ನಾವು ಈಗ ಬದುಕುತ್ತಿರುವ ಬದುಕು ನಮ್ಮ ಪೂರ್ವ ಜನ್ಮದ ಕರ್ಮದ ಫಲವೆಂಬುದು ಆಗ್ಗಾಗೆ ಕೇಳುವ ಮಾತು. ನಮ್ಮ ಹಿಂದಿನ ಜನ್ಮದಲ್ಲಿ ಮಾಡಿದ ಒಳ್ಳೆಯ ಕೆಲಸಗಳಿರಲಿ, ತಪ್ಪುಗಳಿರಲಿ ಇಲ್ಲವೇ ಯಾವುದೇ ಪ್ರಮಾದವಿರಲಿ ಅವೆಲ್ಲದರ ಫಲವು ನಮಗೆ ಮುಂದಿನ ಜನ್ಮದಲ್ಲಿ ದೊರಕುತ್ತದೆ. ಪುರಾಣದಲ್ಲಿ ಶ್ರೇಷ್ಠರೆನಿಸಿದವರೂ ಇದರಿಂದ ಹೊರತಾಗಿಲ್ಲ. ದೈವಾದಿಗಳಾಗಿ ಎಲ್ಲರೂ ಕರ್ಮವಿಧಿದಾತರೇ! ಕರ್ಮವೆಂಬುದು ಪ್ರತಿಯೊಬ್ಬನ ವರ್ತಮಾನದ ಸತ್ಯವಾಗಿದೆ.
ಕರ್ಮಗಳೇ ಮುಂದಿನ ಜನ್ಮಗಳಾಗಿ ನಮ್ಮ ಜೀವನವನ್ನು ನಿರ್ಧರಿಸುತ್ತವೆ ಎಂಬುದನ್ನು ಪಾರಂಪರಿಕವಾಗಿ ನಂಬಿಕೊಂಡು ಬಂದವರು ನಾವು. ಮನುಷ್ಯನ ಜೀವನದಲ್ಲಿ ಏನೇ ನಡೆದರೂ ಅದು ಪೂರ್ವನಿರ್ಧಾರಿತವಾದದ್ದು ಮತ್ತು ಭಗವಂತನು ಈಗಾಗಲೇ ನಿಯೋಜಿಸಿದ್ದು ಎಂಬುದನ್ನೇ ನಮ್ಮ ಆಗಮಿಕ ಗ್ರಂಥಗಳು ಹೇಳುತ್ತವೆ. ಹಾಗೆಯೇ ಪಂಚ ಪತಿವ್ರತೆಯರಲ್ಲಿ ಮುಖ್ಯಳಾದ ದ್ರೌಪದಿಯು ಐದು ಜನ ಪತಿಯರನ್ನೇಕೆ ವರಿಸಿದಳು? ಹಾಗಿದ್ದೂ ಅವಳು ಹೇಗೆ ಪತಿವ್ರತೆಯಾದಳು? ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತಲೇ ಇರುತ್ತದೆ. ಕುಮಾರವ್ಯಾಸರ ಮಹಾಭಾರತದಲ್ಲಿ ಬರುವ ಒಂದು ಕಥೆ ದ್ರೌಪದಿಯ ಪಂಚಪತಿಯರನ್ನು ಪಡೆಯುವುದಕ್ಕೂ ಅವಳ ಹಿಂದಿನ ಜನ್ಮದ ನಂಟಿಗೂ ಸಂಬಂಧವನ್ನು ಬೆಸೆದು ಕಾರಣವನ್ನು ನೀಡುತ್ತದೆ.
