ವಿಟ್ಲ: ವಿಟ್ಲ ಪೇಟೆಯ ನಾಲ್ಕು ಮಾರ್ಗ ಜಂಕ್ಷನ್ ಬಳಿಯಲ್ಲಿ ದೇವಸ್ಥಾನಗಳಿಗೆ ತೆರಳುವ ರಸ್ತೆಗೆ ಟೆಂಪಲ್ ರೋಡ್ ಅಥವಾ ದೇವಸ್ಥಾನ ರಸ್ತೆ ಎಂದು ಕರೆಯಲಾಗುತ್ತದೆ. ಈ ರಸ್ತೆಯಲ್ಲಿ ಹಿಂದೆ ಚರಂಡಿಗಳೇ ಇರಲಿಲ್ಲ. ಇದೀಗ ಪ.ಪಂ. ವ್ಯವಸ್ಥೆ ಆಡಳಿತ ಆದ ಮೇಲೆ ಕಾಮಗಾರಿ ಅಲ್ಲಲ್ಲಿ ಮಾಡಲಾಗಿದೆ. ಈ ಕಾಮಗಾರಿ ಪೂರ್ತಿಯಾಗದೇ ರಸ್ತೆ ಮೇಲೆ ನೀರು ಹರಿಯುತ್ತಿದೆ. ದೇಗುಲಗಳ ಮುಂಭಾಗದಲ್ಲೇ ಪ್ಲಾಸ್ಟಿಕ್, ಪ್ಲಾಸ್ಟಿಕ್ ಬಾಟ್ಲಿಗಳು ಕಂಡುಬರುತ್ತಿವೆೆ.
Advertisement
ದೇವಸ್ಥಾನ ರಸ್ತೆಯಲ್ಲಿ ಮಂದಿರ, ನಾಲ್ಕು ದೇವಸ್ಥಾನಗಳಿವೆ. ಶ್ರೀ ಮದನಂತೇಶ್ವರ, ಶ್ರೀ ಪಂಚಲಿಂಗೇಶ್ವರ, ಶ್ರೀ ಅಯ್ಯಪ್ಪ ಸ್ವಾಮಿ, ವೆಂಕಟ್ರಮಣ ದೇವಸ್ಥಾನಗಳಿವೆ. ಅಲ್ಲದೇ ವಿಠ್ಠಲ ಮಂದಿರ, ಅಂಚೆ ಕಚೇರಿಯಿದೆ. ಅದೇ ರಸ್ತೆಯಲ್ಲಿ ಮುಂದೆ ಎಡಕ್ಕೆ ತಿರುಗಿ, ಸ್ವಲ್ಪ ದೂರ ಸಾಗಿದರೆ ದೂರವಾಣಿ ವಿನಿಮಯ ಕೇಂದ್ರವಿದ್ದು ಅಲ್ಲೇ ಧನ್ವಂತರಿ ದೇವಸ್ಥಾನವಿದೆ. ದೇವಸ್ಥಾನ ರಸ್ತೆಯಲ್ಲೇ ಮುಂದೆ ತೆರಳಿದರೆ ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದ ಬೃಹತ್ ಪುಷ್ಕರಿಣಿಯಿದೆ. ಇದೇ ರಸ್ತೆ ಸುರಕ್ಷಾ ಆಸ್ಪತ್ರೆ, ಮೀನು ಮಾರುಕಟ್ಟೆ ಮೊದಲಾದೆಡೆಗೆ ಸಂಪರ್ಕ ಕಲ್ಪಿಸುತ್ತದೆ.
ವಿಟ್ಲ ಪಂಚಲಿಂಗೇಶ್ವರ ದೇಗುಲದ ಮುಂಭಾಗದಲ್ಲಿ ಚರಂಡಿ ಕಾಮಗಾರಿ ಪೂರ್ತಿಯಾಗಿಲ್ಲ. ಪುಷ್ಕರಿಣಿಯ ಮುಂಭಾಗದಲ್ಲಿ ಚರಂಡಿ ಸಮರ್ಪಕವಾಗಿಲ್ಲ. ಪರಿಣಾಮವಾಗಿ ಅಯ್ಯಪ್ಪ ದೇವಸ್ಥಾನದ ಮುಂಭಾಗದಲ್ಲಿ ಕೃತಕ ಪ್ರವಾಹ ಉಂಟಾಗುತ್ತದೆ. ಎಲ್ಲ ಪ್ಲಾಸ್ಟಿಕ್ ಕಸ, ಬಾಟಲಿಗಳು ಇಲ್ಲಿ ಶೇಖರವಾಗುತ್ತಿವೆ. ಇವು ವೆಂಕಟ್ರಮಣ ದೇಗುಲದ ಮುಂಭಾಗದಲ್ಲಿ ರಾಶಿ ಬೀಳುತ್ತವೆ. ವಿಠಲ ಮಂದಿರ, ಅಂಚೆ ಕಚೇರಿ, ಅನಂತೇಶ್ವರ ದೇಗುಲದ ಮುಂಭಾಗದಲ್ಲಿ ಚರಂಡಿಯಿಲ್ಲ. ಇದು ಸಂಪೂರ್ಣವಾಗಿ ಕಸಗಳಿಂದಾವೃತವಾಗಿದೆ. ಮಾತ್ರವಲ್ಲ, ದೂರವಾಣಿ ವಿನಿಮಯ ಕೇಂದ್ರದ ಕಡೆಯಿಂದ ಆಗಮಿಸುವ ನೀರು ಕೂಡ ಟೆಂಪಲ್ ರಸ್ತೆಯಲ್ಲೇ ಬಂದು ಎಲ್ಲೆಂದರಲ್ಲಿ ಸಾಗುತ್ತದೆ. ರೋಗ ಭೀತಿ
ಇದನ್ನು ದುರಸ್ತಿಪಡಿಸದೇ ಇದ್ದಲ್ಲಿ ರೋಗ ಹರಡುವ ಭೀತಿಯಿದೆ. ಇಲ್ಲಿ ನೀರು ನಿಲ್ಲುತ್ತಿರುವುದರಿಂದ ಸೊಳ್ಳೆಗಳ ಕಾಟ ಜಾಸ್ತಿಯಾಗಿದೆ ಎಂದು ಸ್ಥಳೀಯರು ದೂರಿದ್ದಾರೆ. ಚರಂಡಿಯನ್ನು ಸರಿಪಡಿಸಲು ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ವಿಟ್ಲ ಪೇಟೆಯ ಪ್ರಮುಖ ರಸ್ತೆ, ದೇವಸ್ಥಾನ ರಸ್ತೆಯ ಕಾಮಗಾರಿಗಳು ಪೂರ್ತಿಯಾಗಿಲ್ಲ. ಎಷ್ಟೋ ಕಾಮಗಾರಿಗಳು ಬಾಕಿಯಾಗಿವೆ. ದೇವಸ್ಥಾನದ ಪುಷ್ಕರಿಣಿಗೆ ಪ್ಲಾಸ್ಟಿಕ್, ಪ್ಲಾಸ್ಟಿಕ್ ಬಾಟಲಿಗಳು ಬೀಳುವ ಸ್ಥಿತಿ ಇದೆ. ರಸ್ತೆಯ ಮೇಲೆ ನೀರು ಹರಿಯುತ್ತಿದೆ. ಇದಕ್ಕೆ ಪಟ್ಟಣ ಪಂಚಾಯತ್‌ನಲ್ಲಿ ಅನುದಾನವಿಲ್ಲ ಎನ್ನಲಾಗುತ್ತಿದೆ.
Related Articles
Advertisement