Advertisement

ಓಕೆ ಎನ್ನ  ಬೇಡಿ,  ಸರಿ ಎನ್ನಿ ! 

12:30 AM Feb 15, 2019 | |

ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಒಂದು ಸಾರ್ವಜನಿಕ ಶೌಚಾಲಯದಲ್ಲಿ ಎರಡು ವಿಭಾಗಗಳು. ಗಂಡಸರಿಗೆ ಮತ್ತು ಹೆಂಗಸರಿಗೆ. ಆದರೆ, ಬರಹಗಾರನ ಪ್ರಕಾಂಡ ಪಾಂಡಿತ್ಯದಿಂದ ಇವೆರಡು ಪದಗಳು ಬೇರೆಯೇ ರೂಪವನ್ನು ಪಡೆದಿದ್ದವು. ಗಂಗಸರಕ್ಕೆ, ಹೆಂಡಸರಕ್ಕೆ. ಅದನ್ನು ಕಂಡವರೂ ಏನೂ ಅಪಭ್ರಂಶವಾದ ಅರಿವೇ ಇಲ್ಲದೆ ಬರಹಗಾರನ ಕನ್ನಡ ಪಾಂಡಿತ್ಯವನ್ನು ಒಪ್ಪಿಕೊಂಡಿದ್ದರು. ಇಂದಿನ ಕನ್ನಡದ ಸ್ಥಿತಿಯೇ ಇದು. ಅದರಲ್ಲೂ ಬೆಂಗಳೂರಿನ ಬೀದಿ ಬೀದಿಗಳಲ್ಲಿ  ಇಂತಹ  ಅಪಭ್ರಂಶ ಪಂಡಿತರ ಕನ್ನಡ ಕೃತಿಗಳು ಹೊಸದೊಂದು ಸಾಹಿತ್ಯ ಸಮ್ಮೇಳನಕ್ಕೆ ತಯಾರಾಗಿ ನಿಂತಂತೆ ರಸ್ತೆಗಳ ನಾಮಫ‌ಲಕಗಳಲ್ಲಿ, ಸೂಚನಾ ಫ‌ಲಕಗಳಲ್ಲಿ , ಅಷ್ಟೇ ಯಾಕೆ ದೊಡ್ಡ ದೊಡ್ಡ ಅಂಗಡಿಗಳಿಂದ ಹಿಡಿದು ವಿಧಾನಸೌಧದವರೆಗೂ ರಾರಾಜಿಸುತ್ತಿರುತ್ತವೆ.

Advertisement

ನಮ್ಮಲ್ಲಿ ಬಹುತೇಕರಿಗೆ ಕನ್ನಡ ಪ್ರೇಮ ಪುಟಿದೇಳುವುದು ರಾಜ್ಯೋತ್ಸವದ ಸಂದರ್ಭದಲ್ಲಿ ಮಾತ್ರ. ಕೇಳಿದರೆ “ನಾವು ಕನ್ನಡಿಗರು, ನಾವ್ಯಾಕೆ ಬೇರೆ ಭಾಷೆ ಮಾತನಾಡಬೇಕು? ಕನ್ನಡ ನಮ್ಮ ತಾಯಿ…’ ಎಂದೆಲ್ಲ ಹೇಳುವ ಅನ್ಯಭಾಷೆ ಬಾರದ ಕನ್ನಡವನ್ನೂ ಸ್ಪಷ್ಟವಾಗಿ ಮಾತನಾಡಲಾಗದ ಒಂದಿಷ್ಟು ಜನರಾದರೆ ಮತ್ತೂಂದಿಷ್ಟು ಜನರು ಕನ್ನಡ ಭಾಷೆಯನ್ನು ಉಳಿಸುವ ನೆಪದಲ್ಲಿ ಪ್ರತಿಭಟನೆಗಳನ್ನು ನಡೆಸಿ ತಾವೇ ಕನ್ನಡದ ಮಾನಸ ಪುತ್ರರಂತೆ ವರ್ತಿಸುತ್ತ ಜನಜೀವನವನ್ನು ಅಸ್ತವ್ಯಸ್ತಗೊಳಿಸಿ ಸುಮ್ಮನಾಗುವುದೂ ಉಂಟು. ಅಷ್ಟಕ್ಕೂ ಇವರೆಲ್ಲರ ಹೋರಾಟದಿಂದ ಕನ್ನಡ ಭಾಷೆಗೆ ಏನಾದರೂ ಲಾಭವಾಯಿತೆ? ಖಂಡಿತಾ ಇಲ್ಲ. ಮೊದಲನೆಯದಾಗಿ ನಮ್ಮ ರಾಜಧಾನಿ ಬೆಂಗಳೂರನ್ನೇ ತೆಗೆದುಕೊಳ್ಳೋಣ. ರಾಜಧಾನಿಯಾದರೂ ಇಂದಿಗೂ ಸ್ಪಷ್ಟ , ವ್ಯಾಕರಣಬದ್ಧ ಕನ್ನಡವನ್ನು ಮಾತನಾಡುವುದು ಬಿಡಿ ಬರೆಯಲೂ ಕಲಿತುಕೊಂಡಿಲ್ಲ. ಹತ್ತರಲ್ಲಿ ಆರು ರಸ್ತೆಗಳ ಹೆಸರುಗಳನ್ನು ತಪ್ಪಾಗಿ ಬರೆದಿರುತ್ತಾರೆ. ಕನ್ನಡ ಮಾತನಾಡುವಾಗಲೂ ಅಷ್ಟೇ, ಚಿತ್ರ-ವಿಚಿತ್ರ ವ್ಯಾಕರಣ, ಛಂದಸ್ಸುಗಳು ಉಪಯೋಗಕ್ಕೆ ಬರುತ್ತವೆ. “ನಾವು ಬಂದ್‌ಬಿಟ್ಟು ಮೆಜೆಸ್ಟಿಕ್‌ನವರು. ನಮ್‌ ಮನೆ ಬಂದ್‌ಬಿಟ್ಟು ಗಣಪತಿ ಗುಡಿಯ ಬಳಿ ಬಂದ್‌ಬಿಟ್ಟು ಎರಡನೇ ಕ್ರಾಸು…’- ಹೀಗೆ ಹಿಂದುಮುಂದು ಇಲ್ಲದ ಶಬ್ದ ಭಂಡಾರದ ಆಗರವೇ ಆಗಿಬಿಟ್ಟಿದೆ ನಮ್ಮ ಭಾಷೆ.

