Advertisement

Padubidri: ನಿಧಾನವಾಗಿ ಚಲಿಸಿ, ಹೆದ್ದಾರಿ ಕಾಮಗಾರಿ ನಡೆಯುತ್ತಿದೆ!

03:37 PM Nov 19, 2024 | Team Udayavani |

ಪಡುಬಿದ್ರಿ: ಸುರತ್ಕಲ್‌ನಿಂದ ಕಟಪಾಡಿವರೆಗಿನ ರಾಷ್ಟ್ರೀಯ ಹೆದ್ದಾರಿ ನವೀಕರಣ, ಮರುಡಾಮರೀಕರಣ ಭರದಿಂದ ಸಾಗುತ್ತಿದ್ದು, ಈಗ ಹೆಜಮಾಡಿ ಮೂಲಕ ಉಡುಪಿ ಜಿಲ್ಲೆಯನ್ನು ಪ್ರವೇಶಿಸಿದೆ. ಈ ಕಾಮಗಾರಿಗಾಗಿ ಚತುಷ್ಪಥ ಹೆದ್ದಾರಿಯ ಒಂದು ಭಾಗವನ್ನು ಮುಚ್ಚಿ ಒಂದೇ ಭಾಗದಲ್ಲಿ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಹೀಗಾಗಿ ಪಡುಬಿದ್ರಿಯ ಮುಖ್ಯ ಜಂಕ್ಷನ್‌ನಲ್ಲಿ ವಿಪರೀತ ವಾಹನ ದಟ್ಟಣೆ ಕಾಣಿಸಿಕೊಳ್ಳತೊಡಗಿದೆ.

Advertisement

ಕಾರ್ಕಳ-ಬೆಳ್ಮಣ್ಣು ಭಾಗದಿಂದ ಬರುವ ವಾಹನಗಳೂ ಸೇರಿಕೊಳ್ಳುವ ಹಿನ್ನೆಲೆಯಲ್ಲಿ ಪಡುಬಿದ್ರಿ ಜಂಕ್ಷನ್‌ನಲ್ಲಿ ಸಂಚಾರ ಅಯೋಮಯ ಪರಿಸ್ಥಿತಿ ನಿರ್ಮಾಣವಾಗಿದೆ. ಮಾಮೂಲಿಯಲ್ಲೇ ಸಾಕಷ್ಟು ಒತ್ತಡ ಇರುವ ಇಲ್ಲಿ ಈಗ ರಸ್ತೆ ಕಾಮಗಾರಿ ಒತ್ತಡವನ್ನು ಇನ್ನಷ್ಟು ಹೆಚ್ಚಿಸಿದೆ. ವಾಹನದಟ್ಟಣೆಯಿಂದಾಗಿ ಆ್ಯಂಬುಲೆನ್ಸ್‌ ಸೇವೆ, ತುರ್ತಾಗಿ ಹೋಗುವವರು, ರೈಲು ಹಾಗೂ ವಿಮಾನ ನಿಲ್ದಾಣಕ್ಕೆ ತೆರಳುವ ಪ್ರಯಾಣಿಕರು ಆತಂಕಕ್ಕೊಳಗಾಗುತ್ತಿದ್ದಾರೆ.

ಎರಡು ಕಿ.ಮೀ. ರೋಡ್‌ ಬ್ಲಾಕ್‌
ಹೆದ್ದಾರಿ ಕಾಮಗಾರಿ ಭಾಗವಾಗಿ ಪ್ರಸಕ್ತ ಹೆಜಮಾಡಿ ಟೋಲ್‌ನಿಂದ ನಾಗರಾಜ ಎಸ್ಟೇಟ್‌ವರೆಗೆ ಒಂದು ಭಾಗವನ್ನು ಮುಚ್ಚಲಾಗಿದೆ. ಇದು ರಸ್ತೆ ನವೀಕರಣ ಕಾಮಗಾರಿಯಾಗಿದ್ದು, ಹಿಂದಿನ ಡಾಮರೀಕರಣದ ಪದರವನ್ನು ಸಂಪೂರ್ಣ ವಾಗಿ ತೆಗೆದು ಅದರ ಮೇಲೆ ಹೊಸ ಡಾಮರೀಕರಣ ನಡೆಸಲಾಗುತ್ತದೆ. ಮೊದಲು ಮೇಲ್ಪದರವನ್ನು ತೆಗೆದು ಸ್ವತ್ಛಗೊಳಿಸಿದ ಬಳಿಕ ಹೊಸ ಡಾಮರು ಹಾಕಲಾಗುತ್ತಿದೆ. ದಿನಕ್ಕೆ ಒಂದು ಕಿ.ಮೀ. ಹೊಸ ರಸ್ತೆ ನಿರ್ಮಾಣದ ಗುರಿಯೊಂದಿಗೆ ಕಾರ್ಯಾಚರಣೆ ನಡೆಯುತ್ತಿದೆ. ಹಂತ ಹಂತವಾಗಿ ಎರಡು ಕಿ.ಮೀ. ಭಾಗವನ್ನು ಮುಚ್ಚಿ ಡೈವರ್ಷನ್‌ ನೀಡಿ ಕಾಮಗಾರಿ ಮುಂದುವರಿಯುತ್ತಿದೆ.

