Advertisement

ನೇತ್ರಾವತಿ ಸೇರುತ್ತಿದೆ ಮಲಿನ ನೀರು

07:25 AM May 18, 2018 | Team Udayavani |

ಬಂಟ್ವಾಳ : ನಗರ ಒಳಚರಂಡಿ ಅವ್ಯವಸ್ಥೆಯಿಂದ ಮಲಿನ ನೀರು ನೇತ್ರಾವತಿ ನದಿ ಸೇರುವ ಮೂಲಕ ಕುಡಿಯುವ ನೀರು ಕಲುಷಿತ ಆಗುತ್ತಿದೆ. ಜಿಲ್ಲೆಯ ಜೀವನದಿ ನೇತ್ರಾವತಿಗೆ ಬಂಟ್ವಾಳ ನಗರದ ಮಲಿನ ನೀರು ಸೇರುತ್ತಿರುವುದನ್ನು ತಪ್ಪಿಸುವ 56 ಕೋಟಿ ರೂ. ವೆಚ್ಚದ ಯೋಜನೆ ಮಂಜೂರಾಗಿದ್ದರೂ ಅದನ್ನು ಪೂರ್ಣವಾಗಿ ಅನುಷ್ಠಾನಿಸುವಲ್ಲಿ ವಿಳಂಬವಾಗಿದೆ. ಇದರಿಂದ ಅಪಾರ ಪ್ರಮಾಣದಲ್ಲಿ ತೋಡು, ಹಳ್ಳಗಳ ಮೂಲಕ ನಗರದ ಕಲುಷಿತ ನೀರು, ತ್ಯಾಜ್ಯ, ಕೊಚ್ಚೆ, ಕೊಳಕು, ಕಸದ ರಾಶಿ ನದಿ ಸೇರುವಂತಾಗಿದೆ. ಇದೇ ಮಲಿನ ನೀರು ಮಂಗಳೂರು ಮತ್ತು ಬಂಟ್ವಾಳ ನಗರಗಳ ಜನತೆಗೆ ಕುಡಿಯುವ ಉದ್ದೇಶದೊಂದಿಗೆ ಸರಬ ರಾಜು ಆಗುತ್ತಿದೆ ಎಂಬುದು ವಿಪರ್ಯಾಸ. ಒಂಬತ್ತು ವರ್ಷಗಳ ಹಿಂದೆ 12 ಕೋಟಿ ರೂ. ವೆಚ್ಚದಲ್ಲಿ ಬಂಟ್ವಾಳ ನಗರ, ಪಾಣೆಮಂಗಳೂರಲ್ಲಿ ಸಮಗ್ರ ಒಳಚರಂಡಿ ನಿರ್ಮಾಣ ಆಗಿತ್ತು. ಆದರೆ ಒಳಚರಂಡಿ ಮೂಲಕ ಹರಿಯುವ ಮಲಿನ ನೀರನ್ನು ಸಂಗ್ರಹಿಸುವ ಬಾವಿ ಮತ್ತು ನೀರು ಶುದ್ಧೀಕರಣ ಘಟಕ ನಿರ್ಮಾಣ ವಿಳಂಬವಾಗಿದ್ದು  ಇಷ್ಟೆಲ್ಲ ಅವಾಂತರಕ್ಕೆ ಕಾರಣ ಎನ್ನಲಾಗಿದೆ.

Advertisement

ಬಾವಿ ಮತ್ತು ಶುದ್ಧೀಕರಣ ಪ್ಲಾಂಟ್‌ ನಿರ್ಮಾಣಕ್ಕಾಗಿ ಆಗಿನ ಸಚಿವ ಬಿ. ರಮಾನಾಥ ರೈ ಅವರು 56 ಕೋಟಿ ರೂ. ಯೋಜನೆ ಮಂಜೂರು ಮಾಡಿಸಿದ್ದರೂ ಸರಕಾರಿ ಇಲಾಖೆಯ ವಿಳಂಬ ಧೋರಣೆಯಿಂದ ನನೆಗುದಿ ಯಲ್ಲಿ ಬಿದ್ದಿತ್ತು. ಈ ವಿಚಾರದಲ್ಲಿ ಕರ್ನಾಟಕ ಜಲಮಂಡಳಿ ಸಮ ರೋಪಾದಿ ಕೆಲಸ ಮಾಡಿದರೆ ನದಿ ನೀರು ಮಲಿನ ಆಗುವುದನ್ನು ತಪ್ಪಿಸ ಬಹುದು. ಜನರ ಆರೋಗ್ಯ ಕಾಪಾಡಲೂ ಸಹಕಾರಿಯಾದೀತು.

