Advertisement

ಕುಡಿಯುವ ನೀರು ಪೋಲು ನಿಂತಿಲ್ಲ!

11:36 AM Dec 03, 2018 | Team Udayavani |

ಬೀದರ: ಎಲ್ಲ ಜೀವರಾಶಿಗಳಿಗೂ ನೀರು ಅವಶ್ಯಕ. ನೀರಿಲ್ಲದೆ ಯಾರೂ ಬದುಕಲು ಸಾಧ್ಯವಿಲ್ಲ. ಹನಿ ನೀರಿಗೂ ಬೆಲೆ ಇದೆ. ಇಂತಹ ಅಮೂಲ್ಯ ಸಂಪತ್ತು ಅನವಶ್ಯಕವಾಗಿ ಪೋಲಾಗುತ್ತಿದ್ದರೂ ಕೂಡ ಅಧಿಕಾರಿಗಳು ಅಥವಾ ಜನಪ್ರತಿನಿಧಿಗಳು ಗಮನ ಹರಿಸುತ್ತಿಲ್ಲ.

Advertisement

ಎರಡು ತಿಂಗಳಿಂದ ಹಾಲಹಳ್ಳಿ ಸಮೀಪದ ಪಿ.ಜಿ. ಕಾಲೇಜಿನ ಸಮೀಪದ ವಸತಿ ನಿಲಯದ ಹತ್ತಿರ ಕಾರಂಜಾ ಜಲಾಶಯದಿಂದ ಬೀದರ್‌ ನಗರಕ್ಕೆ ಸೇರಬೇಕಿರುವ ಕುಡಿಯುವ ನೀರು ಪ್ರತಿನಿತ್ಯ ಪೋಲಾಗುತ್ತಿದೆ. ಈ ಕುರಿತು ಶನಿವಾರ ಉದಯವಾಣಿಯೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿಗಳು ಕೂಡಲೇ ನೀರು ಪೋಲಾಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿರುವ ಕುರಿತು ಪ್ರತಿಕ್ರಿಯೆ ನೀಡಿದರು. ಆದರೆ, ರವಿವಾರ ಕೂಡ ಪೋಲಾಗುತ್ತಿರುವ ನೀರು ತಡೆಯಲು ಅಧಿಕಾರಿಗಳು ಕಾಳಜಿ ವಹಿಸಿಲ್ಲ. ಪ್ರತಿ ದಿನದಂತೆ ರವಿವಾರ ಕೂಡ ಸಾವಿರಾರು ಲೀಟರ್‌ ನೀರು ಪೋಲಾಗಿದ್ದು, ಸಧ್ಯ ಜಿಲ್ಲೆಯಲ್ಲಿನ ಅಧಿಕಾರಿಗಳು ಯಾರ ಮಾತಿಗೂ ಸೊಪ್ಪು ಹಾಕುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ.

ಹನಿ ನೀರು ಅತೀ ಅಮೂಲ್ಯ ಎಂದು ಭಾಷಣ ಮಾಡುವ ಅಧಿಕಾರಿಗಳು ಹಾಗೂ ಚುನಾಯಿತ ರಾಜಕಾರಣಿಗಳು ವಾಸ್ತವದಲ್ಲಿ ಆ ಕೆಲಸ ಮಾಡುತ್ತಿಲ್ಲ. ಕಳೆದ ವಾರ ಅಣದೂರ ಸೇರಿದಂತೆ ವಿವಿಧ ಗ್ರಾಮಗಳ ಜನರು ಸಹಕಾರ ಸಚಿವ ಬಂಡೆಪ್ಪ ಖಾಶೆಂಪುರ್‌ ಅವರನ್ನು ಭೇಟಿಮಾಡಿ, ಪೋಲಾಗುತ್ತಿರುವ ನೀರು ತಮ್ಮ ಗ್ರಾಮಗಳಿಗೆ ಹರಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಕಳೆದ ವಾರ ಜಿಲ್ಲಾ ಉಸ್ತುವಾರಿ ಸಚಿವರು ಅಧಿಕಾರಿಗಳಿಗೆ ಕರೆ ಮಾಡಿ ಪೋಲಾಗುತ್ತಿರುವ ನೀರಿನ ಸಮಗ್ರ ವರದಿ ನೀಡುವಂತೆ ಸೂಚಿಸಿದ್ದಾರೆ. ಆದರೆ, ಇಂದಿಗೂ ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿಲ್ಲ ಎಂಬುದು ಮೂಲಗಳಿಂದ ತಿಳಿದುಬಂದಿದೆ. ರಾಜಕಾರಣಿಗಳ
ಮಾತಿಗೂ ಜಿಲ್ಲೆಯ ಅಧಿಕಾರಿಗಳು ಸೊಪ್ಪು ಹಾಕುತ್ತಿಲ್ಲ. ಅಧಿಕಾರಿಗಳು ಅಂದಾ ದರ್ಬಾರ್‌ ನಡೆಸುತ್ತಿದ್ದಾರೆ ಎಂದು ಜನರು ಆರೋಪಿಸುತ್ತಿದ್ದಾರೆ.

