Advertisement

ಕಾರ್ಮಿಕರಿಗೆ ಪ್ರಶ್ನೆ ಕೇಳ್ಳೋಕೇ ಬಿಡಲಿಲ್ಲ !

11:34 AM Jul 07, 2017 | Team Udayavani |

ರಾಯಚೂರು: ಪೌರ ಕಾರ್ಮಿಕರ, ಸಫಾಯಿ ಕರ್ಮಚಾರಿಗಳ ಸಮಸ್ಯೆಗಳನ್ನು ಬಗೆಹರಿಸುವ ಉದ್ದೇಶದಿಂದ ಆಯೋಜಿಸಿದ್ದ
ಸಂವಾದ ಕಾರ್ಯಕ್ರಮದಲ್ಲಿ ಪೌರಕಾರ್ಮಿಕರಿಗೆ ಪ್ರಶ್ನೆ ಕೇಳಲು ಕೂಡ ಸಮಯಾವಕಾಶ ನೀಡದೆ ಕಾಟಾಚಾರಕ್ಕೆ ನಡೆಸಿದಂತಾಯಿತು.

Advertisement

ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ.ಆರ್‌. ವೆಂಕಟೇಶ ಗುರುವಾರ ಜಿಲ್ಲೆಗೆ ಭೇಟಿ ನೀಡಿದ್ದರು. ಈ ವೇಳೆ ಸಫಾಯಿ ಕರ್ಮಚಾರಿಗಳ ಬಡಾವಣೆ ವೀಕ್ಷಿಸಿದ ನಂತರ ಸಂವಾದ ನಡೆಸಿದರು. ಆದರೆ, ಸಂವಾದದಲ್ಲಿ ಸಮಸ್ಯೆ ಹೇಳಿಕೊಳ್ಳಲು ಸಮಯಾವಕಾಶ ನೀಡದೆ ಪ್ರತಿ ಸ್ಥಳೀಯ ಸಂಸ್ಥೆಯಿಂದ ಒಬ್ಬರಿಗೆ ಮಾತ್ರ ಮಾತನಾಡಲು ಅವಕಾಶ ನೀಡಲಾಯಿತು. ಇದರಿಂದ ಸಂವಾದ ಕಾಟಾಚಾರಕ್ಕೆ ಎನ್ನುವಂತೆ ನಡೆಯಿತು. ನಗರಸಭೆ ಕಾರ್ಮಿಕ ಉರುಕುಂದಪ್ಪ ಮಾತನಾಡಿ, ಪಿಎಫ್‌ ಕಡಿತಗೊಳಿಸಿದ ಬಗ್ಗೆ ಮಾಹಿತಿಯಿಲ್ಲ. ಕೇಳಿದರೆ ಸರಿಯಾಗಿ ಪ್ರತಿಕ್ರಿಯಿಸುವುದಿಲ್ಲ. ಸಮವಸ್ತ್ರಗಳು ಸರಿಯಾಗಿಲ್ಲ. 10 ಕಾರ್ಮಿಕರನ್ನು ಸೇವೆಯಿಂದ ತೆಗೆದು ಹಾಕಿದ್ದಾರೆ ಎಂದು ಸಮಸ್ಯೆ ಬಿಚ್ಚಿಟ್ಟರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ, ಇಎಸ್‌ಐ ಸೌಲಭ್ಯ ಯಾಕೆ ಕಲ್ಪಿಸಿಲ್ಲ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಧಿಕಾರಿ ನಮ್ಮಲ್ಲಿ ಆಸ್ಪತ್ರೆ ಇಲ್ಲ ಹೀಗಾಗಿ ನೀಡಿಲ್ಲ. ಶೀಘ್ರದಲ್ಲೇ ನೀಡುವುದಾಗಿ ತಿಳಿಸಿದರು. ಇದಕ್ಕೆ ಅಧ್ಯಕ್ಷರು, ಎಲ್ಲವನ್ನು ನೀವೇ ನಿರ್ಧರಿಸುತ್ತೀರಾ? ಸರ್ಕಾರ ಸೌಲಭ್ಯ ನೀಡಿದರೆ ಅದನ್ನು ಫಲಾನುಭವಿಗಳಿಗೆ ತಲುಪಿಸಲು ಯಾಕೆ ಮೀನ ಮೇಷ ಎಂದು ತರಾಟೆಗೆ ತೆಗೆದುಕೊಂಡರು. 