ದ್ರುಪದ ರಾಜನಿಗೆ ವರದ ರೂಪದಲ್ಲಿ ಮಗಳಾಗಿ ಅಗ್ನಿಯಿಂದ ಜನಿಸಬಂದ ದ್ರೌಪದಿಯ ಹುಟ್ಟು ಧರ್ಮದ ಸ್ಥಾಪನೆಯಲ್ಲಿ ಮಹತ್ವವನ್ನು ಪಡೆದಿತ್ತು. ಇದಕ್ಕೆ ಮುನ್ನುಡಿಯಾಗಿ ದ್ರೌಪದಿಯ ಸ್ವಯಂವರ ಏರ್ಪಟ್ಟಿತ್ತು. ಸ್ವಯಂವರದಲ್ಲಿ ದ್ರೌಪದಿಯನ್ನು ಗೆದ್ದ ಅರ್ಜುನ ಸಹೋದರರ ಸಹಿತ ತಾಯಿ ಕುಂತಿಯ ಬಳಿ ಬಂದಾಗ ಕುಂತಿ, ದೊರಕಿದ ದಾನವನ್ನು ಐದು ಸಹೋದರರು ಹಂಚಿಕೊಳ್ಳಲು ಹೇಳುತ್ತಾಳೆ. ಪಂಚ ಪಾಂಡವರನ್ನು ದ್ರೌಪದಿಯು ಹಾಗೂ ಪಾಂಡವರು ತಮ್ಮ ತಾಯಿಯ ಮಾತಿನಂತೆ ದ್ರೌಪದಿಯನ್ನು ವರಿಸಲು ಸಿದ್ಧರಿದ್ದ ಸಂದರ್ಭ ದುಪ್ರದ ಚಿಂತೆಗೀಡಾಗುತ್ತಾನೆ. ದ್ರೌಪದಿಯ ತಂದೆಯಾದ ದ್ರುಪದನಿಗೆ ಕಳಕಳವಂತೂ ಇದ್ದೇ ಇರುತ್ತದೆ ಅಲ್ಲವೇ ? ಸಮಾಜವನ್ನು ಎದುರಿಸುವ ಭಯ ಅವನದ್ದಲ್ಲ. ಏಕೆಂದರೆ ಸಮಾಜವನ್ನು ನಿಭಾಯಿಸುವ ಶಕ್ತಿ ರಾಜನಾಗಿ ಅವನಿಗಿತ್ತು. ಬದಲಾಗಿ ವೇದ ಉಪನಿಷತ್ತುಗಳು ತಿಳಿದಿರುವ ಮಹಾಪುರುಷರು ಏನು ಹೇಳಿಯಾರು ಎಂಬ ಆತಂಕವೂ ಅವನ್ನಲ್ಲಿತ್ತು. ದ್ರುಪದನ ಈ ಸಮಸ್ಯೆಗೆ ಪರಿಹಾರವಾಗಿ ಕುಮಾರವ್ಯಾಸರು ದ್ರೌಪದಿಯ ಜನ್ಮವೃತ್ತಾಂತವನ್ನು, ಅವಳ ಹಿಂದಿನ ಜನ್ಮದ ಕರ್ಮ ವೃತ್ತಾಂತವನ್ನು ತೆರೆದಿಡುತ್ತಾರೆ.