ಅಕಾಲಿಕ ಮಳೆಯಿಂದಾಗಿ ವಿಳಂಬ
ಸದ್ಯ ಹೆಜಮಾಡಿಯಿಂದ ಕಟಪಾಡಿವರೆಗಿನ ಒಂದು ಭಾಗದ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದೇವೆ. ಮಳೆಯಿಂದಾಗಿ ಸ್ವಲ್ಪ ವಿಳಂಬವಾಗಿದೆ. ದೀಪಾವಳಿಗೆ ತಮ್ಮೂರಿಗೆ ಹೋಗಿದ್ದ ಬಿಹಾರದ ಕಾರ್ಮಿಕರು ಈಗಷ್ಟೇ ಮರಳುತ್ತಿದ್ದಾರೆ. ಹೀಗಾಗಿ ಕಾಮಗಾರಿ ಆರಂಭಿಸಿದ್ದೇವೆ. ದಿನಕ್ಕೆ ಒಂದು ಕಿ.ಮೀ. ರಸ್ತೆ ಮರುನಿರ್ಮಿಸುವ ಗುರಿ ಇದೆ ಎಂದು ಕೆಕೆಆರ್‌ ಗುತ್ತಿಗೆದಾರ ಕಂಪೆನಿಯ ಪ್ರಬಂಧಕ ತಿಮ್ಮಯ್ಯ ಅವರು ಹೇಳಿದ್ದಾರೆ.

ಸಮಸ್ಯೆಗಳು ಏನೇನು?
– ಸೋಮವಾರ ಭಾರೀ ಜನದಟ್ಟಣೆ ಇರುವ ದಿನವಾಗಿದ್ದು, ಪಡುಬಿದ್ರಿ ಜಂಕ್ಷನ್‌ನಲ್ಲಿ ಅಡ್ಡಾದಿಡ್ಡಿ ಸಂಚಾರದಿಂದ ಸಮಸ್ಯೆ ಉಂಟಾಯಿತು.
– ಒಂದೇ ಬದಿ ಸಂಚಾರವಾದ ಕಾರಣ ಹಸೆಮಣೆಗೇರಲಿರುವ ವಧೂವರರಿದ್ದ ಕಾರು ಸಿಕ್ಕಿಹಾಕಿಕೊಂಡಿತ್ತು. ಮುಹೂರ್ತ ಮೀರುತ್ತದೆ ಎಂಬ ಆತಂಕದಿಂದ ಕಾರಿನಲ್ಲಿದ್ದವರು ಆಕ್ರೋಶ ವ್ಯಕ್ತಪಡಿಸುತ್ತಿದ್ದರು.
– ಸಂಚಾರದ ದಟ್ಟಣೆಯನ್ನು ತಪ್ಪಿಸುವುದಕ್ಕಾಗಿ ಕೆಲವರು ಹೆಜಮಾಡಿ ಕೋಡಿ ಭಾಗದ ಮೂಲಕ ಸಾಗುವ ಹಳೆ ಎಂಬಿಸಿ ರಸ್ತೆಯಲ್ಲಿ ವಾಹನಗಳನ್ನು ಚಲಾಯಿಸಿಕೊಂಡು ಹೋಗುವುದರಿಂದ ಅಲ್ಲಿಯೂ ದಟ್ಟಣೆ ಉಂಟಾಗಿದೆ. ನುಗ್ಗಿ ಬರುವ ಎಕ್ಸ್‌ಪ್ರೆಸ್‌ ಮತ್ತು ಇತರ ವಾಹನಗಳ ಭರಾಟೆಯಿಂದ ಪಾದಚಾರಿಗಳು, ದ್ವಿಚಕ್ರ ವಾಹನಿಗರು ಸಂಕಷ್ಟಕ್ಕೆ ಒಳಗಾಗಿದ್ದಾರೆ.
– ಪಡುಬಿದ್ರಿ ಜಂಕ್ಷನ್‌ ಮಾತ್ರವಲ್ಲ, ಹೆದ್ದಾರಿ ಉದ್ದಗಲಕ್ಕೂ ರಾತ್ರಿ ಪಾಳಿಯ ಕಾಮಗಾರಿಯನ್ನು ನಿರ್ವಹಿಸಬೇಕು ಎಂಬ ಬೇಡಿಕೆ ಹೆಚ್ಚಿದೆ.

