Advertisement
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ, ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ ಪರಿಹರಿಸುವ ಸಲುವಾಗಿ ಜಿಲ್ಲಾಡಳಿತದ ವತಿಯಿಂದ ನೇರ ಫೋನ್ ಇನ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಒಟ್ಟು 31 ದೂರುಗಳು ದಾಖಲಾದವು.
Related Articles
Advertisement
ಪ್ರತಿನಿತ್ಯ ಕುಡಿವ ನೀರಿನ ತೊಂದರೆ: ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದ ನಿವಾಸಿಯೊಬ್ಬರು ಕರೆ ಮಾಡಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಕೇವಲ 15 ದಿನಗಳಿಗೆ ಒಮ್ಮೆ ಮಾತ್ರ ನೀರನ್ನು ಒದಗಿಸಲಾಗುತ್ತಿದೆ. ಇದರಿಂದ ದಿನನಿತ್ಯದ ಕಾರ್ಯಗಳಿಗೆ ತೊಡಕಾಗಿದೆ ಎಂದು ಗಮನ ಸೆಳೆದರು.
ಮಾಹಿತಿ ಪಡೆದ ಜಿಲ್ಲಾಧಿಕಾರಿ ಅವರು, ಈ ಸಮಸ್ಯೆ ಬಗ್ಗೆ ಪರಿಶಿಲಿಸಲಾಗುವುದು, ಸಮಬಂಧಪಟ್ಟ ಅಧಿಕಾರಿಗಳು ಈ ಕೂಡಲೇ ಗ್ರಾಮಕ್ಕೆ ಭೇಟಿ ನೀಡಿ, ಸಮಸ್ಯೆಯ ವಿಶ್ಲೇಷಣೆ ನಡೆಸಿ ಅಗತ್ಯ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದರು.
ಅವೈಜ್ಞಾನಿಕ ಚರಂಡಿ ನಿರ್ಮಾಣ: ಕೊಳ್ಳೇಗಾಲ ಪಟ್ಟಣದಿಂದ ಕರೆ ಮಾಡಿದ ಓರ್ವರು, ಮಹಾಲಕ್ಷ್ಮೀ ಲಾಡ್ಜ್ ರಸ್ತೆಯ ಬಡಾವಣೆ ಭಾಗದಲ್ಲಿ ಅವೈಜ್ಞಾನಿಕ ಚರಂಡಿ ನಿರ್ಮಾಣದಿಂದ ಮಾನವ ತ್ಯಾಜ್ಯಗಳು ಚರಂಡಿ ನೀರಿನೊಂದಿಗೆ ಸೇರಿ ಹೋಗಿದೆ. ಇದು ಪರಿಸರ ಮಾಲಿನ್ಯ ಮಾಡುತ್ತಿರುವುದಲ್ಲದೇ, ಸಾಂಕ್ರಾಮಿಕ ರೋಗಗಳು ಹೆಚ್ಚುವ ಭೀತಿ ತಂದಿದೆ.
ಹೀಗಾಗಿ ಸೂಕ್ತ ರೀತಿಯಲ್ಲಿ ಈ ಸಮಸ್ಯೆಯನ್ನು ಬಗೆಹರಿಸಬೇಕು ಎಂದರು. ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ, ಈಗಾಗಲೇ ಪಟ್ಟಣದಲ್ಲಿ ಒಳ ಚರಂಡಿ ಕಾಮಗಾರಿ ನಡೆಯುತ್ತಿದೆ. ಕೂಡಲೇ ಪರಿಶೀಲಿಸಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಹೇಳಿದರು.