ಲಿಂಗಸುಗೂರಿನಲ್ಲಿ ಈವರೆಗೆ ಪಿಎಫ್‌ ಪಾವತಿಸಿಲ್ಲ ಎಂದು ನೌಕರ ಉಪ್ಪಣ್ಣ ದೂರಿದರು. ಇದಕ್ಕೆ ಮುಖ್ಯಾಧಿ ಕಾರಿ ಪ್ರತಿಕ್ರಿಯಿಸಿ, ನಾನು ಬಂದು ನಾಲ್ಕು ತಿಂಗಳಾಗಿದೆ ಎಂದು ಸಮಜಾಯಿಷಿ ನೀಡಿದರು. ಇದನ್ನೊಪ್ಪದ ಅಧ್ಯಕ್ಷರು, 15 ದಿನದೊಳಗಾಗಿ ಪಾವತಿಸಬೇಕು. ಅದರ ಜತೆಗೆ ನಾಲ್ಕು ಪಟ್ಟು ಹೆಚ್ಚುವರಿಯಾಗಿ ಪಾವತಿಸಬೇಕು ಎಂದು ಸೂಚಿಸಿದರು. ಅಲ್ಲದೇ, ಮುಖ್ಯಾಧಿ ಕಾರಿಗೆ ನೋಟಿಸ್‌ ನೀಡುವುದಾಗಿ ಭರವಸೆ ನೀಡಿದರು. ಲಿಂಗಸುಗೂರು, ಮಾನವಿ, ದೇವದುರ್ಗ, ಮಸ್ಕಿ ಪೌರ ಕಾರ್ಮಿಕರು
ಪಿಎಫ್‌ ಮತ್ತು ಸಾಮಗ್ರಿಗಳು ಒದಗಿಸುವಂತೆ ಅ ಧಿಕಾರಿಗಳಿಗೆ ಸೂಚಿಸಿ ಎಂದು ಅಧ್ಯಕ್ಷರಲ್ಲಿ ಮನವಿ ಮಾಡಿದರು. ಮುದಗಲ್ಲ ಪುರಸಭೆಯಲ್ಲಿ 36 ದಿನಗೂಲಿ ನೌಕರರು ಹಲವು ವರ್ಷಗಳಿಂದ ದುಡಿಯುತ್ತಿದ್ದಾರೆ ಅವರನ್ನು ಕಾಯಂಗೊಳಿಸಬೇಕು ಎಂದು ಒತ್ತಾಯಿಸಿದರು. ಕಾರ್ಮಿಕರು ಏನೇ ಕೇಳಿದರೂ ಆಯಿತು ಕೂಡಲೇ ಮಾಡಿಸಲು ಸೂಚಿಸುತ್ತೇನೆ. ನಿಮ್ಮ ಸೇವೆ ಕಾಯಂ ಆಗುತ್ತದೆ ಎಂದೆಲ್ಲ ಭರವಸೆ ನೀಡಿ ಕಾರ್ಮಿಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡರು. ಪ್ರತಿ ಸ್ಥಳೀಯ ಸಂಸ್ಥೆಯಿಂದ ಒಬ್ಬರಿಗೆ ಅವಕಾಶ ನೀಡಿದ್ದರಿಂದ ಕೇವಲ ಅರ್ಧ ಗಂಟೆಯಲ್ಲೇ ಸಂವಾದ ಮುಗಿಯಿತು. ಆದರೆ, ರಾಯಚೂರು ನಗರಸಭೆ ಸದಸ್ಯರು ಸಮಸ್ಯೆ ಹೇಳಲು ಮೈಕ್‌ ಕೇಳುತ್ತಿದ್ದರೂ ಯಾರೂ ಕೊಡಲಿಲ್ಲ. ಈ ಭಾಗದ ಸಫಾಯಿ ಕರ್ಮಚಾರಿಗಳಲ್ಲಿ ಮಾಹಿತಿ ಕೊರತೆಯಿದ್ದು,  ಸೌಲಭ್ಯದಿಂದ ದೂರವುಳಿದಿದ್ದೀರಿ. ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಕಾರ್ಮಿಕರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಕಂಡುಕೊಳ್ಳಲಾಗುತ್ತಿದೆ
ಎಂದು ತಿಳಿಸಿದ ಅಧ್ಯಕ್ಷರು ಸಂವಾದ ಮುಗಿಸಿದರು. ನಂತರ ಅಳಲು ತೋಡಿಕೊಂಡ ಕಾರ್ಮಿಕರು, ಸಾಕಷ್ಟು ಪೌರ ಕಾರ್ಮಿಕರಿಗೆ ಪಿಎಫ್‌, ಇಎಸ್‌ಐ ಸೌಲಭ್ಯ ಸಿಗುತ್ತಿಲ್ಲ. ಈ ಎಲ್ಲ ವಿಚಾರಗಳನ್ನು ಆಯೋಗದ ಅಧ್ಯಕ್ಷರ ಗಮನಕ್ಕೆ ತರಬೇಕು ಎಂದುಕೊಂಡಿದ್ದೆವು. ಆದರೆ ಸರಿಯಾಗಿ ಮಾತನಾಡಲು ಬಿಡಲಿಲ್ಲ. ಹೊರಗುತ್ತಿಗೆಯಡಿ ದುಡಿಯುವ ಮಹಿಳೆಯರಿಗೆ ಕಳಪೆ ಗುಣಮಟ್ಟದ ಸೀರೆ ನೀಡಲಾಗಿದೆ ಎಂದು ದೂರಿದರು. 

ನಗರಸಭೆ ಅಧ್ಯಕ್ಷೆ ಹೇಮಲತಾ ಬೂದೆಪ್ಪ, ಉಪಾಧ್ಯಕ್ಷ ಜಯಣ್ಣ, ಆಯೋಗದ ಸದಸ್ಯ ಗೋಕುಲ ನಾರಾಯಣ ಸ್ವಾಮಿ, ನಗರಾಭಿವೃದ್ಧಿ
ಕೋಶದ ಯೋಜನಾ ನಿರ್ದೇಶಕ ಈರಣ್ಣ ಬಿರಾದಾರ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next