ನೀರಿನ ಮಹತ್ವ: ಸದ್ಯ ಜಿಲ್ಲೆಯಲ್ಲಿ ಭೀಕರ ಬರಗಾಲ ಎದುರಾಗಿದ್ದು, 400 ಅಡಿ ಆಳದಲ್ಲಿ ಕೂಡ ನೀರು ಸಿಗದ ಸ್ಥಿತಿ  ನಿರ್ಮಾಣಗೊಂಡಿದೆ. ಅನೇಕರು ಕೊಳವೆ ಬಾವಿ ತೋಡಿಸಿ ನೀರು ಸಿಗದೇ ಕಂಗಾಲಾಗಿದ್ದಾರೆ. ಕಾರಂಜಾ ನೀರು ಪೂರೈಕೆ ಮಾಡುವ ಕಡೆಗಳಲ್ಲಿ ಮೂರು ಅಥವಾ ನಾಲ್ಕು ದಿನಗಳಿಗೆ ಒಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ. ಅಧಿಕಾರಿಗಳ ಗಮನಕ್ಕೂ ಬಂದರು ಕೂಡ ನೀರು ಪೋಲಾಗುವುದನ್ನು ತಪ್ಪಿಸುವಲ್ಲಿ ವಿಫಲರಾಗಿದ್ದು, ನೀರಿನ ಮಹತ್ವ ಅಧಿಕಾರಿಗಳಿಗೆ ಗೊತ್ತಿಲ್ಲ, ಅಂತಹ ಅಧಿಕಾರಿಗಳನ್ನು ನೀರು ಇಲ್ಲದ ಕಡೆಗೆ ವರ್ಗಾವಣೆ ಮಾಡಿದರೆ ನೀರಿನ ಮಹತ್ವ ಗೊತ್ತಾಗುತ್ತದೆ ಎಂದು ಅಣದೂರ ಗ್ರಾಮಸ್ಥರು ಮಾತನಾಡಿಕೊಳ್ಳುತ್ತಿದ್ದಾರೆ.

ಸದ್ಯ ನೀರು ಪೋಲಾಗುತ್ತಿರುವ ಕಡೆಗಳಲ್ಲಿ ಕಿಡಿಗೆಡಿಗಳು ಯಾವುದೇ ಸಮಸ್ಯೆ ಉಂಟುಮಾಡಿದರೆ, ಜಿಲ್ಲೆಯ ಲಕ್ಷಾಂತರ ಜನ ಜೀವಕ್ಕೆ ಹಾನಿ ಸಂಭವಿಸಬಹುದಾಗಿದೆ. ಹೆದ್ದಾರಿ ಪಕ್ಕದಲ್ಲಿಯೇ ನೀರು ಪೋಲಾಗುತ್ತಿದ್ದು, ನೀರಿನೊಂದಿಗೆ ಚಲ್ಲಾಟ ಆಡಿದರೆ ಅನಾಹುತ ಕಟ್ಟಿಟ್ಟ ಬುತ್ತಿ. ಕಾರಣ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿರು ಸರ್ಕಾರಕ್ಕೆ ಶಿಫಾರಸು ಮಾಡುಬೇಕು ಎಂಬುದು ಜನರ ಅಭಿಪ್ರಾಯವಾಗಿದೆ.

Advertisement

ಪೋಲಾಗುತ್ತಿರುವ ನೀರು ತಡೆಯುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಧಿಕಾರಿಗಳು ಪರಿಶೀಲಿಸಿ ಸೋಮವಾರ ಸಂಜೆ ವರೆಗೆ ನೀರು ಪೋಲಾಗದಂತೆ ನೋಡಿಕೊಳ್ಳುವುದಾಗಿ ತಿಳಿಸಿದ್ದಾರೆ.
 ಡಾ| ಎಚ್‌.ಆರ್‌. ಮಹಾದೇವ ಜಿಲ್ಲಾಧಿಕಾರಿಗಳು 

ನೀರು ಪೋಲಾಗುತ್ತಿರುವ ಕುರಿತು ಕಳೆದ ವಾರ ಅಣದೂರ ಗ್ರಾಮಸ್ಥರು ಗಮನಕ್ಕೆ ತಂದಿದ್ದಾರೆ. ಅಲ್ಲಿ ಪೋಲಾಗುವ ನೀರು ಗ್ರಾಮಕ್ಕೆ ಹರಿಸಿದರೆ ಗ್ರಾಮದಲ್ಲಿ ನೀರಿನ ಸಮಸ್ಯೆ ಪರಿಹಾರವಾಗುತ್ತದೆ ಎಂದು ತಿಳಿಸಿದ್ದಾರೆ. ಈ ಕುರಿತು ಅಧಿಕಾರಿಗಳಿಗೆ ಪೂರ್ಣ ಮಾಹಿತಿ ನೀಡುವಂತೆ ಅಂದೇ ತಿಳಿಸಿದ್ದೇನೆ. ಯಾವ ಕಾರಣಕ್ಕೆ ನೀರು ಪೋಲಾಗುತ್ತಿದೆ ಯಾರು ಕಾರಣ ಎಂದು ತಿಳಿದುಕೊಂಡು ಯಾವುದೇ ಮುಲಾಜು ಇಲ್ಲದೆ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು. ಅಲ್ಲದೆ, ನಾನು ಖುದ್ದು ಸ್ಥಳಕ್ಕೆ ಭೇಟಿನೀಡಿ
ಪರಿಶೀಲನೆ ನಡೆಸುತ್ತೇನೆ.
 ಬಂಡೆಪ್ಪ ಖಾಶೆಂಪುರ ಜಿಲ್ಲಾ ಉಸ್ತುವಾರಿ ಸಚಿವರು

„ದುರ್ಯೋಧನ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next