Advertisement

ಸ್ಟಾರ್‌ ನಟ ಪೋಷಕ ಪಾತ್ರ ಮಾಡೋದು ಎಷ್ಟ್ ಕಷ್ಟ ಗೊತ್ತಾ?

10:49 AM Oct 14, 2019 | Lakshmi GovindaRaju |

ನಿಮ್ಮ ಪಾತ್ರ ಎಷ್ಟೇ ಪ್ರಾಮುಖ್ಯತೆ ಪಡೆದಿದ್ದರೂ ನೀವು ಔಟ್‌ ಆಫ್ ಫೋಕಸ್‌ನಲ್ಲೇ ಇರುತ್ತೀರಿ …

Advertisement

ಒಬ್ಬ ಹೀರೋ, ಅದರಲ್ಲೂ ತನ್ನದೇ ಆದ ದೊಡ್ಡ ಅಭಿಮಾನಿ ವರ್ಗವನ್ನು ಹೊಂದಿರುವ ಸ್ಟಾರ್‌ ನಟ ಮತ್ತೊಬ್ಬ ಹೀರೋನಾ ಚಿತ್ರದಲ್ಲಿ ಪೋಷಕ ನಟನಾಗಿ ಕಾಣಿಸಿಕೊಳ್ಳೋದು ಎಷ್ಟು ಕಷ್ಟ …. ಹೀಗೊಂದು ಪ್ರಶ್ನೆ ಅನೇಕರನ್ನು ಕಾಡುತ್ತದೆ. ಅದರಲ್ಲೂ ಇತ್ತೀಚೆಗೆ “ಸೈರಾ’ ಸಿನಿಮಾ ನೋಡಿದವರಿಗೆ ಈ ಪ್ರಶ್ನೆ ಸ್ವಲ್ಪ ಹೆಚ್ಚೇ ಕಾಡಿದೆ. ಅದಕ್ಕೆ ಕಾರಣ ಸುದೀಪ್‌. ತೆಲುಗು ನಟ ಚಿರಂಜೀವಿ ನಾಯಕರಾಗಿರುವ ಈ ಚಿತ್ರದಲ್ಲಿ ಸುದೀಪ್‌ ಒಂದು ಪಾತ್ರ ಮಾಡಿದ್ದರು.

ಆ ಪಾತ್ರದ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಅದೇನೇ ಆದರೂ ಅದು ಪೋಷಕ ಪಾತ್ರ ಕೆಟಗರಿಗೆ ಸೇರುವುದು ಸುಳ್ಳಲ್ಲ. ಅದೇ ಕಾರಣದಿಂದ ಸ್ಟಾರ್‌ ನಟ ಪೋಷಕ ಪಾತ್ರ ಮಾಡೋದು ಸುಲಭನಾ ಎಂದರೆ ಕಷ್ಟ ಎಂಬ ಉತ್ತರ ಸುದೀಪ್‌ರಿಂದ ಬರುತ್ತದೆ.  ಈ ಬಗ್ಗೆ ಮಾತನಾಡುವ ಸುದೀಪ್‌, “ಯಾರೇ ಆದರೂ ಹೀರೋ ಆಗೋದು, ಚಿತ್ರರಂಗದಲ್ಲಿ ತಮ್ಮದೇ ಆದ ಸ್ಥಾನ ಪಡೆಯೋದು ಸುಲಭವಲ್ಲ. ನಿಮ್ಮ ಪ್ರತಿಭೆ, ಅದೃಷ್ಟದಿಂದ ನಿಮ್ಮದೇ ಆದ ಒಂದು ಅಭಿಮಾನಿ ವರ್ಗ, ಮಾರುಕಟ್ಟೆ ಸೃಷ್ಟಿಯಾಗಿರುತ್ತದೆ. ಬೇಕೋ ಬೇಡವೋ ನಾನು ಹೀರೋ ಎಂಬ ಫೀಲ್‌ ಇದ್ದೇ ಇರುತ್ತದೆ.

ಹೀಗಿರುವಾಗ ಮತ್ತೊಂದು ಚಿತ್ರದಲ್ಲಿ ಹೋಗಿ ಪೋಷಕ ಪಾತ್ರ ಮಾಡೋದು ಸುಲಭವಲ್ಲ. ಬೇರೊಬ್ಬ ಹೀರೋನಾ ಚಿತ್ರದಲ್ಲಿ ನಿಮ್ಮ ಪಾತ್ರ ಎಷ್ಟೇ ಪ್ರಾಮುಖ್ಯತೆ ಪಡೆದಿದ್ದರೂ ಅದು ಪೋಷಕ ಪಾತ್ರವೇ ಆಗಿರುತ್ತದೆ ಹಾಗೂ ಏನೇ ಆದರೂ ನೀವು ಔಟ್‌ ಆಫ್ ಫೋಕಸ್‌ನಲ್ಲಿ ಇರುತ್ತೀರಿ. ಅದೇ ನೀವು ಆ ಪಾತ್ರವನ್ನು, ಅವಕಾಶವನ್ನು ಎಂಜಾಯ್‌ ಮಾಡುವ ಮನಸ್ಥಿತಿ ಬೆಳೆಸಿಕೊಂಡಾಗ ಅದರಷ್ಟು ಖುಷಿ ಕೊಡುವ ಅಂಶ ಮತ್ತೊಂದಿಲ್ಲ. ಅದೇ ಮನಸ್ಥಿತಿಯೊಂದಿಗೆ ನಾನು ಸೆಟ್‌ಗೆ ಹೋಗುತ್ತೇನೆ’ ಎನ್ನುವ ಮೂಲಕ ಹೀರೋ ಆದವ ಪೋಷಕ ಪಾತ್ರ ಮಾಡುವ ಕಷ್ಟ ಹಾಗೂ ಸುಖದ ಬಗ್ಗೆ ಹೇಳುತ್ತಾರೆ ಸುದೀಪ್‌.