ಹಿಂದಿನ ಜನ್ಮದಲ್ಲಿ ನಾರಾಯಣೀ ಎಂಬ ಹೆಸರಿನ ಕನ್ಯೆಯೊಬ್ಬಳಿದ್ದು, ಅವಳು ಸರ್ವಶ್ರೇಷ್ಠನಾದ ಮುನಿಯನ್ನು ಮದುವೆಯಾಗಿದ್ದಳು. ಜ್ಞಾನನಿಧಿಯಾದ ಆ ಮುನಿಯು ಕುಷ್ಠರೋಗದಿಂದ ಕೊಳೆಯುತ್ತಿರುವಂತಹ ದೇಹವುಳ್ಳವನಾಗಿರುತ್ತಾನೆ. ನೋಡಲು ಭಯಾನಕವಾಗಿಯೂ, ಅಸಹ್ಯವಾಗಿಯೂ ಕಾಣುತ್ತಿದ್ದರೂ ಇದ್ಯಾವುದೂ ನಾರಾಯಣೀಗೆ ಮುಖ್ಯವಾಗದೇ ಆತನ ಸೇವೆಯೇ ಮುಖ್ಯವೆಂದು ತಿಳಿದು ಆತನನ್ನು ದೇವರೆಂಬಂತೆ ಪೂಜಿಸುತ್ತಾ ಸೇವೆ ಮಾಡುತ್ತಿರುತ್ತಾಳೆ. ಇದನೆಲ್ಲ ಗಮನಿಸುತ್ತಿದ್ದ ಆ ಮುನಿ ನಾರಯಣೀಯನ್ನು ಹಾಗೂ ಅವಳ ನೈಜತೆಯನ್ನು ಪರೀಕ್ಷಿಸಬೇಕೆಂದು ಒಮ್ಮೆ ನಾರಾಯಣೀಯು ಸೇವಿಸುತ್ತಿದ್ದ ಊಟದಲ್ಲಿ ಕುಷ್ಠರೋಗದಿಂದ ಕೊಳೆತು ನಾರುತ್ತಿರುವ ತನ್ನ ಬೆರಳನ್ನು ಅದ್ದುತ್ತಾನೆ. ಆದರೆ ನಾರಾಯಣೀ ಒಂದಿನಿತೂ ಅಸಹ್ಯ ಮಾಡಿಕೊಳ್ಳದೇ ಊಟ ಮಾಡುತ್ತಾಳೆ.
ಅವಳ ವ್ಯಕ್ತಿತ್ವಕ್ಕೆ ಮೆಚ್ಚಿದ ಮುನಿಯು ಯಾವುದಾದರೂ ವರವನ್ನು ಕೇಳು ಎಂದು ಹೇಳುತ್ತಾನೆ. ಇದರಿಂದ ಸಂತೋಷಗೊಂಡ ನಾರಾಯಣೀಯು ” ಕುಷ್ಠರೋಗಿವಿಲ್ಲದೆಯೇ ಅದ್ಭುತವಾದ ದೇಹ ರೂಪದಿಂದ ತನ್ನ ಜತೆ ಸಂಸಾರ ಮಾಡುವಂತೆ’ ಕೇಳಿಕೊಳ್ಳುತ್ತಾಳೆ. ಮುನಿಯೂ ಅದಕ್ಕೆ ಸಮ್ಮತಿಸುತ್ತಾನೆ. ಮುಂದಿನ ಕೆಲವು ಸಮಯದ ವರೆಗೆ ಇಬ್ಬರೂ ಸುಖಸಂಸಾರ ನಡೆಸುತ್ತಾರೆ. ಆ ವೇಳೆ ಮುನಿಗೆ ತನ್ನ ತಪಸ್ಸು ಮತ್ತು ತನ್ನ ಕರ್ಮದ ನೆನಪಾಗಿ ಸಂಸಾರದಿಂದ ವಿಮುಕ್ತನಾಗಲು ನಿರ್ಧರಿಸುತ್ತಾನೆೆ. ಆದರೆ ನಾರಾಯಣೀಯು ಆತನನ್ನು ತಡೆದು ತನ್ನ ಜತೆ ಸಂಸಾರವನ್ನು ಮುಂದುವರೆಸಿ ಎಂದು ಕೇಳಿಕೊಳ್ಳುತ್ತಾಳೆ. ತನ್ನ ದಾರಿಗೆ ಅಡ್ಡ ನಿಂತ ನಾರಾಯಣೀಯ ಮೇಲೆ ಕುಪಿತಗೊಂಡ ಮುನಿಯು ” ಪತಿಯನ್ನು ಅಡ್ಡ ಹಾಕಿ ಸಂಸಾರ ನಡೆಸು ಎಂದು ಕೇಳುವ ದಿಟ್ಟತನ ತೋರಿದ ನೀನು ಮುಂದಿನ ಜನ್ಮದಲ್ಲಿ ಕ್ಷತ್ರಿಯನ ಮಗಳಾಗಿ ಜನಿಸು ‘ ಎಂದು ಶಪಿಸಿ ಅಲ್ಲಿಂದ ತೆರಳುತ್ತಾನೆ.