ಯುವ ಪೀಳಿಗೆಯೂ ಅಷ್ಟೇ. ಒಬ್ಬರನ್ನೊಬ್ಬರು ನೋಡಿ ಇಂತಹ ಮಹಾನ್‌ ಪಾಂಡಿತ್ಯದ ಅಪಭ್ರಂಶ ಕನ್ನಡವನ್ನೇ ತಮ್ಮದಾಗಿಸಿಕೊಂಡಿದ್ದಾರೆ. ಇನ್ನು ಕೆಲವರ ಅಭಿಪ್ರಾಯವೆಂದರೆ, ಶಿಕ್ಷಣ ಪದ್ಧತಿಯಲ್ಲಿ ಆಂಗ್ಲ ಭಾಷೆಯ ಪ್ರಭಾವದಿಂದಾಗಿ ಕನ್ನಡ ಭಾಷೆಯು ಕಳೆಗುಂದಿದೆ ಎನ್ನುವುದು. ಅದಕ್ಕಾಗಿಯೇ ಸರಕಾರಿ ಶಾಲೆಗಳಲ್ಲಿ ಪ್ರಥಮ ಭಾಷೆಯನ್ನು ಕನ್ನಡವಾಗಿರಿಸಿ ಆಂಗ್ಲ ಭಾಷೆಗೆ ನಂತರದ ಸ್ಥಾನ ನೀಡಲಾಗಿದೆಯಾದರೂ ಕನ್ನಡದ ಪರಿಸ್ಥಿತಿ ಅಷ್ಟಕ್ಕಷ್ಟೇ. ಕನ್ನಡವನ್ನು ಪೋಷಿಸಲು ಬೇರೆ ಭಾಷೆಗಳು ಅಡ್ಡಿಬರುವುದಿಲ್ಲವೆನ್ನುವುದೇ ನನ್ನ ವಾದ. ಕನ್ನಡದ ಬಗ್ಗೆ ಅಭಿಮಾನವೆಂದ ಮಾತ್ರಕ್ಕೆ ಕನ್ನಡ ನಮ್ಮದಾಗುವುದಿಲ್ಲ. ಕನ್ನಡ ಸಾಹಿತ್ಯ ಅಥವಾ ಭಾಷೆಯನ್ನು ಸ್ಪಷ್ಟವಾಗಿ ಉಪಯೋಗಿಸುವುದರಿಂದ ಮಾತ್ರ ಅದಕ್ಕೆ ಉಳಿವು. ಜನರೂ ಅಷ್ಟೇ ಆಂಗ್ಲ ಮಾಧ್ಯಮ ಶಾಲೆಯನ್ನೇ ಗುರಿಯಾಗಿರಿಸಿಕೊಂಡು ಕನ್ನಡ ಹೋರಾಟಗಳನ್ನು ನಡೆಸುವುದುಂಟು. ಯಾಕೆ? ಆಂಗ್ಲ ಭಾಷೆ ಬಲ್ಲವನು ಕನ್ನಡವನ್ನು ಸ್ಪಷ್ಟವಾಗಿ ಮಾತನಾಡಲಾರ ಎಂದೇನೂ ನಿಯಮವಿದೆಯೇ? ಇಂದಿನ ದಿನಗಳಲ್ಲಿ ವ್ಯಾವಹಾರಿಕವಾಗಿ ಕನ್ನಡದ ಜೊತೆಗೆ ಆಂಗ್ಲ ಭಾಷೆಯೂ ಮುಖ್ಯವೇ. ಆದರೆ, ಪ್ರತಿಭಟನಾಕಾರರು ಮಾತ್ರ ತಮ್ಮ ಮಕ್ಕಳನ್ನು ಅಮೆರಿಕದಲ್ಲೋ, ಲಂಡನ್ನಿನಲ್ಲೋ ಓದಿಸಿ ಬೆಂಗಳೂರಿನಲ್ಲಿ ಆಂಗ್ಲ ವಿರೋಧಿ ಫ‌ಲಕಗಳನ್ನು ಹಿಡಿದು ತಾವೇನೋ ಮಹತ್ಕಾರ್ಯ ಮಾಡುತ್ತಿರುವಂತೆ ವರ್ತಿಸುತ್ತಾರೆ. ಮೊದಲಿಗೆ ನಾವು ಕನ್ನಡದ ಗುಣಮಟ್ಟ ಕೆಡಲು ಕಾರಣವೇನೆಂದು ಚಿಂತಿಸಿದರೆ ಅದಕ್ಕೆ ಹಲವಾರು ಉತ್ತರಗಳು ದೊರಕುತ್ತವೆ.

