Advertisement

ವೈದ್ಯರ ಕೊರತೆ:ರಾಷ್ಟ್ರಪತಿ ಆತಂಕ

09:05 AM Dec 31, 2017 | Team Udayavani |

ಬೆಂಗಳೂರು: ದೇಶದ ಜನಸಂಖ್ಯೆಯಲ್ಲಿ ಶೇ.10ರಷ್ಟು ಮಂದಿ ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು, ಇವರಿಗೆ ಸೂಕ್ತ ಚಿಕಿತ್ಸೆ ನೀಡುವಲ್ಲಿ ಮನೋರೋಗ ತಜ್ಞರ ಕೊರತೆ ಕಾಡುತ್ತಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳುವ ತುರ್ತು ಅಗತ್ಯವಿದೆ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅಭಿಪ್ರಾಯಪಟ್ಟಿದ್ದಾರೆ.

Advertisement

ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರರೋಗ ವಿಜ್ಞಾನ ಸಂಸ್ಥೆಯಲ್ಲಿ (ನಿಮ್ಹಾನ್ಸ್‌) ಶನಿವಾರ ನಡೆದ 22ನೇ ಘಟಿಕೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, “ದೇಶದಲ್ಲಿ ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಭಾರತದಲ್ಲಿನ ಮಾನಸಿಕ ರೋಗಿಗಳ ಸಂಖ್ಯೆಯು ಜಪಾನ್‌ ದೇಶದ ಜನಸಂಖ್ಯೆಗಿಂತ ಹೆಚ್ಚಾಗಿದೆ. ದೇಶದ ಶೇ.65ರಷ್ಟು ಮಂದಿಯ ವಯೋಮಿತಿ 35 ವರ್ಷದೊಳಗಿದೆ. ಯುವಜನತೆ, ಹಿರಿಯ ನಾಗರಿಕರು ಹಾಗೂ ನಗರವಾಸಿಗಳಲ್ಲೇ ಹೆಚ್ಚು ಮಂದಿ ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವುದು ಆಂತಕ ಮೂಡಿಸಿದೆ ಎಂದು ಹೇಳಿದರು.

ಮಾನಸಿಕ ಸಮಸ್ಯೆಗೆ ಸಾಂಪ್ರದಾಯಿಕ ಚಿಕಿತ್ಸೆ ಜತೆಗೆ ಸಮಾಲೋಚನೆ, ಯೋಗ, ಧ್ಯಾನ, ಅಧ್ಯಾತ್ಮದ ಮೂಲಕ ಮಾನಸಿಕ ಸಮಸ್ಯೆಯಿಂದ ಹೊರತರುವ ಪ್ರಯತ್ನಗಳು ನಡೆಯಬೇಕು. ದೇಶ ಸ್ವಾತಂತ್ರ್ಯಗಳಿಸಿ 75 ವರ್ಷಗಳನ್ನು 2022ಕ್ಕೆ ಪೂರೈಸಲಿದ್ದು, ಆ ಹೊತ್ತಿಗೆ ಎಲ್ಲ ಮಾನಸಿಕ ರೋಗಿಗಳಿಗೂ ಚಿಕಿತ್ಸೆ ಜತೆಗೆ ಸ್ಥಳೀಯವಾಗಿಯೇ ಚಿಕಿತ್ಸೆ ಸಿಗುವ ವ್ಯವಸ್ಥೆ ಕಲ್ಪಿಸುವ ಆಂದೋಲನ ನಡೆಯಬೇಕು. ಈ ಆಂದೋಲನಕ್ಕೆ ಸರ್ಕಾರ ಮಾತ್ರವಲ್ಲದೇ ಸ್ವಯಂಸೇವಾ ಸಂಸ್ಥೆಗಳು, ಸಂಬಂಧಪಟ್ಟ ಸಾರ್ವಜನಿಕ, ಖಾಸಗಿ ಸಂಸ್ಥೆಗಳು ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ದೇಶದಲ್ಲಿ ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ಚಿಕಿತ್ಸೆ ನೀಡಲು 5000 ಮನೋರೋಗ ತಜ್ಞರು ಹಾಗೂ 2,000 ಕ್ಲಿನಿಕಲ್‌ ಮನೋರೋಗ ತಜ್ಞರಷ್ಟೇ ಲಭ್ಯರಿದ್ದಾರೆ. ಹಾಗಾಗಿ ಕಾಲೇಜು, ಶಿಕ್ಷಣ ಸಂಸ್ಥೆಗಳಲ್ಲಿ ಉಪನ್ಯಾಸಕರಾಗಿರುವ ತಜ್ಞ ವೈದ್ಯರು, ಮನೋರೋಗ ತಜ್ಞರು, ಅರೆವೈದ್ಯ ಸಿಬ್ಬಂದಿ ಸೇವೆಯನ್ನು ಬಳಸಿಕೊಳ್ಳುವತ್ತ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ಬಳ್ಳಾರಿ ಮಾದರಿ ಎಲ್ಲೆಡೆ ವಿಸ್ತರಣೆ
ಕೇಂದ್ರ ಸರ್ಕಾರದ ರಾಷ್ಟ್ರೀಯ ಮಾನಸಿಕ ಆರೋಗ್ಯ ಕಾರ್ಯಕ್ರಮದಡಿ ಮಾನಸಿಕ ಆರೋಗ್ಯ ಸೇವೆಗೆ ಸಂಬಂಧಪಟ್ಟಂತೆ ದೇಶದಲ್ಲಿ 23 ಅತ್ಯುನ್ನತ ಸಂಸ್ಥೆಗಳನ್ನು ನಿರ್ಮಿಸುವ ಗುರಿ ಇದೆ. ದೇಶದ 517 ಜಿಲ್ಲೆಗಳಲ್ಲಿ ಈ ಕಾರ್ಯಕ್ರಮ ನಡೆಸಿರುವುದು ಶ್ಲಾಘನೀಯ. ನಿಮ್ಹಾನ್ಸ್‌ ರೂಪಿಸಿರುವ ಬಳ್ಳಾರಿಯ ಸಮುದಾಯ ಆಧಾರಿತ ಮಾನಸಿಕ ಆರೋಗ್ಯ ಸೇವೆ ಮಾದರಿಯು ದೇಶದ ಇತರೆ ಜಿಲ್ಲೆಗಳಿಗೂ ಮಾದರಿಯಾಗಿದೆ ಎಂದು ತಿಳಿಸಿದರು.

ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಮಾತನಾಡಿ, ದೇಶದಲ್ಲಿ ಮಾನಸಿಕ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಅವರಿಗೆ ಚಿಕಿತ್ಸಾ ಸೇವೆ ಒದಗಿಸಲು ಹೆಚ್ಚುವರಿ ತಜ್ಞರ ನಿಯೋಜನೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಮನೋರೋಗತಜ್ಞರು, ಅರೆವೈದ್ಯ ಸಿಬ್ಬಂದಿ, ಆರೋಗ್ಯ ಕಾರ್ಯಕರ್ತರ ಸಂಖ್ಯೆ ಹೆಚ್ಚಳಕ್ಕೂ ಗಮನ ನೀಡಲಾಗಿದೆ. ಕೇಂದ್ರ ಸರ್ಕಾರದ “ಮಾನಸಿಕ ಆರೋಗ್ಯ ಸೇವೆ ನೀತಿ’ಯು ರೋಗಿಗಳಿಗೆ ಸಹಕಾರಿಯಾಗುವ ವಿಶ್ವಾಸವಿದೆ. ಸ್ನಾತಕೋತ್ತರ ಹಾಗೂ ಡಿಎನ್‌ಬಿ ಸೀಟುಗಳ ಸಂಖ್ಯೆ ಒಟ್ಟು 37,000ಕ್ಕೆ ಏರಿಕೆಯಾಗಿದೆ ಎಂದು ಹೇಳಿದರು.

Advertisement

ಘಟಿಕೋತ್ಸವ ಸಮಾರಂಭದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ 11 ವಿದ್ಯಾರ್ಥಿಗಳಿಗೆ ವಿವಿಧ ಪ್ರಶಸ್ತಿ ನೀಡಲಾಯಿತು. 163 ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರ ವಿತರಿಸಲಾಯಿತು. ರಾಜ್ಯಪಾಲ ವಿ.ಆರ್‌.ವಾಲಾ, ಕೇಂದ್ರ ಸಚಿವ ಅನಂತಕುಮಾರ್‌, ಸಚಿವ ಡಾ.ಶರಣ ಪ್ರಕಾಶ್‌ ಪಾಟೀಲ್‌, ನಿಮ್ಹಾನ್ಸ್‌ ನಿರ್ದೇಶಕ ಡಾ.ಬಿ.ಎನ್‌.ಗಂಗಾಧರ್‌ ಉಪಸ್ಥಿತರಿದ್ದರು.

ಕೇಂದ್ರದಿಂದ ಅಗತ್ಯ ಸಹಕಾರ
ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ ಪಾಟೀಲ್‌ ತಮ್ಮ ಭಾಷಣದಲ್ಲಿ, “ಬೆಂಗಳೂರಿನ ಹೊರ ವಲಯದಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕಾಗಿ ನಿಮ್ಹಾನ್ಸ್‌ ಸಂಸ್ಥೆಗೆ 40 ಎಕರೆ ಜಮೀನು ನೀಡಲಾಗಿದ್ದು, ಇದಕ್ಕೆ ಕೇಂದ್ರ ಸರ್ಕಾರವೂ ಅನುದಾನ ನೀಡಿ ಸಹಕರಿಸಬೇಕು ಎಂದು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಕೇಂದ್ರ ಸಚಿವ ಜೆ.ಪಿ.ನಡ್ಡಾ, “ನಿಮ್ಹಾನ್ಸ್‌ ಸಂಸ್ಥೆ ವತಿಯಿಂದ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲು ಉದ್ದೇಶಿಸಿರುವುದು ಸ್ವಾಗತಾರ್ಹ. ಇದಕ್ಕೆ ಕೇಂದ್ರದಿಂದ ಅಗತ್ಯ ಸಹಕಾರ ನೀಡಲಾಗುವುದು’ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next