ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಯಶಸ್ಸಿನ ಮೆಟ್ಟಿಲೇರಬೇಕು ಎಂಬ ಉದ್ದೇಶದಿಂದ ಅನೇಕ ಕೆಲಸ ಕಾರ್ಯಗಳನ್ನು ಹುಡುಕಾಟದಲ್ಲಿಯೇ ಸಮಯ ಕಳೆಯುತ್ತಾನೆ. ಆದರೂ ಯಾವುದೇ ಕೆಲಸವೂ ದೊರೆಯುವುದಿಲ್ಲ. ಕೊನೆಗೆ ಜೀವನದ ದಾರಿ ತಿಳಿಯಲಾರದೆ ತಾನು ನಂಬಿದ ಒಬ್ಬ ಗುರೂಜಿ ಬಳಿ ಬಂದು ತನ್ನ ಕಷ್ಟವನ್ನು ಹೇಳುತ್ತಾನೆ.
ಆತನ ಕಷ್ಟಗಳನ್ನು ಆಲಿಸಿದ ಗುರೂಜಿ ಅವನಿಗೆ ಒಂದು ಹೂವಿನ ತೋಟಕ್ಕೆ ಹೋಗಿ ಒಂದು ಸುಂದರ ಪುಷ್ಪ ಕಿತ್ತುಕೊಂಡು ಬಾ, ಆದರೆ ಒಂದು ಷರತ್ತು. ಒಂದು ಪುಷ್ಪವನ್ನು ತಿರಸ್ಕರಿಸಿ ಮುಂದೆ ಸಾಗಿದರೆ ಅದನ್ನು ಮರಳಿ ಆಯ್ಕೆ ಮಾಡಕೂಡದು ಎಂಬ ಚಟುವಟಿಕೆ ನೀಡುತ್ತಾನೆ.
ಗುರೂಜಿಯ ಮಾತಿನಂತೆ ವ್ಯಕ್ತಿ ತೋಟಕ್ಕೆ ಹೋಗುತ್ತಾನೆ. ಆಯ್ದುಕೊಳ್ಳಲು ತೋಟದ ತುಂಬಾ ಸೊಗಸಾದ ಪುಷ್ಪಗಳನ್ನು ನೋಡಿ ಹಿಗ್ಗಿದ. ಅನಂತರ ಪುಷ್ಪವನ್ನು ಆಯ್ದುಕೊಳ್ಳಲು ಹೋದಾಗ ಸ್ವಲ್ಪ ದೂರ ಸಾಗಿದಾಗ ಒಂದು ಸುಂದರ ಪುಷ್ಪದ ತುಂಬಾ ದುಂಬಿಗಳು ತುಂಬಿರುತ್ತವೆ. ಅದನ್ನು ತಿರಸ್ಕರಿಸಿ ಮುಂದೆ ಸಾಗಿದಾಗ ಮತ್ತೂಂದು ಪುಷ್ಪ ನೋಡಿದ ದಳಗಳು ಉದುರಿದ ಹಾಗೆ ಕಾಣಿಸಿತು. ಮುಂಚೆ ನೋಡಿದ ಪುಷ್ಪಕ್ಕೆ ಹೋಲಿಸಿ ಆತ ಅದನ್ನು ಸಹ ತಿರಸ್ಕರಿಸಿ ಮುಂದೆ ಸುಂದರ ಹೂವು ಸಿಗಬಹುದು ಎಂಬ ಆಸೆಯಿಂದ ಮತ್ತೆ ಮುಂದೆ ಸಾಗಿದ. ಇದೇ ರೀತಿ ಒಂದು ಹೂವಿಗೆ ಮತ್ತೂಂದು ಹೂವನ್ನು ಹೋಲಿಸಿ ನೋಡುತ್ತಾ ಕೊನೆಗೆ ತೋಟದ ಅಂಚಿನಲ್ಲಿ ಬಂದಾಗ ಪುಷ್ಪಗಳೇ ಕಡಿಮೆಯಾಗುತ್ತವೆ. ಕೊನೆಗೆ ಅನಿವಾರ್ಯವಾಗಿ ಒಂದು ಬಾಡಿ ಬತ್ತಲಾದ ಪುಷ್ಪವನ್ನು ಆಯ್ಕೆ ಮಾಡುತ್ತಾನೆ.
ಆಯ್ಕೆ ಮಾಡಿದ ಪುಷ್ಪವನ್ನು ತಂದು ಗುರೂಜಿಗಳಿಗೆ ತೋರಿಸಿದಾಗ, ಗುರುಗಳು ಯಾಕಪ್ಪಾ ನಿನಗೆ ಅಷ್ಟು ದೊಡ್ಡ ಹೂದೋಟದಲ್ಲಿ ಒಂದು ಸುಂದರ ಹೂವು ದೊರಕಲಿಲ್ಲವೇ ಎಂದು ಕೇಳಿದಾಗ ಅವನಿಗೆ ಬೇಸರ ಉಂಟಾಗುತ್ತದೆ.
ಆಗ ಗುರುಗಳು ನೀನು ಜೀವನದಲ್ಲಿ ಯಶಸ್ಸು ಕಾಣದಿರಲು, ದೊರೆತ ಅನೇಕ ಅವಕಾಶಗಳನ್ನು ಕೈಚೆಲ್ಲಿರುವುದೇ ಮೂಲ ಕಾರಣ. ಅವಕಾಶಗಳು ಜೀವನದಲ್ಲಿ ಪದೇ ಪದೇ ಬರುವುದಿಲ್ಲ, ಬಂದಾಗ ಅವುಗಳನ್ನು ಸಮರ್ಪಕವಾಗಿ ಸದುಪಯೋಗ ಪಡಿಸಿಕೊಳ್ಳಬೇಕು ಹೊರತು ಅತಿಯಾಸೆಯಿಂದ ಕಡೆಗಣಿಸಬಾರದು ಎಂದು ಆತನಿಗೆ ಉಪದೇಶ ನೀಡಿದರು.
ಗುರುಗಳ ಉಪದೇಶವನ್ನು ಅರಿತುಕೊಂಡು ತನ್ನ ಜೀವನದಲ್ಲಿ ಯಾವುದೇ ಅವಕಾಶಗಳು ದೊರೆತರೂ ಸಹ ಕಡೆಗಣಿಸದೆ ಕಾರ್ಯನಿರ್ವಹಿಸಿದ. ಕೊನೆಗೆ ತಾನು ಸಹ ಯಶಸ್ಸಿನ ಮೆಟ್ಟಿಲೇರಿದ. ಒಟ್ಟಾರೆಯಾಗಿ ಮನುಷ್ಯನ ಜೀವನದಲ್ಲಿ ಬಂದ ಚಿಕ್ಕ ಅವಕಾಶಗಳು ಸಹ ಉನ್ನತ ಸಾಧನೆಯತ್ತ ಕೊಂಡೊಯ್ಯುತ್ತವೆ. ಪ್ರತಿಯೊಂದು ಅವಕಾಶದ ಆಯ್ಕೆಯಲ್ಲಿ ಅತಿಯಾಸೆ ಮಾಡದೇ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು.
-ಮಡು
ಮೂಲಿಮನಿ, ಗದಗ