ನೀರು ಕಪ್ಪಾಗಿದೆ
ನೇತ್ರಾವತಿ ನದಿ ತುಂಬೆ ಡ್ಯಾಂನಲ್ಲಿ ಆರು ಮೀಟರ್‌ ನೀರು ನಿಲುಗಡೆ ಮಾಡಿದ ಬಳಿಕ ಹರಿಯುವ ನೀರನ್ನು ತಡೆದ ಕಾರಣಕ್ಕಾಗಿ ನಿಲುಗಡೆ ಆಗಿರುವ ನೀರು ನದಿಯ ಉದ್ದಕ್ಕೂ ಕಪ್ಪಾಗಿ ತನ್ನ ಶುದ್ಧತೆಯನ್ನು ಕಳೆದುಕೊಂಡಿದೆ. ಮಂಗಳೂರು ಮತ್ತು ಬಂಟ್ವಾಳದ ಜನತೆ ಈಗಲೂ ಇದೇ ನೀರನ್ನು ಕುಡಿಯುತ್ತಿದ್ದಾರೆ.

ಇಲಾಖೆಗಳ ನಡುವೆ ಸಮನ್ವಯದ ಕೊರತೆ, ಯೋಜನೆ ಅನುಷ್ಠಾನದಲ್ಲಿ ವಿಳಂಬ, ದೂರದರ್ಶಿತ್ವ ಇಲ್ಲದ ಕ್ರಮಗಳಿಂದ ಕಲುಷಿತ ನೀರು ನದಿಯ ಶುದ್ಧ ನೀರಿನಲ್ಲಿ ಬೆರೆಯುವ ಮೂಲಕ ರೋಗವನ್ನು ಸಾರ್ವತ್ರಿಕ ಹಂಚುವಂತಾಗಿದೆ. ನದಿಯ ಅಂಚಿನಲ್ಲಿ ತೋಡುಗಳಿಂದ ಹರಿದು ಬಂದಿರುವ ಕಸ-ಕಡ್ಡಿ, ಪ್ಲಾಸ್ಟಿಕ್‌ ತ್ಯಾಜ್ಯಗಳು ನದಿ ನೀರನ್ನು ಕಪ್ಪಾಗಿಸಿವೆ. ಇದನ್ನು ಕಣ್ಣಾರೆ ಕಂಡವರಂತೂ ಕುಡಿಯಲು ಮನಸ್ಸು ಮಾಡಲಿಕ್ಕಿಲ್ಲ.

ಯೋಜನೆ
9 ವರ್ಷಗಳ ಹಿಂದೆ ಬಂಟ್ವಾಳ ಪುರಸಭೆಯ ವ್ಯಾಪ್ತಿಯಲ್ಲಿ ಒಳಚರಂಡಿ ಕಾಮಗಾರಿ ಆಗಿದೆ. ರಸ್ತೆಯ ನಡುವೆ ಅಲ್ಲಲ್ಲಿ ಮ್ಯಾನುವೆಲ್‌ ಇಡುವ ಮೂಲಕ, ರಸ್ತೆಯನ್ನು ಅಗೆಯುವ ಮೂಲಕ ಹಲವಾರು ಸಮಸ್ಯೆಗಳ ನಡುವೆ ಒಳಚರಂಡಿ ಪೈಪ್‌ಲೈನ್‌ ಆಗಿತ್ತು. ಆದರೆ, ಕೊಳಚೆ ಸಂಗ್ರಹ ಬಾವಿ, ಕೊಳಚೆ ನೀರನ್ನು ಶುದ್ಧೀಕರಿಸುವ ಪ್ಲಾಂಟ್‌ ಮಾತ್ರ ನಿರ್ಮಾಣ ಆಗಿಲ್ಲ. ಇದರಿಂದ ಒಳಚರಂಡಿಗಳಲ್ಲಿ ಹರಿದ ತ್ಯಾಜ್ಯ ನದಿಯನ್ನು ಸೇರುವಂತಾಗಿತ್ತು. ತೆರೆದ ಚರಂಡಿ ಮತ್ತು ಒಳಚರಂಡಿಯ ಎಲ್ಲ ಕೊಳಚೆಗಳು ನೇರವಾಗಿ ನದಿಗೆ ಹರಿದು ಬರುವ ಮೂಲಕ ನದಿ ನೀರು ಸಂಪೂರ್ಣ ಕಲುಷಿತಗೊಳ್ಳುವಂತಾಗಿದೆ.

