Advertisement

ವದಂತಿ ನಂಬಬೇಡಿ; ಸೆಪ್ಟಂಬರ್‌ ಮೊದಲ ವಾರ ಬ್ಯಾಂಕ್‌ ತೆರೆದಿರುತ್ತದೆ

04:16 PM Aug 31, 2018 | Team Udayavani |

ಹೊಸದಿಲ್ಲಿ : ‘ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವದಂತಿಗಳನ್ನು ನಂಬಬೇಡಿ; ಸೆಪ್ಟೆಂಬರ್‌ ಮೊದಲ ವಾರದಲ್ಲಿ ಬ್ಯಾಂಕುಗಳು ತೆರೆದೇ ಇರುತ್ತವೆ; ಎಟಿಎಂ ಗಳು ಎಂದಿನಂತೆಯೇ ಕೆಲಸ ಮಾಡುತ್ತಿರುತ್ತವೆ’ ಎಂದು ಬ್ಯಾಂಕ್‌ ನೌಕರರ ರಾಷ್ಟ್ರೀಯ ಸಂಘಟನೆ ಉಪಾಧ್ಯಕ್ಷ ಅಶ್ವನಿ ರಾಣಾ ಹೇಳಿದ್ದಾರೆ.

Advertisement

‘ಸೆಪ್ಟಂಬರ್‌ ಮೊದಲ ವಾರದಲ್ಲಿ ದೇಶಾದ್ಯಂತ ಬ್ಯಾಂಕುಗಳು ಆರು ದಿನ ಬಂದ್‌ ಇರುತ್ತವೆ’ ಎಂಬ ವದಂತಿ ಸಾಮಾಜಿಕ ಮಾಧ್ಯಮಗಳಲ್ಲಿ ಬೇಕಾಬಿಟ್ಟಿ ಹರಿದಾಡುತ್ತಿರುವುದಕ್ಕೆ ಪ್ರತಿಯಾಗಿ ರಾಣಾ ಈ ಹೇಳಿಕೆಯನ್ನು ನೀಡಿದ್ದಾರೆ. 

ಕಳೆದ ಕೆಲ ದಿನಗಳಿಂದ ವಾಟ್ಸಾಪ್‌ ನಲ್ಲಿ ಸೆಪ್ಟೆಂಬರ್‌ ಮೊದಲ ವಾರದಲ್ಲಿ ಬ್ಯಾಂಕುಗಳ ಆರು ದಿನಗಳ ರಜೆ ಕುರಿತ ಸಂದೇಶ ಏಕ್‌ದಂ ವೈರಲ್‌ ಆಗಿತ್ತು. ಅದರ ಪ್ರಕಾರ ಬ್ಯಾಂಕುಗಳು ಸೆ.2ರಿಂದ5 ಮತ್ತು ಸೆ.8ರಿಂದ 9, ವಾರಾಂತ್ಯ ಸೇರಿ ಒಟ್ಟು 6 ದಿನಗಳ ಕಾಲ ಸೆಪ್ಟಂಬರ್‌ ಮೊದಲ ವಾರದಲ್ಲಿ ಮುಚ್ಚಿರುತ್ತವೆ ಎಂಬ ವದಂತಿಯನ್ನು ಹರಡಲಾಗಿತ್ತು. 

ಸೆ.3ರ ಸೋಮವಾರ ಕೃಷ್ಣ ಜನ್ಮಾಷ್ಟಮಿಯೊಂದಿಗೆ ಆರಂಭಗೊಳ್ಳುವ ವಾರದಲ್ಲಿ ಬ್ಯಾಂಕುಗಳು ಪಿಂಚಣಿ ಬೇಡಿಕೆಯನ್ನು ಆಗ್ರಹಿಸಿ ಮುಷ್ಕರ ನಿರತವಾಗಿರುತ್ತವೆ ಎಂದು ವಾಟ್ಸಾಪ್‌ ಮೆಸೇಜ್‌ ಹೇಳಿತ್ತು. ಸೆ.4 ಮತ್ತು 5ರ ಆರ್‌ಬಿಐ ನೌಕರರ ಮುಷ್ಕರವನ್ನು ಎಲ್ಲ ಬ್ಯಾಂಕ್‌ ನೌಕರರ ಮುಷ್ಕರ ಎಂಬ ರೀತಿಯಲ್ಲಿ ತಪ್ಪಾಗಿ ಗ್ರಹಿಸಿ ವಾಟ್ಸಾಪ್‌ ಸಂದೇಶ ಹರಡಿಸಲಾಗಿತ್ತು. 

ಸೆ.3ರ ಜನ್ಮಾಷ್ಟಮಿ ರಜೆ ದೇಶಾದ್ಯಂತದ ಬ್ಯಾಂಕುಗಳ ರಜೆ ಆಗಿರುವುದಿಲ್ಲ ಎಂಬುದನ್ನು ಗ್ರಾಹಕರು ಗಮನಿಸಬೇಕು; ಕೆಲವು ರಾಜ್ಯಗಳಲ್ಲಿ ಮಾತ್ರವೇ ಸೆ.3ರಂದು Negotiable Instrument Act ಪ್ರಕಾರ ರಜೆ ಇರುತ್ತದೆ. ಹಾಗಿದ್ದರೂ ಅದರಿಂದ ಆನ್‌ಲೈನ್‌ ಬ್ಯಾಂಕಿಂಗ್‌ ಸೇವೆಗೆ ಅಥವಾ ಎಟಿಎಂ ಸೇವೆಗೆ ಯಾವುದೇ ಬಾಧೆ ಇರುವುದಿಲ್ಲ ಎಂದು ಎಚ್‌ ಡಿ ಎಫ್ ಸಿ ಬ್ಯಾಂಕ್‌ ಅಧಿಕಾರಿ ಹೇಳಿದ್ದಾರೆ. 

Advertisement

ದೇಶಾದ್ಯಂತ ಇರುವ ಆರ್‌ಬಿಐ ಒಟ್ಟು 31 ಪ್ರಾದೇಶಿಕ ಮತ್ತು ಉಪ ಕಾರ್ಯಾಲಯಗಳ ಪೈಕಿ 16 ಮಾತ್ರವೇ ಸೆ.3ರಂದು ಜನ್ಮಾಷ್ಟಮಿ ಪ್ರಯುಕ್ತ ಮುಚ್ಚಿರುತ್ತವೆ ಎಂದು ವೆಬ್‌ ಸೈಟ್‌ ಹೇಳಿದೆ. 

Advertisement

Udayavani is now on Telegram. Click here to join our channel and stay updated with the latest news.

Next