Advertisement

ಆಗಾಗ ನೀರು ಕುಡಿಯಿರಿ ಆರೋಗ್ಯವಾಗಿರಿ

06:30 AM Aug 20, 2017 | |

ಮನುಷ್ಯ ಆಹಾರ ಸೇವಿಸುವುದು ಎಷ್ಟು ಮುಖ್ಯವೋ, ನೀರನ್ನು ಕುಡಿಯುವುದೂ ಅಷ್ಟೇ ಪ್ರಮುಖವಾಗಿದೆ. ಆಗಾಗ ನೀರು ಕುಡಿಯುವುದರಿಂದ ದೇಹದಲ್ಲಿ ದ್ರವಾಂಶ ಪ್ರಮಾಣ ಸಮರ್ಪಕವಾಗಿರುತ್ತದೆ. 

Advertisement

ನೀರು ಅಥವಾ ದ್ರವ ಪದಾರ್ಥಗಳ ಸೇವನೆಗೆ ಸಂಬಂಧಿಸಿದಂತೆ ಸಾಮಾನ್ಯವಾಗಿ ಕಾಡುವ ಪ್ರಶ್ನೆಗಳಿಗೆ ಉತ್ತರ ಹಾಗೂ ಕೆಲವು ಸಲಹೆಗಳು ಇಲ್ಲಿವೆ;
– ದ್ರವ ಪದಾರ್ಥಗಳ ಸೇವನೆಗೆ ಸಂಬಂಧಿಸಿದಂತೆ ಮೊದಲ ಮತ್ತು ಆದ್ಯತೆಯ ಸಲಹೆಯೆಂದರೆ; ನಮಗೆ ಸುಲಭವಾಗಿ ಲಭ್ಯವಿರುವ ನೀರನ್ನು ಕುಡಿಯುವುದು. ಇದರೊಂದಿಗೆ ಹಾಲು ಮತ್ತು ಹಣ್ಣಿನ ರಸ ಉತ್ತಮ ದ್ರವಾಂಶವುಳ್ಳ ಆಹಾರವಾಗಿದೆ. ಇವುಗಳು ದ್ರವಾಂಶದೊಂದಿಗೆ ಪೋಷಕಾಂಶಗಳನ್ನೂ ಹೊಂದಿರುತ್ತವೆ. ನೀರು ಕುಡಿಯುವುದರಿಂದ ಹಲವು ಪ್ರಯೋಜನಗಳಿವೆ. ವಿಶೇಷವಾಗಿ ದೇಹದ ತೂಕ ಇಳಿಸಿಕೊಳ್ಳಬೇಕು ಎಂದು ಬಯಸುವವರಿಗೆ ನೀರು ಕುಡಿಯುವುದರಿಂದ ಅನುಕೂಲಗಳಿವೆ. ನೀರಿನಲ್ಲಿ ಕ್ಯಾಲರಿಗಳಿಲ್ಲ ಜತೆಗೆ ಸೋಡಿಯಂ ಪ್ರಮಾಣವೂ ತೀರಾ ಕಡಿಮೆ ಇರುತ್ತದೆ. ನೀರಿನಲ್ಲಿ ಕೊಬ್ಬು ಮತ್ತು ಕೊಲೆಸ್ಟ್ರಾಲ್‌ ಇರುವುದಿಲ್ಲ. 

ದೇಹಕ್ಕೆ ಎಷ್ಟು ಪ್ರಮಾಣದ  ದ್ರವಾಂಶದ ಅಗತ್ಯವಿದೆ?
ಸರಾಸರಿ ಲೆಕ್ಕಾಚಾರದಂತೆ ಒಬ್ಬ ವ್ಯಕ್ತಿಯಲ್ಲಿ ದಿನವೊಂದಕ್ಕೆ ಬೆವರು, ಮೂತ್ರ ವಿಸರ್ಜನೆ, ಕರುಳಿನ ಚಲನೆ ಮತ್ತು ಉಸಿರಾಟದಿಂದಲೂ ಸುಮಾರು 10 ಕಪ್‌ಗ್ಳಷ್ಟು ದ್ರವಾಂಶ ನಷ್ಟಗೊಳ್ಳುತ್ತದೆ. ಸೆಕೆ, ಆದ್ರì ಹವೆ ಇರುವಾಗ ಮತ್ತು ವ್ಯಾಯಾಮ ಮಾಡುವುದರಿಂದ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ದ್ರವಾಂಶ ನಷ್ಟವಾಗಬಹುದು. ಪೋಷಕಾಂಶಗಳನ್ನು ಶೇಖರಿಸಿದಂತೆ ದೇಹವು ಮುಂದಣ ಉಪಯೋಗಕ್ಕಾಗಿ ನೀರನ್ನು ಶೇಖರಿಸಿ ಇಟ್ಟುಕೊಳ್ಳುವುದಿಲ್ಲ. ಆದ್ದರಿಂದ ನಿರ್ಜಲೀಕರಣವನ್ನು ತಡೆಯಲು ಮತ್ತು ದೇಹದಲ್ಲಿನ ಕಾರ್ಯಚಟುವಟಿಕೆಗಳಿಗೆ ತಡೆ ಉಂಟಾಗದಂತೆ ನಷ್ಟವಾದ ದ್ರವಾಂಶಕ್ಕೆ ಪ್ರತಿಯಾಗಿ ನೀರನ್ನು ಕುಡಿಯುವುದು ಅತ್ಯಂತ ಅಗತ್ಯವಾಗಿದೆ. 