ಅರಣ್ಯ ಮಧ್ಯದಲ್ಲಿ ಏಕಾಂಗಿಯಾಗಿ ಉಳಿದು ಹೋದ ನಾರಾಯಣೀಯು ಕಂಗೆಟ್ಟು ಹೋಗುತ್ತಾಳೆ. ಏನೂ ತಿಳಿಯದಂತಾಗಿ ಶಿವನನ್ನು ಕುರಿತು ಬಹು ಕಾಲದವರೆಗೆ ತಪಸ್ಸು ಮಾಡುತ್ತಾಳೆ. ಇವಳ ತಪ್ಪಸ್ಸಿನಿಂದ ಪ್ರಸನ್ನನಾದ ಶಿವನು ಇವಳೆದುರು ಪ್ರತ್ಯಕ್ಷನಾದಾಗ ಅವನನ್ನು ಕಂಡು ಕಣ್ಣೀರಿಡುತ್ತಾ, ಬಹುವಾಗಿ ನೊಂದು, ” ಪತಿತ್ರಾಹಿ, ಪತಿತ್ರಾಹಿ, ಪತಿತ್ರಾಹಿ, ಪತಿತ್ರಾಹಿ, ಪತಿತ್ರಾಹಿ ‘ ಎಂದು ಉದ್ವೇಗದಿಂದ ಭೋರ್ಗರೆಯುತ್ತಾ ಬೇಡುತ್ತಾಳೆ. ಪತಿತ್ರಾಹಿ ಎಂದು ಐದು ಬಾರಿ ಬೇಡಿದ ಕಾರಣದಿಂದ ನಿನಗೆ ಮುಂದಿನ ಜನ್ಮದಲ್ಲಿ ಐದು ಜನ ಪತಿಯರು ದೊರಕುತ್ತಾರೆ ಎಂದು ಶಿವನು ವರವನ್ನು ನೀಡುತ್ತಾನೆ. ಇದರಿಂದ ಬೆದರಿದ ನಾರಾಯಣೀಯು ನನಗೆ ಐದು ಜನ ಪತಿಯರು ಬೇಡವೆಂದು ಮತ್ತೆ ಬೇಡುತ್ತಾಳೆ. ಒಮ್ಮೆ ನೀಡಿದ ವರವನ್ನು ಹಿಂಪಡೆಯಲು ಸಾಧ್ಯವಿಲ್ಲ. ವೇದ ಶೃತಿಗಳಿಗೆ ಬದ್ಧನಾಗಿರುವವನು ನಾನು ಎಂದು ನಾರಾಯಣೀಯನ್ನು ಸಮಾಧಾನ ಪಡಿಸುತ್ತಾ ಶಿವನು ಅವಳಲ್ಲಿ ” ವರವು ವೇದ ಬಾಹಿರವಲ್ಲ. ಐದು ವರರನ್ನು ವರಿಸಿಯೂ ನೀನು ಪತಿವೃತೆಯರಲ್ಲಿ ಸ್ಥಾನಗಳಿಸುವೆ’ ಎಂದು ಹರಸುತ್ತಾನೆ.
