ಹೊಸದಿಲ್ಲಿ : ಸಿಕ್ಕಿಂ ನ ವಿವಾದಿತ ಡೋಕ್‌ಲಾಂ ಗಡಿಯಲ್ಲಿ ಸೇನಾ ಮುಖಾಮುಖೀ ಮುಂದುವರಿದಿರುವಂತೆಯೇ ಭಾರತ – ಚೀನ ತಮ್ಮ ಸೇನಾ ಬಲವನ್ನು ಅಲ್ಲಿ ಹೆಚ್ಚಿಸುತ್ತಿರುವುದಾಗಿ ವರದಿಯಾಗಿದೆ.
“ಭಾರತದೊಂದಿಗೆ ರಾಜಿ ಮಾಡಿಕೊಳ್ಳುವ ಕೊಡುಗೆಯನ್ನು ಚೀನ ಮುಂದಿಟ್ಟಿದೆ’ ಎಂಬ ವರದಿಗಳನ್ನು ಬೀಜಿಂಗ್ ಖಚಿತವಾಗಿ ತಳ್ಳಿಹಾಕಿದೆ.
ಇದೇ ವೇಳೆ “ಸಿಕ್ಕಿಂ ಗಡಿ ಗ್ರಾಮಗಳಲ್ಲಿನ ಗ್ರಾಮಸ್ಥರ ಸ್ಥಳಾಂತರಕ್ಕೆ ತಾನು ಆದೇಶಿಸಿದ್ದೇನೆ’ ಎಂಬ ವರದಿಗಳನ್ನು ಭಾರತ ಸೇನೆ ಅಲ್ಲಗಳೆದಿದೆ.
ಚೀನ ತನ್ನ ಮಿಲಿಟರಿ ಟ್ಯಾಂಕುಗಳನ್ನು ಹಾಗೂ ವಾಯು ರಕ್ಷಣಾ ಘಟಕಗಳನ್ನು ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಇದರ ಟಿಬೆಟ್ ಮಿಲಿಟರಿ ಜಿಲ್ಲೆಯಲ್ಲಿ ನಿಯೋಜಿಸಿದೆ ಎಂದು ಸರಕಾರಿ ಮೂಲಗಳನ್ನು ಉಲ್ಲೇಖೀಸಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಆದರೆ ಗಡಿ ನಿಯಂತ್ರಣ ರೇಖೆಯಲ್ಲಿ ಯಾವುದೇ ದೊಡ್ಡ ಮಟ್ಟದ ಸೇನಾ ಜಮಾವಣೆಯನ್ನು ಚೀನ ಮಾಡಿಲ್ಲ ಎಂದು ಮೂಲಗಳು ಹೇಳಿವೆ.
ಡೋಕ್‌ಲಾಂ ನಿಂದ ತನ್ನ ಸೇನೆಯನ್ನು ಹಿಂದೆಗೆದುಕೊಂಡು ರಾಜಿ ಮಾತುಕತೆಯ ಕೊಡುಗೆಯನ್ನು ಚೀನ ಭಾರತಕ್ಕೆ ನೀಡಿದೆ ಎಂಬ ವರದಿಗಳನ್ನು ಬೀಜಿಂಗ್ ಬಲವಾಗಿ ಅಲ್ಲಗಳೆದಿರುವುದಾಗಿ ವರದಿಯಾಗಿದೆ. ವಿವಾದಿತ ಡೋಕ್‌ಲಾಂ ನಲ್ಲಿ ಈಗ ಬೀಡುಬಿಟ್ಟಲ್ಲಿಂದ 250 ಮೀಟರ್ ಆಚೆಗೆ ಚೀನ ಸೇನೆ ಹಿಂದೆ ಸರಿಯಬೇಕೆಂಬ ಭಾರತದ ಪ್ರಸ್ತಾವಕ್ಕೆ ಬದಲಾಗಿ 150 ಮೀ. ಹಿಂದಕ್ಕೆ ಸರಿಯಲು ಚೀನ ಒಪ್ಪಿದೆ ಎಂಬ ವರದಿಗಳನ್ನು ಬೀಜಿಂಗ್ ಅಲ್ಲಗಳೆದಿದೆ.
“ನಮ್ಮ ಡೋಕ್‌ಲಾಂ ಪ್ರದೇಶಕ್ಕೆ ಅತಿಕ್ರಮಿಸಿ ಬಂದಿರುವ ಭಾರತ ತನ್ನ ಸೇನೆಯನ್ನು ತತ್‌ಕ್ಷಣ ಮತ್ತು ನಿಶ್ಶರ್ತವಾಗಿ ಹಿಂದೆಗೆದುಕೊಳ್ಳಬೇಕು ಎಂಬ ಚೀನದ ನಿಲುವು ಸ್ಪಷ್ಟವಾಗಿದೆ ಮತ್ತು ದೃಢವಾಗಿದೆ. ಭಾರತ ಇದನ್ನು ಮಾಡಿದಲ್ಲಿ ಮುಂದಿನ ಮಾತುಕತೆಗೆ ಅನುಕೂಲವಾಗುತ್ತದೆ’ ಎಂದು ಚೀನ ವಿದೇಶ ಸಚಿವಾಲಯದ ಪ್ರಕಟನೆ ಹೇಳಿದೆ.