ಖಾಸಗಿ ಲೇವಾದೇವಿದಾರರ ಸಮಸ್ಯೆ ಹೆಚ್ಚಳ: ಗುಂಡ್ಲುಪೇಟೆ ತಾಲೂಕಿನಿಂದ ಮಾತನಾಡಿದ ಓರ್ವರು, ಖಾಸಗಿ ಲೇವಾದೇವಿದಾರರ ಸಮಸ್ಯೆ ತಾಲೂಕಿನಲ್ಲಿ ಹೆಚ್ಚಾಗಿದೆ. ಇದು ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿದೆ ಎಂದು ಹೇಳಿದರು. ಇದಕ್ಕೆ ಉತ್ತರ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ. ಆನಂದ್ ಕುಮಾರ್ ಅವರು, ಈ ಬಗ್ಗೆ ತಮ್ಮನ್ನೇ ಖುದ್ದು ಭೇಟಿ ಮಾಡಿ ವಿವರಿಸಿದಲ್ಲಿ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಮೂಲ ಸೌಲಭ್ಯ ಪರಿಶೀಲಿಸಿ: ನಗರದ ಗಾಳಿಪುರ 3ನೇ ಬಡಾವಣೆ ನಿವಾಸಿಯೊಬ್ಬರು ಕರೆ ಮಾಡಿ, ವಾಜಪೇಯ ವಸತಿ ಯೋಜನೆಯಡಿ ಮನೆ ನಿರ್ಮಿಸಲಾಗಿದೆ. ಆದರೆ, ಬೀದಿಗಳಿಗೆ ಯಾವುದೇ ಮೂಲ ಸೌಲಭ್ಯಗಳಾದ ಚರಂಡಿ ವ್ಯವಸ್ಥೆ, ರಸ್ತೆಗಳಿಲ್ಲ. ಈ ಬಗ್ಗೆ ಪರಿಶೀಲಿಸಬೇಕೆಂದು ತಿಳಿಸಿದರು. ಇದಕ್ಕೆ ಜಿಲ್ಲಾಧಿಕಾರಿ ಉತ್ತರ ನೀಡಿ, ಬಡಾವಣೆಗೆ ಭೇಟಿ ನೀಡಿ ಅಗತ್ಯ ಸೌಕರ್ಯಗಳನ್ನು ಒದಗಿಸುವ ಕಾಮಗಾರಿ ಕೈಗೊಳ್ಳಲು ನಗರಸಭೆಗೆ ಸೂಚನೆ ನೀಡಲಾಗುವುದು ಎಂದರು.
ಸಮರ್ಪಕ ಬಸ್ ಸೇವೆ ಕಲ್ಪಿಸಿ: ಹೊಸ ರಾಮಾಪುರ ಗ್ರಾಮದಿಂದ ಕರೆ ಮಾಡಿದ ಸಾರ್ವಜನಿಕರೊಬ್ಬರು ಹೊಸ ರಾಮಾಪುರ, ಅಂಬಿಗಪುರದಿಂದ ಯಾವುದೇ ಬಸ್‌ಗಳಿಲ್ಲ. ಪಟ್ಟಣಕ್ಕೆ ಬರುವ ರಸ್ತೆ ತಲುಪಲು ಸುಮಾರು 5 ಕಿ.ಮೀ ಕ್ರಮಿಸಬೇಕಿದೆ. ಇದರಿಂದ ಮುಖ್ಯವಾಗಿ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಹೀಗಾಗಿ ಈ ಮಾರ್ಗವಾಗಿ ಸಮರ್ಪಕ ಬಸ್ ಸೇವೆ ಒದಗಿಸಬೇಕು ಎಂದು ಕೇಳಿದರು. ಇದಕ್ಕೆ ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ, ತ್ವರಿತವಾಗಿ ಬಸ್ ಸೇವೆ ಕಲ್ಪಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಸಿಸಿ ಟಿವಿ ಕಾರ್ಯನಿರ್ವಹಿಸುತ್ತಿಲ್ಲ: ಗುಂಡ್ಲುಪೇಟೆ ಪಟ್ಟಣದಿಂದ ಕರೆ ಮಾಡಿದ ಓರ್ವರು, ತಾಲೂಕಿನ ರಸ್ತೆಗಳಲ್ಲಿ ಸುರಕ್ಷಿತ ದೃಷ್ಟಿಯಿಂದ ಹಾಕಲಾಗಿದ್ದ ಸಿಸಿ ಟಿವಿ ಕ್ಯಾಮೆರಾಗಳು ಕಾರ್ಯನಿರ್ವಹಿಸುತ್ತಿಲ್ಲ. ಹೀಗಾಗಿ ಅವುಗಳನ್ನು ಬದಲಾಯಿಸಬೇಕು ಎಂದು ಕೇಳಿದರು.