ಈ ರೀತಿಯಲ್ಲಿ ದ್ರೌಪದಿಯ ಹಿಂದಿನ ಜನ್ಮದ ಕರ್ಮಫಲಗಳು ಮತ್ತು ಶಿವನ ವರವೂ ಸೇರಿ ಆಕೆಯ ಮುಂದಿನ ಜನ್ಮದಲ್ಲಿ ಕ್ಷತ್ರಿಯಳಾಗಿ ಹುಟ್ಟಿ ಐವರು ಪತಿಯರನ್ನು ಪಡೆಯುತ್ತಾಳೆ. ಈ ಸಂದರ್ಭದಲ್ಲಿ ಕುಂತಿಯು ಹೇಳಿದ “ಹಂಚಿಕೊಂಡು ಬಾಳಿ’ ಎಂಬ ಮಾತು ಪೂರಕವಾಗಿದೆಯೇ ಹೊರತು ಅದೇ ಕಾರಣವಲ್ಲ ಎಂದು ಇಡೀ ಸಭೆಗೆ ವ್ಯಾಸರು ತಿಳಿಸುತ್ತಾರೆ. ಹೀಗೆ ಸಭೆಯ ಗೊಂದಲಗಳಿಗೆ ತೆರೆ ಬಿದ್ದು ದ್ರುಪದನು ಪಾಂಚಾಲಿಯನ್ನು ಸಂತೋಷದಿಂದ ಪಾಂಡವರಿಗೆ ಧಾರೆ ಎರೆಯುತ್ತಾನೆ.
ಪಂಚ ಪಾಂಡವರನ್ನು ವರಿಸಿದ ದ್ರೌಪದಿಯು ಮುಂದೆ ಕೇವಲ ಅವರ ಹೆಂಡತಿಯಾಗಿಯಷ್ಟೇ ಅಲ್ಲ ತಾಯಿಯಾಗಿಯೂ ಪಾಂಡವರನ್ನು ಪೊರೆಯುತ್ತಾಳೆ. ಅವರೆಲ್ಲ ಕಷ್ಟ-ಸುಖಗಳಲ್ಲಿ ಭಾಗಿಯಾಗುತ್ತಾಳೆ. ಅವಳ ನೋವು ಅವಮಾನಗಳನ್ನು ಸಾಮಾನ್ಯ ಮಹಿಳೆ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಅಷ್ಟಾಗಿಯೂ ದ್ರೌಪದಿಯು ಸೋಲಲಿಲ್ಲ ಜೀವನವನ್ನು ಸಾಧಿಸಿ ಗೆದ್ದಳು. ಪಾಂಡವರನ್ನು ಸೋಲಲು ಬಿಡದೇ ಒಂದಾಗಿ ಹಿಡಿಯಾಗಿ ಹಿಡಿದಿಟ್ಟುಕೊಂಡವಳು ದ್ರೌಪದಿ. ಕೊನೆಯವರೆಗೂ ತನ್ನ ಪತಿಯರನ್ನು ಅನುಕರಿಸಿ ಪತಿವ್ರತೆಯರ ಸಾಲಿಗೆ ಸೇರಿದಳು.
ಮಾಡಿದ ಕರ್ಮಕ್ಕೆ ಪ್ರತಿಫಲಗಳನ್ನು ಪಡೆಯದ ಯಾವುದೇ ವ್ಯಕ್ತಿ ನಮ್ಮ ಪುರಾಣದಲ್ಲಿಲ್ಲ. ದೈವಾದಿಗಳಾಗಿ ಎಲ್ಲರೂ ಕರ್ಮವಿಧಿತರಾದವರೇ. ಹಾಗೇ ಹೇಳುವುದಾದರೆ ಧರ್ಮಾಧಿಕಾರಿಯಾದ ಯಮನೂ ಕರ್ಮಬಾಹಿರವನಲ್ಲ. ಕರ್ಮವೆಂಬುದು ಪ್ರತೀ ಜೀವಿಯ ಭವಿಷ್ಯವನ್ನು ನಿರ್ಧರಿಸುವ ವರ್ತಮಾನವೇ ಆಗಿದೆ.
–
ಡಾ| ಜಲದರ್ಶಿನಿ ಜಲರಾಜು,
ಮಾಂಟ್ರಿಯಲ್