ಉತ್ತಮ ಆರೋಗ್ಯ ಹೊಂದಿರುವ ವ್ಯಕ್ತಿಗಳ ದೇಹದಲ್ಲಿ ದ್ರವಾಂಶ ನಷ್ಟ ಮತ್ತು ದ್ರವಾಂಶ ಒಳಪ್ರವೇಶ ಪ್ರಮಾಣ ಹೊಂದಾಣಿಕೆಯಲ್ಲಿರುತ್ತದೆ. ದೇಹಕ್ಕೆ ಅಗತ್ಯವಿರುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿದರೆ ಕಿಡ್ನಿಗಳು ಹೆಚ್ಚುವರಿ ನೀರನ್ನು ದೇಹದಿಂದ ಹೊರಹಾಕುವತ್ತ ಕಾರ್ಯಪ್ರವೃತ್ತವಾಗುತ್ತವೆ.

ಸರಿಯಾದ ಪ್ರಮಾಣದಲ್ಲಿ ನೀರು ಕುಡಿಯದಿದ್ದರೆ, ನಿಮಗೆ ದಾಹದ ಅನುಭವವಾಗುತ್ತದೆ. ಮೂತ್ರದ ಬಣ್ಣದಲ್ಲಿ ಬದಲಾವಣೆ ಉಂಟಾಗುವುದನ್ನು ಗಮನಿಸಿದಾಗ ನೀರು ಕುಡಿಯುವ ಪ್ರಮಾಣ ಕಡಿಮೆಯಾಗಿರುವುದನ್ನು ಕಂಡುಕೊಳ್ಳಬಹುದು. ಯಾವಾಗಲೂ ನೀರು ಕುಡಿಯುವುದಕ್ಕೆ ದಾಹ ಆಗುವುದನ್ನೇ ಕಾಯಬಾರದು. ಆಗಾಗ ಸ್ವಲ್ಪ-ಸ್ವಲ್ಪ ಪ್ರಮಾಣದಲ್ಲಿ ನೀರನ್ನು ಕುಡಿಯುತ್ತಿರಬೇಕು.  ಕಿಡ್ನಿ ತೊಂದರೆ, ಪಿತ್ಥಜನಕಾಂಗದ ತೊಂದರೆ ಇದ್ದವರಿಗೆ ಮಾತ್ರ ನೀರು ಕುಡಿಯುವಲ್ಲಿ ನಿರ್ದಿಷ್ಟ ನಿರ್ಬಂಧನೆಗಳಿರುತ್ತವೆ. 

Advertisement

ಪ್ರತಿನಿತ್ಯ ಎಷ್ಟು ನೀರನ್ನು 
ಕುಡಿಯುವ ಅಗತ್ಯವಿದೆ?

ದೇಹದಿಂದ ಎಷ್ಟು ಪ್ರಮಾಣದಲ್ಲಿ ಶಕ್ತಿ ವ್ಯಯವಾಗುತ್ತದೆ ಎಂಬ ಆಧಾರದಲ್ಲಿ ಎಷ್ಟು ಪ್ರಮಾಣದಲ್ಲಿ ನೀರನ್ನು ಕುಡಿಯಬೇಕೆಂಬುದನ್ನು ನಿರ್ಣಯಿಸಬಹುದಾಗಿದೆ. ಪ್ರತಿ ಒಂದು ಸಾವಿರ ಕ್ಯಾಲರಿಗಳ ವ್ಯಯಕ್ಕೆ 1ರಿಂದ 1.5 ಲೀಟರ್‌ ನೀರನ್ನು ಕುಡಿಯಬೇಕು. ಎರಡು ಸಾವಿರ ಕ್ಯಾಲರಿ ಡಯೆಟ್‌ಗೆ 8 ಕಪ್‌ ನೀರು ಕುಡಿಯುವುದು ಸೂಕ್ತವಾಗಿದೆ.