ಇದಕ್ಕೆ ಉತ್ತರಿಸಿದ ಪೊಲೀಸ್ ವರಿಷ್ಠಾಧಿಕಾರಿ, ರಸ್ತೆಗಳಲ್ಲಿರುವ ಸಿಸಿ ಟಿವಿಗಳನ್ನು ಪರಿಶೀಲಿಸಿ, ಕಾರ್ಯನಿರ್ವಹಿಸದೇ ಇರುವ ಕಡೆ ಹೊಸದಾಗಿ ಸಿಸಿಟಿವಿ ಅಳವಡಿಕೆ ಕಾರ್ಯ ಆರಂಭಿಸಲಾಗುವುದು ಎಂದರು. ರಸ್ತೆ, ಚರಂಡಿ ದುರಸ್ಥಿ, ಅಕ್ರಮ ಮದ್ಯ ಮಾರಾಟ, ಸ್ಮಶಾನ ಒತ್ತುವರಿ, ಬೀದಿ ದೀಪ, ಪಾದಚಾರಿ ರಸ್ತೆ ಕಾಮಗಾರಿ, ಕಾಲುವೆ ಒತ್ತುವರಿ ಕುರಿತು ಸಮಸ್ಯೆಗಳು ಫೋನ್ ಇನ್ ಕಾರ್ಯಕ್ರಮದಲ್ಲಿ ಕೇಳಿಬಂದವು.
ಸಂಪೂರ್ಣ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಿ: ನೇರ ಫೋನ್ ಆಲಿಸಿದ ಬಳಿಕ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಮಾತನಾಡಿ, ಫೋನ್-ಇನ್‌ನಲ್ಲಿ ಕೇಳಿಬಂದಿರುವ ಎಲ್ಲಾ ಸಮಸ್ಯೆಗಳ ಪರಿಹಾರ ಕಾರ್ಯದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ವಿಳಂಬ ನೀತಿ ಅನುಸರಿಸದೇ ತೊಡಗಿಸಿಕೊಳ್ಳಬೇಕು.
ಅಗತ್ಯವಿದ್ದಲ್ಲಿ ಸ್ಥಳಕ್ಕೆ ಭೇಟಿ ಕೊಟ್ಟು ಸಂಪೂರ್ಣ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು. ಕಾಲಮಿತಿಯೊಳಗೆ ಎಲ್ಲಾ ಕೆಲಸಗಳು ಪೂರ್ಣಗೊಳ್ಳಬೇಕು ಎಂದು ನಿರ್ದೇಶನ ನೀಡಿದರು. ಕೊಳ್ಳೇಗಾಲ ಉಪವಿಭಾಗಾಧಿಕಾರಿ ನಿಖೀತಾ ಚಿನ್ನಸ್ವಾಮಿ, ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.
ಶೌಚಾಲಯ, ಚರಂಡಿ ವ್ಯವಸ್ಥೆ ಇಲ್ಲದೇ ತೊಂದರೆ: ಚಾಮರಾಜನಗರದ ಬಾಬು ಜಗಜೀವನರಾಂ ಬಡಾವಣೆಯಿಂದ ಕರೆ ಮಾಡಿದ ಸ್ಥಳೀಯರೊಬ್ಬರು ಕರಿನಂಜನಪುರದಲ್ಲಿ ಮಂಜೂರಾಗಿರುವ ಸ್ಮಶಾನ ಜಾಗಕ್ಕೆ ಸುತ್ತುಗೋಡೆ ನಿರ್ಮಿಸಿಲ್ಲ. 18ನೇ ವಾರ್ಡಿನಲ್ಲಿ ಸಮುದಾಯ ಶೌಚಾಲಯವಿಲ್ಲ.
ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ತೀವ್ರ ತೊಂದರೆಯಾಗಿದೆ ಎಂದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಯವರು, ಈ ಸಂಬಂಧ ಕ್ರಮ ವಹಿಸಲಾಗುವುದು. ತಾವು ಸಹ ವಾರ್ಡ್‌ಗಳಿಗೆ ಭೇಟಿನೀಡಿ ಪರಿಶೀಲಿಸುವುದಾಗಿ ತಿಳಿಸಿದರು.