Advertisement

ಕಾಪು ಪೇಟೆ ಜನತೆಯ ದಶಕಗಳ ಸಮಸ್ಯೆಗೆ ಕೊನೆಗೂ ಮುಕ್ತಿ!

03:00 AM Jun 02, 2018 | Team Udayavani |

ವಿಶೇಷ ವರದಿ – ಕಾಪು: ಕಾಪು ಪೇಟೆಯ ಜನತೆಯನ್ನು ದಶಕಗಳಿಂದಲೂ ಕಾಡುತ್ತಿದ್ದ ಮಳೆ ನೀರು ಹರಿಯುವ ಚರಂಡಿ ಸಮಸ್ಯೆಗೆ ಶಾಶ್ವತ ಮುಕ್ತಿ ಒದಗಿಸಿ ಕೊಡುವ ನಿಟ್ಟಿನಲ್ಲಿ ಪುರಸಭೆ ಹೆಜ್ಜೆಯನ್ನಿರಿಸಿದೆ. ಪ್ರಥಮ ಹಂತದಲ್ಲಿ ಚರಂಡಿ ಪ್ರದೇಶದ ಒತ್ತುವರಿ ತೆರವುಗೊಳಿಸಿ, ಚರಂಡಿಯ ಹೂಳೆತ್ತುವಿಕೆ ನಡೆಸುವ ಕಾಮಗಾರಿಗೆ ಚಾಲನೆ ನೀಡಲಾಗಿದೆ.

Advertisement

ಎಲ್ಲಿಂದ ಎಲ್ಲಿಯವರೆಗೆ? 
ಪೊಲಿಪು ಮಸೀದಿಯಿಂದ ಹಿಡಿದು ಕಾಪು ವಿದ್ಯಾನಿಕೇತನ ಜಂಕ್ಷನ್‌ವರೆಗಿನ ಸುಮಾರು 600 ಮೀಟರ್‌ ದೂರದ ವರೆಗಿನ ಪ್ರದೇಶದಲ್ಲಿ ಯಾವುದೇ ರೀತಿಯಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆಗಳಿಲ್ಲ. ಕಾಪು ಪೇಟೆಯಲ್ಲಿ 1 ಗಂಟೆ ಜೋರಾಗಿ ಮಳೆ ಸುರಿದರೆ, ಅವಾಂತರ ಸೃಷ್ಟಿಯಾಗುತ್ತಿತ್ತು. ಮೊನ್ನೆ ಮಂಗಳವಾರದ ಮಳೆ ಅವಾಂತರ, ಒಳಚರಂಡಿ ಯೋಜನೆಯ ಮ್ಯಾನ್‌ ಹೋಲ್‌ ಕುಸಿತದ ಬಳಿಕ ಎಚ್ಚೆತ್ತುಕೊಂಡಿರುವ ಕಾಪು ಪುರಸಭೆ ಚರಂಡಿ ಕಾಮಗಾರಿ ಪ್ರಾರಂಭಿಸಿದೆ.

16 ವರ್ಷಗಳ ಬಳಿಕ ಕಾಮಗಾರಿ 
ಕಾಪು ಗ್ರಾಮ ಪಂಚಾಯತ್‌ ಅಸ್ತಿತ್ವದಲ್ಲಿದ್ದಾಗ 2001-2002ನೇ ಇಸವಿಯಲ್ಲಿ ಕಾಪು ಅಭಿವೃದ್ಧಿ ಸಮಿತಿಯ ನೇತೃತ್ವದಲ್ಲಿ ಕಾಪು ಪೇಟೆಯಲ್ಲಿ ಚರಂಡಿ ರಚನೆ ಕಾಮಗಾರಿ ನಡೆದಿತ್ತು. ಬಳಿಕ ಚರಂಡಿ ರಚನೆಗೆ ಚಾಲನೆ ನೀಡಲಾಗಿದ್ದರೂ ಅರ್ಧಕ್ಕೇ ನಿಲುಗಡೆಯಾಗಿತ್ತು. ಬಳಿಕ ಹೊಸದಾಗಿ ಪೇಟೆಯ ಒಳಚರಂಡಿ ನೀರು ಸರಬರಾಜು ಯೋಜನೆಗಾಗಿ 3 ಕೋ. ರೂ. ವೆಚ್ಚದ ಕಾಮಗಾರಿಗೆ ಚಾಲನೆ ನೀಡಲಾಗಿತ್ತು.

