ಗೀತೆಯಲ್ಲಿ ಸಂಜಯನು “ಪೃಥಿವೀಪಥೆ’ ಎಂದು ಹೇಳುತ್ತಾನೆ. ಆಗಿನ ರಾಜರು ಹಸ್ತಿನಾಪುರಕ್ಕೆ ಮಾತ್ರ ರಾಜನಲ್ಲ. ಅದು ಜಾಗತಿಕ ಸರಕಾರ. ಜಗತ್ತಿಗೆ ರಾಜ ಒಬ್ಬನೇ. ಹಸ್ತಿನಾಪುರ ಜಾಗತಿಕ ರಾಜಧಾನಿ. ಜಗತ್ತಿನ ಸರಕಾರ ಇದ್ದದ್ದು ಆಗ ಮಾತ್ರ. ಅನಂತರ ಬೇರೆ ಬೇರೆ ದೇಶಗಳಾಗಿ ವಿಭಜನೆಗೊಂಡವು, ಬೇರೆ ಬೇರೆ ದೇಶಗಳಿಗೆ ಬೇರೆ ಬೇರೆ ರಾಜರಾದರು. ಮಹಾಭಾರತ ಯುದ್ಧ ಜಾಗತಿಕ ಯುದ್ಧ. ಆದ್ದರಿಂದಲೇ ಈ ಯುದ್ಧದಲ್ಲಿ ಅಫಘಾನಿಸ್ಥಾನ, ರಶ್ಯಾ, ಇಂಡೋನೇಶ್ಯಾದಿಂದ ಸೈನಿಕರು, ರಾಜರು ಪಾಲ್ಗೊಂಡಿದ್ದರು. “ಮಹೀಪತೇ’ ಎಂದೂ ಸಂಜಯ ಧೃತರಾಷ್ಟ್ರನನ್ನು ಉದ್ದೇಶಿಸಿ ಹೇಳುತ್ತಾನೆ. ಜಾಗತಿಕ ಸ್ತರದ ರಾಜ ಎನ್ನುವುದನ್ನು ಈ ಮಾತೂ ಪುಷ್ಟೀಕರಿಸುತ್ತದೆ. ಅರ್ಜುನನ ರಥವನ್ನು ಹೇಳುವಾಗ ಕಪಿಧ್ವಜ ಎಂದು ಕರೆದಿದ್ದಾನೆ. ಇದಕ್ಕೂ ಕಾರಣವಿದೆ. ಹನುಮಂತ ವಿಜಯದ ಸಂಕೇತ. ಪಾಂಡವರು ಮುಂದೆ ವಿಜಯ ಪತಾಕೆ ಹಾರಿಸುವವರು ಎಂಬರ್ಥದಲ್ಲಿ ಈ ಮಾತು ಹೊರಹೊಮ್ಮಿದೆ. ಯುದ್ಧದಲ್ಲಿ ರಾಜರ ಸಂಖ್ಯೆ ಕಡಿಮೆ, ಸೈನಿಕರ ಸಂಖ್ಯೆ ಹೆಚ್ಚು. ಅರ್ಜುನನ ಅಹಂ ಮರ್ದನಕ್ಕಾಗಿ ಶ್ರೀಕೃಷ್ಣ ಅರ್ಜುನನ ರಥವನ್ನು ಬೀಷ್ಮದ್ರೋಣರ ಎದುರು ನಿಲ್ಲಿಸಿದಾಗ ಆತನಿಗೆ ಅಜ್ಜ, ಆಚಾರ್ಯ, ಮಾವ, ಚಿಕ್ಕಪ್ಪ, ದೊಡ್ಡಪ್ಪನವರೇ ಕಾಣುತ್ತಾರೆ. ಇದು ಹೇಗೆ ಸಾಧ್ಯ? ಭಯದಿಂದಾಗಿ ಎಲ್ಲರೂ ಸಂಬಂಧಿಕರಾಗಿ ಕಾಣುತ್ತಾರೆ. ನಾನೀಗ ಕುಟುಂಬವನ್ನೇ ನಾಶ ಮಾಡುತ್ತಿದ್ದೇನೆ ಎಂದು ಅರ್ಜುನ ಹೇಳುತ್ತಾನೆ.
-ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,
-ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811