Advertisement

ನೀರು ನಿಲ್ಲುವ ಜಾಗಗಳ ಎತ್ತರಿಕೆ
ಸುರತ್ಕಲ್‌ನಿಂದ ಕಟಪಾಡಿವರೆಗೆ ಒಂದು ಭಾಗದ ಕಾಮಗಾರಿ ಈಗ ನಡೆಯುತ್ತಿದೆ. ಇನ್ನು ಕಟಪಾಡಿಯಿಂದ ಸುರತ್ಕಲ್‌ವರೆಗೆ ಮತ್ತೂಂದು ಭಾಗದ ಕಾಮಗಾರಿ ನಡೆಯಲಿದೆ. ಕೆಲವು ಕಡೆ ಮಳೆಗಾಲದಲ್ಲಿ ನೀರು ನಿಂತು ಸಮಸ್ಯೆಯಾಗುತ್ತಿತ್ತು. ಈ ಭಾಗದಲ್ಲಿ ರಸ್ತೆಯ ಮಟ್ಟವನ್ನು ಏರಿಸಿ ಕೆಲಸ ಮುಂದುವರಿಸುತ್ತಿದ್ದೇವೆ. ಪಾವಂಜೆಯಲ್ಲಿ ಇದನ್ನು ಮಾಡಲಾಗಿದೆ. ಮೂಲ್ಕಿ ಪೆಟ್ರೋಲ್‌ ಬಂಕ್‌ ಸಮೀಪ, ಪಡುಬಿದ್ರಿ ಬಂಟ್ಸ್‌ ಸಂಘದ ಬಳಿ ಸಹಿತ ಹೆದ್ದಾರಿ ಸಮೀಪ ಗುರುತಿಸಲಾಗಿರುವ ಮಳೆ ನೀರು ಅವಾಂತರದ ಪ್ರದೇಶಗಳ ನಿರ್ವಹಣೆ ಮಾಡಲಾಗುತ್ತದೆ ಎಂದು ಕೆಕೆಆರ್‌ ಗುತ್ತಿಗೆದಾರ ಕಂಪೆನಿಯ ಪ್ರಬಂಧಕ ತಿಮ್ಮಯ್ಯ ತಿಳಿಸಿದರು. ಇದರ ನಡುವೆ ಹೆದ್ದಾರಿ ಫಲಕಗಳು, ಪೋಸ್ಟ್‌ಗಳ ಕಾಮಗಾರಿಯನ್ನೂ ಜನವರಿ ವೇಳೆಗೆ ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಹೇಳಿದರು.

ಶೀಘ್ರ ಕಾಮಗಾರಿ ನಿರ್ವಹಣೆ: ಎಂಜಿನಿಯರ್‌
ಹೆದ್ದಾರಿ ಎಂಜಿನಿಯರಿಂಗ್‌ ವಿಭಾಗ ಮತ್ತು ಗುತ್ತಿಗೆದಾರ ಕಂಪೆನಿ ಕೆಕೆಆರ್‌ ನಡುವಣ ಕನ್ಸಲ್ಟೆಂಟ್‌ ಎಂಜಿನಿಯರ್‌ ರವಿಕುಮಾರ್‌ ಅವರನ್ನು ಕೇಳಿದಾಗ, ಸದ್ಯ ಒಂದು ಬದಿಯ ಕಾಮಗಾರಿ ಮುಗಿಸಲಾಗುತ್ತಿದೆ. ಸುಮಾರು 1.5 ಕಿ.ಮೀ. ದೂರದ ಎರಡು ಪದರದ ಡಾಮರೀಕರಣ ಪೂರ್ಣಗೊಳಿಸಲು ಕನಿಷ್ಠ 2-3 ದಿನಗಳು ಬೇಕಾಗುತ್ತವೆ. ಹೆದ್ದಾರಿ ಜಂಕ್ಷನ್‌ಗಳಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದಂತೂ ಸಹಜ. ಜನರು ಸಹಕರಿಸಬೇಕು. ಹೆದ್ದಾರಿ ಸಂಚಾರ ಹಾಗೂ ಸುರಕ್ಷತೆಯನ್ನು ಪೊಲೀಸ್‌ ಇಲಾಖೆಯೇ ನಿರ್ವಹಿಸುತ್ತಿದೆ ಎಂದಿದ್ದಾರೆ.

