ಕನಕಪುರ: ಮಹಾರಾಷ್ಟ್ರ ದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಮೈತ್ರಿ ಸರಕಾರ ನಮ್ಮ “ಗೃಹಲಕ್ಷ್ಮಿ’ ಯೋಜನೆಯನ್ನೇ ನಕಲು ಮಾಡಿ “ಮಾಝಿ ಲಡಕಿ ಬಹಿನ್ ಯೋಜನಾ’ ಎಂದು ಹೆಸರಿಟ್ಟು 1,500 ರೂ. ಕೊಟ್ಟಿದ್ದರು. ನಾವು “ಮಹಾಲಕ್ಷ್ಮೀ’ ಎನ್ನುವ ಹೆಸರಿಟ್ಟು 3,000 ಕೊಡುವುದಾಗಿ ಭರವಸೆ ನೀಡಿದ್ದೆವು. ಆದರೆ ಅಲ್ಲಿನ ಬಿಜೆಪಿ ಮೈತ್ರಿ ಸರಕಾರ ಚುನಾವಣೆಗೆ 6 ತಿಂಗಳು ಮುಂಚಿತವಾಗಿ ಹಣ ನೀಡಿದ ಪರಿಣಾಮ ನಮಗಿಂತ ಅವರಿಗೆ ಹೆಚ್ಚು ಮತಗಳು ಬಂದವು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ನಗರದ ರೂರಲ್ ಕಾಲೇಜು ಆವರಣದಲ್ಲಿ ರವಿವಾರ ಮಹಿಳಾ ಜಾಗೃತಿ ಮಹಾ ಸಮಾವೇಶ ಉದ್ಘಾಟಿಸಿ ಮಾತನಾಡಿ, ನಮ್ಮ ಗ್ಯಾರಂಟಿ ಯೋಜನೆಗಳನ್ನು ಮಹಿಳೆಯರ ಅಭಿವೃದ್ಧಿಗೆ ಪೂರಕ ವಾಗಿರುವಂತೆ ರೂಪಿಸಲಾಗಿದೆ. ಆದರೆ ಬಿಜೆಪಿಯವರು ನಮ್ಮನ್ನು ಟೀಕೆ ಮಾಡಿದರು. ಈಗ ಬಿಜೆಪಿ ಆಡಳಿತದ ರಾಜ್ಯದಲ್ಲೇ ಗ್ಯಾರಂಟಿ ಯೋಜನೆ ಪ್ರಾರಂಭ ಮಾಡಿದ್ದಾರೆ ಎಂದು ತಿಳಿಸಿದರು.
ಸಂಸತ್ತಿನಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡುವ ಮಸೂ ದೆಗೆ ಒಪ್ಪಿಗೆ ದೊರೆತಿದೆ. ಮುಂದಿನ ವಿಧಾನಸಭಾ ಚುನಾವಣೆಯ ಷ್ಟರಲ್ಲಿ ಶೇ. 33ರಷ್ಟು ಮೀಸಲಾತಿ ಯನ್ನು ಮಹಿಳೆಯರಿಗೆ ನೀಡಬೇಕಾ ಗಬಹುದು. ಆ ಮಟ್ಟಕ್ಕೆ ನಾವು ಸಿದ್ಧತೆ ಮಾಡಬೇಕಾಗುತ್ತದೆ. ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ. 50 ಮೀಸಲಾತಿ ನೀಡುತ್ತೇವೆ. ಆದರೆ ಮುಖಂಡರು ತಮಗೆ ಅವಕಾಶ ಸಿಗದೇ ಇದ್ದಾಗ ತಮ್ಮ ಪತ್ನಿ, ಸಹೋದರಿ ಅಥವಾ ಸಂಬಂಧಿಕರನ್ನು ನಿಲ್ಲಿಸುತ್ತಿದ್ದಾರೆ. ಸಾಮಾನ್ಯ ಮಹಿಳೆಯರು ಅಧಿಕಾರದ ಗದ್ದುಗೆ ಏರಲು ಮುಂದೆ ಬರಬೇಕು. ಅದಕ್ಕಾಗಿ ಸಾಮಾನ್ಯ ಮಹಿಳೆಯರು ಈಗಿನಿಂದಲೇ ನಾಯಕತ್ವ ಗುಣವನ್ನು ಬೆಳೆಸಿಕೊಳ್ಳುವಂತೆ ಕರೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಪಾಲ್ಗೊಂಡಿದ್ದರು.
ಜಮೀನು ಮಾರಲು ಬಿಡಬೇಡಿ: ಡಿಕೆಶಿ
ಯಾವುದೇ ಕಾರಣಕ್ಕೂ ತಮ್ಮ ಪಾಲಿನ ಭೂಮಿ ಮಾರಾಟ ಮಾಡದಂತೆ ಮನೆಯ ಪುರುಷರಿಗೆ ಮಹಿಳೆಯರು ಬುದ್ಧಿ ಮಾತು ಹೇಳಬೇಕು. ಈಗ ಭೂಮಿಯ ಬೆಲೆ ಹೆಚ್ಚಾಗಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು. ನಾನು ಮೊದಲ ಬಾರಿಗೆ ಇಲ್ಲಿ ಚುನಾವಣೆಗೆ ನಿಂತಾಗ ಒಂದು ಎಕರೆಗೆ 2ರಿಂದ 3 ಲಕ್ಷ ರೂ. ಮಾತ್ರ ಇತ್ತು. ಈಗ 50 ಲಕ್ಷ ರೂ. ಬೆಲೆ ಬಾಳುತ್ತದೆ. ಯಾವುದೇ ಕಾರಣಕ್ಕೂ ಒಂದು ಗುಂಟೆ ಜಮೀನನ್ನೂ ಕಳೆದುಕೊಳ್ಳಬೇಡಿ ಎಂದು ಸಲಹೆ ನೀಡಿದರು.