ಹೆಚ್ಚಿನ ಜನರಿಗೆ ನೀರು, ಹಣ್ಣಿನ ರಸ ಇತ್ಯಾದಿ ಪಾನೀಯಗಳು ಮತ್ತು ಘನ ಆಹಾರದಲ್ಲಿರುವ ದ್ರವಾಂಶ ಇತ್ಯಾದಿಗಳಿಂದ ಒಟ್ಟು ಸುಮಾರು 8ರಿಂದ 12 ಕಪ್‌ ನೀರಿನ ಅಗತ್ಯ ಇರುತ್ತದೆ. ದೇಹದ ತೂಕವೂ ಎಷ್ಟು ನೀರು ಕುಡಿಯಬೇಕೆಂಬುದನ್ನು ನಿರ್ಧರಿಸುವ ಅಂಶಗಳಲ್ಲಿ ಒಂದಾಗಿದೆ. ಇದಲ್ಲದೆ ಇತರ ಅಂಶಗಳೂ ಎಷ್ಟು ನೀರು ಕುಡಿಯಬೇಕು ಎಂಬುದನ್ನು ಪ್ರಭಾವಿಸಬಹುದು.

1 ಒಂದೊಮ್ಮೆ ನಿಮ್ಮ ದೇಹವು ಅತಿಯಾದ ಉಷ್ಣತೆಗೆ ಅಥವಾ ಅತಿಯಾದ ಶೀತ ವಾತಾವರಣಕ್ಕೆ ಒಡ್ಡಿಕೊಂಡಾಗ ದೇಹಕ್ಕೆ ಹೆಚ್ಚಿನ ಪ್ರಮಾಣದ ದ್ರವಾಂಶದ ಅಗತ್ಯ ಇರುತ್ತದೆ. ದೇಹದ ಉಷ್ಣಾಂಶವನ್ನು ಹೊಂದಾಣಿಕೆ ಮಾಡಲು ಹೆಚ್ಚುವರಿ ನೀರಿನ ಅಗತ್ಯ ಉಂಟಾಗುತ್ತದೆ. 
2 ಒತ್ತಡದ ಚಟುವಟಿಕೆ ಅಥವಾ ವ್ಯಾಯಾಮದ ಸಂದರ್ಭದಲ್ಲಿ ಬೆವರುವುದರಿಂದ ಅಥವಾ ಬೆವರು ಆವಿಯಾಗುವುದರಿಂದ ದೇಹದಲ್ಲಿ ದ್ರವಾಂಶ ನಷ್ಟವಾಗುತ್ತದೆ. 
3 ಗರ್ಭಿಣಿಯರಲ್ಲಿ ಮತ್ತು ಮಗುವಿಗೆ ಹಾಲೂಡಿಸುವ ತಾಯಂದಿರ ದೇಹದಲ್ಲಿ ದ್ರವಾಂಶ ನಷ್ಟವಾಗುವುದರಿಂದ ಅವರಿಗೆ ಹೆಚ್ಚು ನೀರು ಕುಡಿಯುವುದು ಸೂಕ್ತವಾಗಿರುತ್ತದೆ.
4 ಜ್ವರ, ಡಯೇರಿಯಾ, ವಾಂತಿ ಇತ್ಯಾದಿಗಳಿಂದ ದೇಹದ ದ್ರವಾಂಶ ನಷ್ಟವಾಗುತ್ತದೆ. ಆದ್ದರಿಂದ ಈ ಸಂದರ್ಭ ನಿರ್ಜಲೀಕರಣವನ್ನು ತಪ್ಪಿಸಲು ಹೆಚ್ಚು ನೀರು ಅಥವಾ ದ್ರವಾಂಶವುಳ್ಳ ಪದಾರ್ಥಗಳನ್ನು ಸೇವಿಸುವುದು ಅತ್ಯಗತ್ಯವಾಗಿರುತ್ತದೆ. 
5 ಹೆಚ್ಚು ನಾರಿನಾಂಶವುಳ್ಳ ಆಹಾರ ಸೇವಿಸುವವರಲ್ಲಿ ನಾರಿನಾಂಶ ಜೀರ್ಣ ಪ್ರಕ್ರಿಯೆಯಲ್ಲಿ ಮತ್ತು ಮಲಬದ್ಧತೆ ನಿವಾರಣೆಗೆ ನೀರಿನ ಸೇವನೆ ಅತ್ಯಗತ್ಯವಾಗಿದೆ. 

– ಅರುಣಾ ಮಲ್ಯ,   
ಸೀನಿಯರ್‌ ಡಯೆಟಿಶನ್‌,
ಕೆ.ಎಂ.ಸಿ. ಆಸ್ಪತ್ರೆ, 
ಡಾ| ಅಂಬೇಡ್ಕರ್‌ ವೃತ್ತ, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next