ನಮ್ಮ ಮೊಮ್ಮಕ್ಕಳಿಗೆ ಅಂಬಿ ಮಾಮನ ಬಯೋಪಿಕ್‌ ಓಕೆ!: ಸದ್ಯ ಎಲ್ಲಾ ಭಾಷೆಯ ಚಿತ್ರರಂಗದಲ್ಲಿ ಬಯೋಪಿಕ್‌ ಜೋರಾಗಿ ಸುದ್ದಿ ಮಾಡುತ್ತಿದೆ. ಬೇರೆ ಬೇರೆ ಕ್ಷೇತ್ರದಲ್ಲಿ ಹೆಸರು ಮಾಡಿದ ಮಹನೀಯರ ಬಯೋಪಿಕ್‌ನಲ್ಲಿ ಸ್ಟಾರ್‌ ನಟರು ನಟಿಸುತ್ತಿದ್ದಾರೆ. ಹೀಗಾಗಿ ಸುದೀಪ್‌ ಅವರಿಗೂ ಬಯೋಪಿಕ್‌ ಪ್ರಶ್ನೆ ಎದುರಾಗುತ್ತಿದೆ. ಇತ್ತೀಚೆಗೆ ಸುದೀಪ್‌ ಅವರಿಗೆ “ಅವಕಾಶ ಸಿಕ್ಕರೆ ನೀವು ಅಂಬರೀಶ್‌ ಅವರ ಬಯೋಪಿಕ್‌ನಲ್ಲಿ ನಟಿಸುತ್ತೀರಾ’ ಎಂಬ ಪ್ರಶ್ನೆ ಎದುರಾಯಿತು. ಈ ಪ್ರಶ್ನೆಗೆ ಉತ್ತರಿಸಿದ ಸುದೀಪ್‌, “ಅಂಬಿ ಮಾಮನ ವ್ಯಕ್ತಿತ್ವ ಸಿನಿಮಾ ಆಗಲು ಯೋಗ್ಯವಿದೆ. ಅದರಲ್ಲಿ ಎರಡು ಮಾತಿಲ್ಲ.

Advertisement

ಆದರೆ, ಅವರು ಇವತ್ತಿಗೂ ನಮ್ಮೊಂದಿಗಿದ್ದಾರೆ. ಅವರ ಪ್ರತಿ ಜೀವನ ಶೈಲಿ, ಬದುಕಿದ ರೀತಿ ನಮಗೆ ಚೆನ್ನಾಗಿ ಗೊತ್ತಿದೆ. ಹೀಗಿರುವಾಗ ನಾನೇನಾದರೂ ಅವರ ಪಾತ್ರ ಮಾಡಿದರೆ, ನೀವೇ ಅದನ್ನು ಒಪ್ಪಲ್ಲ. “ಅಂಬರೀಶ್‌ ಅವರು ಈ ತರಹ ಇರಲೇ ಇಲ್ಲ. ಹೀಗೆ ಮಾತನಾಡುತ್ತಲೇ ಇರಲಿಲ್ಲ’ ಎನ್ನುವ ಸಾಧ್ಯತೆ ಇದೆ. ಏಕೆಂದರೆ ಅವರನ್ನು ನಾವೆಲ್ಲರೂ ತುಂಬಾ ಹತ್ತಿರದಿಂದ ನೋಡಿದ್ದೇವೆ. ಜೊತೆಗೆ ನಮ್ಮೊಂದಿಗೆ ಅವರು ಇವತ್ತಿಗೂ ಇದ್ದಾರೆ. ಹಾಗಾಗಿ, ಅಂಬಿ ಮಾಮನ ಬಯೋಪಿಕ್‌ ನಮ್ಮ ಮೊಮ್ಮಕ್ಕಳಿಗೆ ಸೂಕ್ತ. ಅವರಾದರೆ ಅಂಬಿ ಮಾಮನನ್ನು ನೋಡಿರಲ್ಲ ಮತ್ತು ಅವರ ಬಗ್ಗೆ ಹೆಚ್ಚು ಗೊತ್ತಿರಲ್ಲ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next