Advertisement
ಕ್ಷೇತ್ರ ಪುನರ್ ವಿಂಗಡನೆ ಮತ್ತು ಮೀಸಲಾತಿ ನಿಗದಿ ಪ್ರಕ್ರಿಯೆಯನ್ನು 12 ವಾರಗಳಲ್ಲಿ ಪೂರ್ಣಗೊಳಿಸುವಂತೆ 2022ರ ಮೇ 24ರಂದು ಹೈಕೋರ್ಟ್ ಆದೇಶಿಸಿದ್ದು, ರಾಜ್ಯ ಚುನಾವಣ ಆಯೋಗದ ಪ್ರಕಾರ ಆ ಗಡುವು ಆಗಸ್ಟ್ 16ಕ್ಕೆ ಮುಗಿಯಲಿದೆ.
ಕ್ಷೇತ್ರ ಪುನರ್ ವಿಂಗಡನೆ ಹಾಗೂ ಒಬಿಸಿ ಸಹಿತ ಒಟ್ಟಾರೆ ಮೀಸಲು ನಿಗದಿಯನ್ನು 12 ವಾರಗಳಲ್ಲಿ ಪೂರ್ಣಗೊಳಿಸಬೇಕು. ಅದಾದ ಒಂದು ವಾರದಲ್ಲಿ ಚುನಾವಣ ಆಯೋಗ ಚುನಾವಣ ಪ್ರಕ್ರಿಯೆ ಆರಂಭಿಸಬೇಕೆಂದು ಹೈಕೋರ್ಟ್ ಹೇಳಿತ್ತು. ಆದರೆ ಈವರೆಗೆ ಕ್ಷೇತ್ರಗಳ ಪುನರ್‌ವಿಂಗಡನೆಯ ಕರಡನ್ನೂ ಪ್ರಕಟಿಸಲಾಗಿಲ್ಲ. ಕ್ಷೇತ್ರಗಳು ಅಂತಿಮಗೊಂಡ ಬಳಿಕವಷ್ಟೇ ಮೀಸಲಾತಿ ವಿಚಾರ ಬರುತ್ತದೆ. ಕ್ಷೇತ್ರ ಮತ್ತು ಮೀಸಲಾತಿ ಚಿತ್ರಣ ಸ್ಪಷ್ಟವಾದ ಬಳಿಕ ಇತರ ಪ್ರಕ್ರಿಯೆ ಆರಂಭಿಸಬೇಕಾಗುತ್ತದೆ. ಕ್ಷೇತ್ರ ಪುನರ್ ವಿಂಗಡನೆ ಪ್ರಕ್ರಿಯೆ ನಿಗದಿತ ವೇಗದಲ್ಲಿ ಸಾಗುತ್ತಿಲ್ಲ. ಜುಲೈ ತಿಂಗಳಲ್ಲೇ ಕರಡು ಹೊರಡಿ ಸಲಾಗುತ್ತದೆ ಎನ್ನಲಾಗಿತ್ತು. ಆದರೆ ಸೀಮಾ ನಿರ್ಣಯ ಆಯೋಗ ಇನ್ನೂ ಕರಡು ಪ್ರಕಟಿಸಿಲ್ಲ. ಅಲ್ಲದೆ, ಒಬಿಸಿ ವರ್ಗಗಳಿಗೆ ಮೀಸಲಾತಿ ನೀಡುವ ಸಂಬಂಧ ನ್ಯಾ| ಭಕ್ತವತ್ಸಲ ಸಮಿತಿ ಶಿಫಾರಸು ಆಧರಿಸಿ ಮೀಸಲಾತಿ ನಿಗದಿಗೆ ಕ್ರಮ ಕೈಗೊಳ್ಳಬೇಕಾಗಿದೆ. ಸದ್ಯದ ಸ್ಥಿತಿಯನ್ನು ಗಮನಿಸಿದರೆ ಇದು ಅಷ್ಟೊಂದು ಬೇಗ ಮುಗಿಯವ ಕೆಲಸವಲ್ಲ.
Related Articles
ಕಳೆದ ಎಪ್ರಿಲ್ , ಮೇ ಮತ್ತು ಜೂನ್ ತಿಂಗಳಲ್ಲಿ ಅವಧಿ ಪೂರ್ಣ ಗೊಂಡ ರಾಜ್ಯದ ಜಿ.ಪಂ. ಹಾಗೂ ತಾ.ಪಂ. ಗಳಿಗೆ ಸಾರ್ವತ್ರಿಕ ಚುನಾ ವಣೆ ನಡೆಸಲು ಸಿದ್ಧತೆ ಆರಂಭಿಸಿದ್ದ ಆಯೋಗವು ಈ ಸಂಬಂಧ ಕ್ಷೇತ್ರ ಪುನರ್‌ವಿಂಗಡನೆ ಮಾಡಿ ಮತದಾರರ ಅಂತಿಮ ಪಟ್ಟಿ ಪ್ರಕಟಿಸಿತ್ತು. ಅಂತೆಯೇ ಮೀಸಲಾತಿ ಕರಡನ್ನೂ ಪ್ರಕಟಿಸಲಾಗಿತ್ತು. ಚುನಾವಣೆಗೆ ದಿನಾಂಕ ಘೋಷಿಸಬೇಕು ಎನ್ನುವಷ್ಟರಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಮತ್ತು ಮೀಸಲಾತಿ ಅಧಿಕಾರವನ್ನು ಚುನಾವಣ ಆಯೋಗದಿಂದ ಹಿಂಪಡೆದ ಸರಕಾರ, ಸೀಮಾ ನಿರ್ಣಯ ಆಯೋಗವನ್ನು ರಚಿಸಿತ್ತು. ಇದನ್ನು ಪ್ರಶ್ನಿಸಿ ಚುನಾವಣ ಆಯೋಗ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.
Advertisement
ಜಿ.ಪಂ., ತಾ.ಪಂ. ಕ್ಷೇತ್ರಗಳ ಪುನರ್ ವಿಂಗಡಣೆ ಪ್ರಕ್ರಿಯೆ ಮುಗಿದಿದೆ. ಆದಷ್ಟು ಬೇಗ ಕರಡು ಹೊರಡಿಸಲಾಗುವುದು.– ಎಂ. ಲಕ್ಷ್ಮೀನಾರಾಯಣ, ಅಧ್ಯಕ್ಷರು, ಸೀಮಾ ನಿರ್ಣಯ ಆಯೋಗ. ನಿಗದಿತ ಸಮಯದಲ್ಲಿ ಚುನಾವಣೆ ನಡೆಯಬೇಕು ಎಂಬುದು ಆಯೋಗದ ನಿಲುವು. ಅದಕ್ಕಾಗಿಯೇ ಆಯೋಗ ಹೈಕೋರ್ಟ್ ಮೊರೆ ಹೋಗಿದೆ. ನ್ಯಾಯಾಲಯ ಸರಕಾರಕ್ಕೆ 12 ವಾರಗಳ ಗಡುವು ನೀಡಿದ್ದು, ಅದರ ಬಗ್ಗೆ ಸರಕಾರದ ಅಭಿಪ್ರಾಯ ಮತ್ತು ನ್ಯಾಯಾಲಯದಲ್ಲಿ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
– ಡಾ| ಬಿ. ಬಸವರಾಜು,
ರಾಜ್ಯ ಚುನಾವಣ ಆಯುಕ್ತರು – ರಫೀಕ್ ಅಹ್ಮದ್