ಬೆಂಗಳೂರು: ಗ್ರಾಹಕರಿಗೆ ತ್ವರಿತವಾಗಿ 20 ನಿಮಿಷಗಳಲ್ಲಿ ಪಿಜ್ಜಾ ವಿತರಿಸುವ ವ್ಯವಸ್ಥೆಯನ್ನು ಬೆಂಗಳೂರಿನಲ್ಲಿ ಜಾರಿಗೆ ತರುವ ಬಗ್ಗೆ ಡೊಮಿನೋಸ್ ಘೋಷಣೆ ಮಾಡಿದೆ. ದೇಶದಲ್ಲಿಯೇ ಮೊದಲ ಬಾರಿಗೆ ಇಂಥ ವ್ಯವಸ್ಥೆಯನ್ನು ಅಳವಡಿಸಲಾಗುತ್ತದೆ ಎಂದು ಜ್ಯುಬಿಲಿಯಂಟ್ ಫುಡ್‌ವರ್ಕ್ಸ್ ನ ಎಂ.ಡಿ. ಮತ್ತು ಸಿಇಒ ಸಮೀರ್ ಕೇತರ್‌ಪಾಲ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಈ ಉದ್ದೇಶಕ್ಕಾಗಿ ನಗರದಲ್ಲಿ ಡೊಮಿನೋಸ್ ಪಿಜ್ಜಾ ಮಳಿಗೆಗಳನ್ನು 170ಕ್ಕೆ ಹೆಚ್ಚಿಸಲಾಗಿದೆ. ದೇಶದ ಉಳಿದ ನಗರಗಳಿಗೆ ಹೋಲಿಸಿದರೆ ಇದು ಅತ್ಯಧಿಕ ಎಂದರು. ತ್ವರಿತ ಸೇವೆಗಳ ರೆಸ್ಟಾರೆಂಟ್ (ಕ್ಯುಎಸ್‌ಆರ್) ಕ್ಷೇತ್ರದಲ್ಲಿ ಹೊಸತನ ತುಂಬುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಗ್ರಾಹಕರು ಪಿಜ್ಜಾಗೆ ಆರ್ಡರ್ ಮಾಡಿದ 20 ನಿಮಿಷಗಳಲ್ಲಿ ವಿತರಿಸುವ ನಿಟ್ಟಿನಲ್ಲಿ ಈ ವ್ಯವಸ್ಥೆ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಹೇಳಿದ ಸಮೀರ್ ಕೇತರ್‌ಪಾಲ್, ಈ ಉದ್ದೇಶಕ್ಕಾಗಿ ನಗರ ವ್ಯಾಪ್ತಿಯಲ್ಲಿ ಇರುವ ಮಳಿಗೆಗಳ ಸಂಖ್ಯೆ ಹೆಚ್ಚಿಸಲಾಗಿದೆ. ಪಿಜ್ಜಾ ವಿತರಿಸುವವರ ವಾಹನಗಳಿಗೆ ವೇಗ ನಿಯಂತ್ರಕ ವ್ಯವಸ್ಥೆ ಅಳವಡಿಸಲಾಗಿದೆ. ಇದರಿಂದಾಗಿ ಅವರು ಮಿತಿಗಿಂತ ಹೆಚ್ಚಿನ ವೇಗದಲ್ಲಿ ಚಲಿಸದೇ ಇರುವಂಥ ವ್ಯವಸ್ಥೆ ಅಳವಡಿಸಲಾಗಿದೆ ಎಂದರು. ಇದರ ಜತೆಗೆ ಪಿಜ್ಜಾ ವಿತರಿಸುವವರ ಭದ್ರತೆಯ ಬಗ್ಗೆ ಕೂಡ ಎಚ್ಚರಿಕೆ ವಹಿಸಲಾಗುತ್ತದೆ. ಅದಕ್ಕಾಗಿ ಮೂರು ವರ್ಷಗಳ ಕಾಲ ವಿವಿಧ ರೀತಿಯಲ್ಲಿ ಪ್ರಯೋಗಗಳನ್ನು ಕೈಗೊಳ್ಳಲಾಗಿದೆ. ಎಂದರು.
ತಾಜಾ ಪಿಜ್ಜಾ:
ನಗರದಲ್ಲಿರುವ ನಮ್ಮ ಗ್ರಾಹಕರಿಗೆ ಆಗ ತಾನೇ ಸಿದ್ಧಪಡಿಸಿದ ಪಿಜ್ಜಾಗಳನ್ನು ನೀಡುವುದೇ ನಮ್ಮ ಗುರಿ. ಆದರೆ, ಅದಕ್ಕಾಗಿ ನಮ್ಮ ಸಂಸ್ಥೆಯ ವಿತರಕರಿಗೆ ಅತ್ಯಂತ ಕಡಿಮೆ ಅವಧಿಯಲ್ಲಿ ಗ್ರಾಹಕರಿಗೆ ಪಿಜ್ಜಾ ವಿತರಿಸಿದರೆ ಪ್ರೋತ್ಸಾಹಕ ಅಂಶಗಳನ್ನು ನೀಡುವ ಪದ್ಧತಿಯನ್ನು ಅಳವಡಿಸಲಾಗಿಲ್ಲ ಎಂದರು. ಒಂದು ವೇಳೆಗೆ ಅವರಿಗೆ ನಿಗದಿತ 20 ನಿಮಿಷದಲ್ಲಿ ವಿತರಿಸದಿದ್ದರೂ ಅವರಿಗೆ ನೀಡಬೇಕಾಗಿರುವ ವೇತನ ಪಾವತಿ ಮಾಡಲಾಗುತ್ತದೆ ಎಂದರು.
ಮುಂದಿನ ದಿನಗಳಲ್ಲಿ ಮೈಸೂರು, ಮಂಗಳೂರು ಸೇರಿ ರಾಜ್ಯದ ಇತರ ಪ್ರಮುಖ ನಗರಗಳಲ್ಲಿ ಈ ವ್ಯವಸ್ಥೆ ಜಾರಿಗೊಳಿಸಲಾಗುತ್ತದೆ ಎಂದು ಸಮೀರ್ ಕೇತರ್‌ಪಾಲ್ ಹೇಳಿದರು.