Advertisement

ಯೋಜನೆಯಂತೆ ಒಳಚರಂಡಿಯಿಂದ ಹರಿದು ಬರುವ ಕೊಳಚೆ ನೀರು ಶೇಖರಣ ಬಾವಿ ಪಾಣೆಮಂಗಳೂರು, ಬಂಟ್ವಾಳ, ಬಡ್ಡಕಟ್ಟೆ, ಶಾಂತಿಅಂಗಡಿ, ಬಿ.ಸಿ. ರೋಡ್‌ ಗೂಡಿನ ಬಳಿ, ಪಾಣೆಮಂಗಳೂರಿನ ಸುಣ್ಣದ ಗೂಡಿನ ಬಳಿ ನಿರ್ಮಿಸಬೇಕಿತ್ತು. ಸಮರ್ಪಕ ಜಮೀನು ಸಿಗದ ಕಾರಣಕ್ಕಾಗಿ ಯೋಜನೆ ಅನುಷ್ಠಾನಕ್ಕೆ ಬಂದಿಲ್ಲ. ಮಲಿನ ನೀರನ್ನು ಶುದ್ಧೀಕರಿಸುವ ಪ್ಲಾಂಟ್‌ ಕಾಮಾಜೆ ಯಲ್ಲಿ ನಿರ್ಮಾಣ ಮಾಡುವ ಯೋಜನೆ ರೂಪಿಸಿದ್ದರೂ ಸೂಕ್ತ ಜಾಗವಿಲ್ಲದೆ, ಅನುದಾನವೂ ವಿಳಂಬವಾಗಿ ಕಾಮಗಾರಿ ನನೆ ಗುದಿಗೆ ಬಿದ್ದಿತ್ತು. ಜನತೆಯ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿರುವ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ಪುನಃ ರೂಪಿಸಿ, ತ್ವರಿತವಾಗಿ ಅನುಷ್ಠಾನ ಮಾಡಬೇಕಿದೆ.

 2 ವರ್ಷ ಬೇಕು
ಯುಜಿಡಿ ಪ್ರಾಯೋಜಿತ ಈ ಯೋಜನೆಯ ಮಲಿನ ನೀರು ಸಂಗ್ರಹ ಬಾವಿಗೆ ಮತ್ತು ನೀರು ಶುದ್ಧೀಕರಣ ಘಟಕಕ್ಕೆ ಪುರಸಭೆ ಸೂಕ್ತ ಜಮೀನು ನೀಡಬೇಕು. ಲಭ್ಯ ಜಮೀನಿನ ಮೇಲೆ ಶಾಂತಿ ಅಂಗಡಿ ಮತ್ತು ಕಾಮಾಜೆಯಲ್ಲಿ ನ್ಯಾಯಾಲಯದಿಂದ ಖಾಸಗಿ ವ್ಯಕ್ತಿಗಳು ತಡೆಯಾಜ್ಞೆ ತಂದಿದ್ದಾರೆ. ಅದರ ತೆರವು ಕ್ರಮ ಆಗಬೇಕು. ಪರ್ಯಾಯ ಜಮೀನು ಲಭ್ಯವಿದ್ದರೆ ಅದನ್ನು ಪುರಸಭೆ ಒದಗಿಸಬೇಕು. ಇಷ್ಟೆಲ್ಲ ಆಗಿಯೂ ಕಾಮಗಾರಿ ಮುಗಿಯಲು ಎರಡು ವರ್ಷಗಳ ಕಾಲಾವಧಿ ಬೇಕಾಗಬಹುದು.
– ಶೋಭಲಕ್ಷ್ಮೀ, ಸಹಾಯಕ ಎಂಜಿನಿಯರ್‌, ಕರ್ನಾಟಕ ಜಲಮಂಡಳಿ ಮಂಗಳೂರು ವಿಭಾಗ

— ರಾಜಾ ಬಂಟ್ವಾಳ

Advertisement

Udayavani is now on Telegram. Click here to join our channel and stay updated with the latest news.

Next