Advertisement

Old Parliament House: ಭಾರತದ ಸಂವಿಧಾನವು ಜೀವಂತಿಕೆಯ, ಪ್ರಗತಿಪರ ದಾಖಲೆ: ರಾಷ್ಟ್ರಪತಿ

09:23 PM Nov 26, 2024 | Team Udayavani |

ನವದೆಹಲಿ: “ಭಾರತದ ಸಂವಿಧಾನವು ಒಂದು ಜೀವಂತಿಕೆಯುಳ್ಳ ಪ್ರಗತಿಪರ ದಾಖಲೆ. ಅದರ ಮೂಲಕವೇ ನಾವು ಸಾಮಾಜಿಕ ನ್ಯಾಯ ಮತ್ತು ಎಲ್ಲರನ್ನೊಳಗೊಂಡ ಅಭಿವೃದ್ಧಿಯನ್ನು ಸಾಧಿಸಿದ್ದೇವೆ. ಸಂವಿಧಾನದ ಆಶಯದಂತೆ ಜನರ ಬದುಕನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಒಗಟ್ಟಾಗಿ ಕೆಲಸ ಮಾಡುವುದು ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗದ ಹೊಣೆಗಾರಿಕೆಯಾಗಿದೆ’.

Advertisement

ಹೀಗೆಂದು ಹೇಳಿದ್ದು ರಾಷ್ಟ್ರಪತಿ ದ್ರೌಪದಿ ಮುರ್ಮು.  ದೇಶವು ಸಂವಿಧಾನವನ್ನು ಅಳವಡಿಸಿಕೊಂಡು 75 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಒಂದು ವರ್ಷ ಕಾಲ ನಡೆಯಲಿರುವ ವಿವಿಧ ಕಾರ್ಯಕ್ರಮಗಳಿಗೆ ಮಂಗಳವಾರ ಚಾಲನೆ ನೀಡಿದ ಅವರು, ಬಳಿಕ ಹಳೆಯ ಸಂಸತ್‌ ಭವನದ “ಸಂವಿಧಾನ್‌ ಸದನ’ದ ಸೆಂಟ್ರಲ್‌ ಹಾಲ್‌ನಲ್ಲಿ ಜಂಟಿ ಸದನವನ್ನು ಉದ್ದೇಶಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ, ಸಂವಿಧಾನ ರಚನಾ ಮಂಡಳಿಯಲ್ಲಿದ್ದ 15 ಮಹಿಳಾ ಸದಸ್ಯರ ಕೊಡುಗೆಯನ್ನೂ ಅವರು ಸ್ಮರಿಸಿದರು.

“ನಮ್ಮ ದೂರದೃಷ್ಟಿಯುಳ್ಳ ಸಂವಿಧಾನ ರಚನಾಕಾರರು, ಬದಲಾಗುತ್ತಿರುವ ಕಾಲದ ಅಗತ್ಯಕ್ಕೆ ತಕ್ಕಂತೆ ಹೊಸ ಹೊಸ ಪರಿಕಲ್ಪನೆಗಳನ್ನು ಅಳವಡಿಸುವಂಥ ವ್ಯವಸ್ಥೆಯನ್ನು ನಮಗೆ ನೀಡಿದ್ದಾರೆ. ನಾವು ಈಗಾಗಲೇ ಹಲವು ಮಹತ್ವಾಕಾಂಕ್ಷಿ ಗುರಿಗಳನ್ನು ಸಂವಿಧಾನದ ಮೂಲಕ ಸಾಧಿಸಿದ್ದೇವೆ. ದೇಶಕ್ಕೆ ಹೊಸ ಅಸ್ಮಿತೆಯನ್ನು ಕಂಡುಕೊಂಡಿದ್ದೇವೆ’ ಎಂದು ಮುರ್ಮು ಹೇಳಿದರು.

75 ವರ್ಷಗಳ ಹಿಂದೆ ಇದೇ ದಿನದಂದು, ಸಂವಿಧಾನ ರಚನಾ ಸಮಿತಿಯು ಹೊಸದಾಗಿ ರೂಪುಗೊಂಡ ಸ್ವತಂತ್ರ ಭಾರತಕ್ಕೆ ಸಂವಿಧಾನವನ್ನು ರೂಪಿಸುವ ದೊಡ್ಡಮಟ್ಟದ ಕಾರ್ಯವನ್ನು ಇದೇ ಸೆಂಟ್ರಲ್‌ ಹಾಲ್‌ನಲ್ಲಿ ಪೂರ್ಣಗೊಳಿಸಿತ್ತು. ಅಂದರೆ, ಭಾರತದ ಸಂವಿಧಾನವು ಅತ್ಯುನ್ನತ ವ್ಯಕ್ತಿಗಳ 3 ವರ್ಷಗಳ ನಿರಂತರ ಸಮಾಲೋಚನೆಯ ಫ‌ಲವಾಗಿದೆ. ಎಂದರು.