ಕುಸಿತಕ್ಕೂ ಚರಂಡಿ ಕಾರಣ
ಚರಂಡಿ ವ್ಯವಸ್ಥೆಯಿಲ್ಲದ ಕಾರಣ ಒಳ ಚರಂಡಿ ನೀರು ಸರಬರಾಜು ಯೋಜನೆಯ ಕಾಮಗಾರಿಯ ಸಂದರ್ಭ ಅಳವಡಿಸಲಾಗಿದ್ದ ಮ್ಯಾನ್‌ಹೋಲ್‌ ಮತ್ತು ಅದರ ಪೈಪ್‌ ಲೈನ್‌ ನೊಳಗೆ ಮಳೆ ನೀರು ನುಗ್ಗಿ ಮ್ಯಾನ್‌ ಹೋಲ್‌ ಕುಸಿತಕ್ಕೊಳಗಾಗಿತ್ತು. ಕಾಪು ಅಭಿವೃದ್ಧಿ ಸಮಿತಿ ಅಧ್ಯಕ್ಷ ಮತ್ತು ಸ್ವತಃ ಗುತ್ತಿಗೆದಾರರಾಗಿರುವ ವಾಸುದೇವ ಶೆಟ್ಟಿ ಅವರು ಮ್ಯಾನ್‌ಹೋಲ್‌ ಕುಸಿತಕ್ಕೆ ಅಸಮರ್ಪಕ ಚರಂಡಿ ವ್ಯವಸ್ಥೆಯೇ ಮುಖ್ಯ ಕಾರಣ ಎಂದು ಆರೋಪಿಸಿದ್ದರು.

ಜಿಲ್ಲಾಧಿಕಾರಿ ಅನುಮತಿ ಪಡೆದು ಕಾಮಗಾರಿ
ಪೇಟೆಯಲ್ಲಿ ಸಮರ್ಪಕ ಚರಂಡಿಯ ವ್ಯವಸ್ಥೆಯಿಲ್ಲದೇ ಮಳೆ ನೀರು ಹರಿಯಲು ತುಂಬಾ ತೊಂದರೆಯಾಗುತ್ತಿತ್ತು. ಜಿಲ್ಲಾಧಿಕಾರಿಗಳ ಒಪ್ಪಿಗೆ ಪಡೆದು ತತ್‌ಕ್ಷಣಕ್ಕೆ ಚರಂಡಿ ಬಿಡಿಸುವಿಕೆ, ಅತಿಕ್ರಮಣ ತೆಗೆಯುವಿಕೆ ಮತ್ತು ಹೂಳೆತ್ತುವಿಕೆ ಕಾಮಗಾರಿ ನಡೆಸಲಾಗುತ್ತಿದೆ.  
– ಶೀನ ನಾಯ್ಕ, ಪುರಸಭೆ ಮುಖ್ಯಾಧಿಕಾರಿ

Advertisement

ಪುರಸಭೆ ಕೆಲಸ ಸ್ವಾಗತಾರ್ಹ
ಪುರಸಭೆ ವತಿಯಿಂದ ಕಾಪು ಪೇಟೆಯಲ್ಲೇ ಚರಂಡಿ ರಚನೆ ಮತ್ತು ಚರಂಡಿ ಹೂಳೆತ್ತುವಿಕೆ ಕಾಮಗಾರಿಗೆ ಚಾಲನೆ ದೊರಕಿರುವುದು ಸಂತಸದಾಯಕವಾಗಿದೆ. ಈ ಕಾಮಗಾರಿ ಇಡೀ ಕಾಪು ಪೇಟೆಯಲ್ಲಿ ನಡೆಯಬೇಕಿದೆ. ಈ ಕೆಲಸ ಯಾವತ್ತೋ ನಡೆಯಬೇಕಿತ್ತು.
– ಯೋಗೀಶ್‌ ರೈ, ಕಾಪು ಗ್ರಾ.ಪಂ. ಮಾಜಿ ಅಧ್ಯಕ್ಷ  

Advertisement

Udayavani is now on Telegram. Click here to join our channel and stay updated with the latest news.

Next