ಸಾವಧಾನದಿಂದ ಚಲಿಸಿ: ಪಿಎಸ್‌ಐ
ಹೆದ್ದಾರಿ ಬಳಕೆದಾರರು ಈ ಕಾಮಗಾರಿ ಪೂರ್ಣಗೊಳ್ಳುವ ತನಕ ಈ ಪ್ರದೇಶಗಳಲ್ಲಿ ಎಚ್ಚರಿಕೆ, ಸಾವಧಾನದಿಂದ ವಾಹನ ಚಲಾಯಿಸಬೇಕು ಎಂದು ಪಡುಬಿದ್ರಿ ಠಾಣಾ ಪಿಎಸ್‌ಐ ಪ್ರಸನ್ನ ಮನವಿ ಮಾಡಿದ್ದಾರೆ. ಅವಸರ ಮಾಡದೆ, ಅಪಘಾತಗಳಿಗೆ ಎಡೆ ಇಲ್ಲದೆ ಚಲಿಸುವಂತೆ ವಿನಂತಿಸಿರುವ ಅವರು, ಪಡುಬಿದ್ರಿ ಜಂಕ್ಷನ್‌ ಮತ್ತು ಹೆಜಮಾಡಿ ಟೋಲ ಬೂತ್‌ಗಳ ಮೇಲೆ ಶಕ್ತಿಯುತ ಸಿಸಿಟಿವಿಗಳಿವೆ. ಹೀಗಾಗಿ ಅಪಘಾತ ಮಾಡಿ ತಪ್ಪಿಸಿಕೊಳ್ಳುವ ಪರಿಸ್ಥಿತಿ ಇಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಪ್ಲಾಸ್ಟಿಕ್‌ ಡಿವೈಡರ್‌ಗೆ ಹೊಡೆದು ಪರಾರಿ
ಹೆದ್ದಾರಿಯ ಒಂದೇ ಭಾಗದಲ್ಲಿ ದ್ವಿಮುಖ ಸಂಚಾರಕ್ಕೆ ಅವಕಾಶ ನೀಡಲಾಗಿದ್ದು, ಇದರ ಪಾಲನೆಗಾಗಿ ಪ್ಲಾಸ್ಟಿಕ್‌ ಡಿವೈಡರ್‌ಗಳನ್ನು ಇಡಲಾಗಿದೆ. ರಾತ್ರಿಯ ಹೊತ್ತು ಕೆಲವು ಘನವಾಹನಗಳು ಅವುಗಳ ಮೇಲೆಯೇ ಸಂಚರಿಸಿ ಪುಡಿಗಟ್ಟುತ್ತಿವೆ. ಹೀಗಾಗಿ ರಾತ್ರಿಯ ವೇಳೆ ಇವುಗಳನ್ನು ತೆಗೆದಿಡಬಹುದು ಎಂಬ ಸಲಹೆಯನ್ನು ಸ್ಥಳೀಯರು ನೀಡಿದ್ದಾರೆ.

ಈ ನಡುವೆ ಕೇರಳ ಮಾದರಿಯಲ್ಲಿ ರಾತ್ರಿ ಪಾಳಿಯಲ್ಲೂ ಕಾಮಗಾರಿ ನಡೆಸಬೇಕು ಎಂಬ ಆಗ್ರಹ ಕೇಳಿಬರುತ್ತಿದೆ. ಆದರೆ, ಲೈವ್‌ ಟ್ರಾಫಿಕ್‌ ಇಲ್ಲದ ಜಾಗದಲ್ಲಿ ರಾತ್ರಿ ಪಾಳಿಯಲ್ಲಿ ಕಾಮಗಾರಿ ನಡೆಸಬಹುದು. ಆದರೆ ಇಲ್ಲಿ ಅದು ಸಾಧ್ಯವಿಲ್ಲ ಎಂದು ಪ್ರಬಂಧಕ ತಿಮ್ಮಯ್ಯ ಹೇಳಿದರು.

-ಆರಾಮ

Advertisement

Udayavani is now on Telegram. Click here to join our channel and stay updated with the latest news.

Next