ಮೈಥಿಲಿ, ಸಂಸ್ಕೃತದಲ್ಲಿ ಸಂವಿಧಾನ ಪ್ರತಿ ಬಿಡುಗಡೆ

Advertisement

ಇದೇ ಸಂದರ್ಭದಲ್ಲಿ ರಾಷ್ಟ್ರಪತಿ ಮುರ್ಮು ಅವರು ಸಂವಿಧಾನದ ಮೈಥಿಲಿ ಹಾಗೂ ಸಂಸ್ಕೃತ ಭಾಷೆಯ ಆವೃತ್ತಿಯನ್ನು ಬಿಡುಗಡೆ ಮಾಡಿದರು. ಜತೆಗೆ, ಸಂವಿಧಾನದ 75ನೇ ವರ್ಷಾಚರಣೆ ಸ್ಮರಣಾರ್ಥ ವಿಶೇಷ ನಾಣ್ಯ ಹಾಗೂ ಅಂಚೆಚೀಟಿಯನ್ನೂ ಬಿಡುಗಡೆಗೊಳಿಸಿದರು.

ಎಸ್ಸಿ, ಎಸ್ಟಿ, ಒಬಿಸಿ ಹಾದಿಯಲ್ಲಿನ ಗೋಡೆಗೆ ಮೋದಿ ಸಿಮೆಂಟ್‌ ಹಾಕುತ್ತಿದ್ದಾರೆ: ರಾಹುಲ್‌

ದಲಿತರು, ಆದಿವಾಸಿಗಳು ಹಾಗೂ ಒಬಿಸಿಗಳ ಹಾದಿಯಲ್ಲಿನ ಗೋಡೆಯನ್ನು ಪ್ರಧಾನಿ ಮೋದಿ ಹಾಗೂ ಆರೆಸ್ಸೆಸ್‌ ಮತ್ತಷ್ಟು ಬಲಪಡಿಸುತ್ತಿದೆ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ. ನವದೆಹಲಿಯಲ್ಲಿ ನಡೆದ “ಸಂವಿಧಾನ್‌ ರಕ್ಷಕ್‌ ಅಭಿಯಾನ’ದಲ್ಲಿ ಮಾತನಾಡಿದ ಅವರು, ಹಿಂದಿನ ಯುಪಿಎ ಸರ್ಕಾರವು ಗ್ರಾಮೀಣ ಉದ್ಯೋಗ ಖಾತ್ರಿ, ಭೂಸ್ವಾಧೀನ ಕಾಯ್ದೆ, ಆಹಾರದ ಹಕ್ಕುಗಳನ್ನು ಒದಗಿಸುವ ಮೂಲಕ ಈ ಗೋಡೆಯನ್ನು ಒಡೆಯಲು ಬಹಳಷ್ಟು ಪ್ರಯತ್ನಿಸಿತು. ಆದರೆ, ಮೋದಿ ಮತ್ತು ಆರೆಸ್ಸೆಸ್‌ ಈ ಗೋಡೆಗೆ ಮತ್ತಷ್ಟು ಸಿಮೆಂಟ್‌ ಹಾಕುತ್ತಾ ಅದನ್ನು ಬಲಿಷ್ಠಗೊಳಿಸುತ್ತಿದೆ ಎಂದರು. “ಪ್ರಧಾನಿ ಮೋದಿ ಸಂವಿಧಾನವನ್ನು ಓದಿಲ್ಲ ಎನ್ನುವುದು ಗ್ಯಾರಂಟಿ. ಅವರೇನಾದರೂ ಓದಿದ್ದರೆ, ಅವರು ಪ್ರತಿದಿನ ಈಗ ಏನು ಮಾಡುತ್ತಿದ್ದಾರೋ, ಅದನ್ನು ಮಾಡುತ್ತಿರಲಿಲ್ಲ’ ಎಂದಿದ್ದಾರೆ. ದೇಶದ ಇಡೀ ವ್ಯವಸ್ಥೆಯನ್ನು ದಲಿತರು, ಆದಿವಾಸಿಗಳು, ಹಿಂದುಳಿದವರ ವಿರುದ್ಧ ಛೂಬಿಡಲಾಗಿದೆ ಎಂದೂ ಅವರು ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next