Advertisement

Vitla: ಇಂದಿರಾ ಕ್ಯಾಂಟೀನ್‌ ಊಟ ಇನ್ನೂ ಲೇಟಿದೆ!

12:40 PM Nov 27, 2024 | Team Udayavani |

ವಿಟ್ಲ: ವಿಟ್ಲದ ಶಾಲಾ ರಸ್ತೆಯಲ್ಲಿರುವ ಗ್ರಾಮ ಲೆಕ್ಕಿಗರ ಕಚೇರಿ ಬಳಿ ಸರಕಾರಿ ನಿವೇಶನದಲ್ಲಿ ಎಂಟು ತಿಂಗಳ ಹಿಂದೆ ಆರಂಭಗೊಂಡ ಇಂದಿರಾ ಕ್ಯಾಂಟೀನ್‌ ನಿರ್ಮಾಣ ಕಾಮಗಾರಿ ಇನ್ನೂ ಪೂರ್ತಿಯಾಗಿಲ್ಲ! 87 ಲಕ್ಷ ರೂ. ವೆಚ್ಚದಲ್ಲಿ ಅಡುಗೆ ಕೋಣೆ ಸಹಿತ ಇಂದಿರಾ ಕ್ಯಾಂಟೀನ್‌ ಕಾಮಗಾರಿ ಆರು ತಿಂಗಳಲ್ಲಿ ಪೂರ್ಣವಾಗಬೇಕಾಗಿತ್ತು.

Advertisement

ಪ್ರಸಕ್ತ ಕಟ್ಟಡ ನಿರ್ಮಾಣವಾಗಿದೆ. ಆದರೆ ಗಾರೆ ಕಾಮಗಾರಿ, ಎಲೆಕ್ಟ್ರಿಕಲ್‌ ಕೆಲಸ ಆಗಿಲ್ಲ. ಸುತ್ತ ಆವರಣ ಗೋಡೆ ಆಗಿಲ್ಲ. ಹತ್ತಿರದಲ್ಲೇ ಶಾಲೆ ಇದ್ದು ಚಿಕ್ಕ ಮಕ್ಕಳು ಓಡಾಡುವ ಜಾಗವಾಗಿರುವುದರಿಂದ ಕಾಮಗಾರಿ ಮುಗಿಯದೆ ಶಾಲೆಯ ಚಟುವಟಿಕೆಗಳಿಗೂ ಸಮಸ್ಯೆಯಾಗುತ್ತಿದೆ.

ಶಾಲೆ ಜಾಗ ಕಸಿಯಲಾಯಿತೇ?
ವಿಟ್ಲ ದ.ಕ. ಜಿಲ್ಲಾ ಪಂಚಾಯತ್‌ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಹೆಸರಿನಲ್ಲಿ 4.72 ಎಕ್ರೆ ನಿವೇಶನವಿದೆ. ಶಾಲೆಯ ಆವರಣದಲ್ಲೇ ಬಾಕಿಮಾರುಗದ್ದೆಗೆ ಹೋಗುವ ದಾರಿ ಇತ್ತು. ಅದು ರಸ್ತೆಯಾಗಿ ಎರಡು ಶಾಲಾ ಕಟ್ಟಡದ ನಡುವೆ ಸಾರ್ವಜನಿಕರು ಓಡಾಡುವಂತಾಗಿದೆ. ವಾಹನಗಳು ಕೂಡಾ ಇಲ್ಲೇ ಸಂಚರಿಸುತ್ತವೆ. ಕಂದಾಯ ಇಲಾಖೆಯ ನಾಡಕಚೇರಿ ಕಟ್ಟಡಕ್ಕಾಗಿ ಇನ್ನಷ್ಟು ಜಾಗವನ್ನು ಬಳಸಿಕೊಳ್ಳಲಾಗಿದೆ. ಎರಡೂ ಕಟ್ಟಡಗಳಿಗೂ ಹಲವು ವಿಘ್ನಗಳು ಎದುರಾಗಿದ್ದು, ಇದೀಗ ಇಂದಿರಾ ಕ್ಯಾಂಟೀನ್‌ ಕೂಡಾ ಅರ್ಧಂಬರ್ಧ ಕಾಮಗಾರಿಯಿಂದ ಸ್ಥಗಿತಗೊಂಡಿದೆ.

ನೋಂದಣಿ ಕಚೇರಿ, ನಾಡ ಕಚೇರಿ ಪಕ್ಕದಲ್ಲೇ ಇಂದಿರಾ ಕ್ಯಾಂಟೀನ್‌ ನಿರ್ಮಾಣಕ್ಕೆ ನಿವೇಶನ ನಿಗದಿಪಡಿಸಲಾಗಿದೆ. ಪಟ್ಟಣ ಪಂಚಾಯತ್‌ ಆಡಳಿತಾಧಿಕಾರಿಗಳು ಇದೇ ಜಾಗ ಸೂಕ್ತವೆಂದು ಗುರುತಿಸಿದ್ದರು. ಆದರೆ ಇದು ಸರಕಾರಿ ಶಾಲೆಯ ಜಾಗವೆಂದು ಹೇಳಲಾಗಿದೆ. ಸರಕಾರಿ ಜಾಗವಾಗಿದ್ದರಿಂದ ಯಾವುದೇ ಆಕ್ಷೇಪ ಕೇಳಿಬಂದಿಲ್ಲ.
ಟೆಂಡರ್‌ ಪ್ರಕ್ರಿಯೆ ಮೂಲಕ ಬೆಂಗಳೂರು ಮೆ.ಎಕ್ಸೆಲ್‌ ಪ್ರಿಕಾಸ್ಟ್‌ ಸೊಲ್ಯುಶನ್‌ ಲಿಮಿಟೆಡ್‌ ಸಂಸ್ಥೆಯು ಗುತ್ತಿಗೆಯನ್ನು ಪಡೆದುಕೊಂಡಿದೆ.

-ಉದಯಶಂಕರ್‌ ನೀರ್ಪಾಜೆ

Advertisement
Advertisement

Udayavani is now on Telegram. Click here to join our channel and stay updated with the latest news.

Next