರ ನಾಯಕ ಹನುಮಂತಪ್ಪ ಅವರಿಗೆ ಸಭೆಯಿಂದ ಹೊರನಡೆಯುವಷ್ಟು ಬೇಸರ ಆಗಿದೆ ಅಂದರೆ ತಿಳ್ಕೊಳ್ಳಿ ಎಂದು ಹರಿಹಾಯ್ದರು. ಈ ವೇಳೆ ಶಿವನಹಳ್ಳಿ ರಮೇಶ್‌, ಎಂ. ಹಾಲೇಶ್‌, ದಿನೇಶ್‌ ಶೆಟ್ಟಿ, ಆವರಗೆರೆ ಉಮೇಶ್‌ ಸೇರಿದಂತೆ ಹಲವು ಸದಸ್ಯರು ಕುಮಾರ್‌ ಬಳಿ ಹೋಗಿ ಸಮಾಧಾನ ಮಾಡಲು ಯತ್ನಿಸಿದರು. ಇದರಿಂದ ಸಮಾಧಾನಗೊಳ್ಳದೇ ಹೋದಾಗ ಹಾಲೇಶ್‌ ಕೈ ಹಿಡಿದು, ಕುತ್ತಿಗೆಗೆ ಕೈ ಹಾಕಿ ಹೊರತಳ್ಳಲು ಯತ್ನಿಸಿದರು. ಮೇಯರ್‌ ಅನಿತಾಬಾಯಿ, ಎಲ್ಲರೂ ತಮ್ಮ ತಮ್ಮ ಆಸನದಲ್ಲಿ ಕುಳಿತುಕೊಳ್ಳಿ ಎಂದು ಸೂಚಿಸಿದರು. ಕೊನೆಗೆ ಎಲ್ಲರೂ ಸಮಾಧಾನದಿಂದ ಕುಳಿತರು.

Advertisement

Udayavani is now on Telegram. Click here to join our channel and stay updated with the latest news.

Next