Advertisement
ಎ. 21 ರಂದು ಸಂಜೆ ಡೊಂಬಿವಲಿ ಪೂರ್ವದ ಸರ್ವೇಶ ಸಭಾಗೃಹದಲ್ಲಿ ಡೊಂಬಿ ವಲಿಯ ಶ್ರೀ ಬಸವ ಸೇವಾ ಮಂಡಳದ ವತಿಯಿಂದ ನಡೆದ ಜಗಜ್ಯೋತಿ ಶ್ರೀ ಬಸವೇಶ್ವರ 886 ನೇ ಜಯಂತಿ ಉತ್ಸವದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಇಂದು ಆಧ್ಯಾತ್ಮಿಕತೆಯ ಬೇರುಗಳು ಸಡಿಲಗೊಂಡಿವೆ. ನಮ್ಮ ಅಂತ:ಕರಣ ಮಲೀನವಾಗಿವೆ. ನಾವು ಜಾತಿಯಿಂದ ಲಿಂಗಾಯಿತರಾಗಿರದೆ ಸಂಸ್ಕಾರದಿಂದ ಲಿಂಗಾಯತರಾಗಬೇಕು. ಜಾತೀಯತೆಯ ಲಿಂಗಾಯತ ಧರ್ಮಕ್ಕಿಂತ ಬಸವ ತತ್ವಗಳ ಆಧಾರಿತ ದೃಷ್ಟಿಯಲ್ಲಿ ದೇಹವೇ ದೇಗುಲವಾಗಿದ್ದು, ಅದರಲ್ಲಿ ನಾವು ಆ ಪರಮಾತ್ಮನನ್ನು ಪ್ರತಿಷ್ಠಾಪಿಸಬೇಕಾಗಿದೆ. ಸಕಲ ಮಾನವ ಕುಲಕ್ಕೆ ಲೇಸನ್ನೆ ಬಯಸುವ ಬಸವ ತತ್ವಗಳು ಎಂದೆಂದಿಗೂ ಪ್ರಸ್ತುತವಾಗಿವೆ. ಡೊಂಬಿವಲಿಯ ಶ್ರೀ ಬಸವ ಸೇವಾ ಮಂಡಳದ ಕಾರ್ಯವೈಖರಿ ಅಭಿನಂದನೀಯವಾಗಿದೆ. ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರಲಿ ಎಂದು ಹಾರೈಸಿದರು.
Related Articles
Advertisement
ವಚನ ಸಾಹಿತ್ಯದ ಅಭ್ಯಾಸಕ ಬಸವರಾಜ ಪೂಜಾರಿ ಅವರು ಕನ್ನಡ ವಚನ ಸಾಹಿತ್ಯಕ್ಕೆ ಹರ್ಡಿಕರ ಮಂಜಪ್ಪ ಮತ್ತು ಫ. ಗು. ಹಳಕಟ್ಟಿ ಅವರ ಕೊಡುಗೆಗಳನ್ನು ವಿವರಿಸಿದರು. ಇದೇ ಸಂದರ್ಭದಲ್ಲಿ ಸಮಾಜದ ಹಿರಿಯ ನಾಗರಿಕರು ಹಾಗೂ ಪ್ರತಿಭಾವಂತ ಮಕ್ಕಳನ್ನು ಅಭಿನಂದಿಸಿ ಗೌರವಿಸಲಾಯಿತು.
75 ನೇ ಹುಟ್ಟುಹಬ್ಬ ಮತ್ತು ವೈವಾಹಿಕ ಜೀವನದ ಸುವರ್ಣ ಮಹೋತ್ಸವ ಅಚರಿಸಿದ ಶ್ರೀ ಬಸವ ಸೇವಾ ಮಂಡಳ ಡೊಂಬಿವಲಿ ಇದರ ಅಧ್ಯಕ್ಷ, ಉದ್ಯಮಿ ಆರ್. ಬಿ. ಹೆಬ್ಬಳ್ಳಿ ದಂಪತಿಯನ್ನು ಗಣ್ಯರ ಸಮ್ಮುಖದಲ್ಲಿ ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಲಾಯಿತು.
ಸಂಸ್ಥೆಯ ಅಧ್ಯಕ್ಷ ಆರ್. ಬಿ. ಹೆಬ್ಬಳ್ಳಿ ಇವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆಯ ಸಿದ್ಧಿ-ಸಾಧನೆಗಳನ್ನು ವಿವರಿಸಿದರು. ಕಾರ್ಯದರ್ಶಿ ರಮೇಶ್ ನ್ಹಾವಕರ ಕಾರ್ಯಕ್ರಮ ನಿರೂಪಿಸಿದರು. ಮಲ್ಲಪ್ಪಾ ಬಿರಾದಾರ ವಂದಿಸಿದರು. ಕಾರ್ಯಾಧ್ಯಕ್ಷ ಬಸವಲಿಂಗಪ್ಪ ಸೊಡ್ಡಗಿ ಸಂಸ್ಥೆ ನಡೆದು ಬಂದ ಬಗೆಯನ್ನು ವಿವರಿಸಿದರು. ನೂರಾರು ಬಸವ ಅನುಯಾಯಿಗಳು, ಭಕ್ತರು ಉಪಸ್ಥಿತರಿದ್ದರು.
ಚಿತ್ರ-ವರದಿ : ಗುರುರಾಜ ಪೋತನೀಸ್