ನಾನು ಶಾಲೆಯಲ್ಲಿದ್ದ ಕಾಲ. ಒಂಬತ್ತನೆಯ ತರಗತಿ ಇರಬೇಕು. ಆಂಗ್ಲ ಭಾಷೆಯ ಪಠ್ಯಪುಸ್ತಕದಲ್ಲಿ ಬಸವಣ್ಣನವರ ಒಂದು ಉತ್ತಮ ವಚನವನ್ನು ತರ್ಜುಮೆ ಮಾಡಿ ಪ್ರಕಟಿಸಲಾಗಿತ್ತು. ಆಂಗ್ಲ ಭಾಷಾ ತರ್ಜುಮೆಯನ್ನು ಓದಿದರೆ ಎಂತಹವರಿಗೂ ನಗು ಬರುವುದರಲ್ಲಿ ಸಂಶಯವೇ ಇರಲಿಲ್ಲ. ಯಾವ ಮಟ್ಟದ ಆಂಗ್ಲ  ಭಾಷೆಯನ್ನು ಬಳಸಲಾಗಿತ್ತೆಂದರೆ ಸುಮಾರು ಎಂಟØತ್ತು ಸಾಲುಗಳಲ್ಲಿ ಬಸವಣ್ಣನವರ ವಚನಗಳಿಗಿರುವ ಗಾಂಭೀರ್ಯವನ್ನು ಅಳಿಸಿಹಾಕಿದ್ದರು

ಬಸವಣ್ಣನವರ ಜೀವನ ಚರಿತ್ರೆಯನ್ನು ಆಂಗ್ಲ ಭಾಷೆಗೆ ತರ್ಜುಮೆ ಮಾಡಿದಲ್ಲಿ ಯಾವುದೇ ಆಕ್ಷೇಪ ವ್ಯಕ್ತವಾಗುತ್ತಿರಲಿಲ್ಲ. ಅದನ್ನು ಬಿಟ್ಟು ಛಂದಸ್ಸುಬದ್ಧ ಭಾಷೆಯೊಂದರ ಕೃತಿಯನ್ನು ಛಂದಸ್ಸು ರಹಿತ ಭಾಷೆಗೆ ತರ್ಜುಮೆಗೊಳಗಾದ ಭಾಷೆಗೂ ಅವಮಾನ, ಆಂಗ್ಲ ಭಾಷೆಗೂ ಅವಮಾನ. ಕುವೆಂಪುರವರು ಕನ್ನಡದ ಒಬ್ಬ ಮಹಾನ್‌ ಚೇತನರು. ಆದರೆ, ಅವರು ಯಾವಾಗಲೂ ವಿಲಿಯಮ್‌ ವರ್ಡ್ಸ್‌ವರ್ತ್‌ರಾಗಲು ಸಾಧ್ಯವೇ? ಅದೇ ರೀತಿ ವರ್ಡ್ಸ್‌ವರ್ತ್‌ ಕುವೆಂಪು ಆಗಲು ಸಾಧ್ಯವೇ? ಇಲ್ಲವಲ್ಲ. ಇಂತಹ ಎಡವಟ್ಟುಗಳಿಂದಲೇ ಯುವಜನರಲ್ಲಿ ಇಂದು ಕನ್ನಡ ಸಾಹಿತ್ಯದ ಅಭಿರುಚಿ ಕುಂದುತ್ತಿದೆ.

Advertisement

ಆಂಗ್ಲ ಮಾಧ್ಯಮ, ಕನ್ನಡ ಮಾಧ್ಯಮವೆಂದಲ್ಲ ಎಲ್ಲ ಪಠ್ಯಕ್ರಮಗಳ ಕನ್ನಡ ಪಠ್ಯಗಳನ್ನು ಚೆನ್ನಾಗಿ ನಿರ್ಮಿಸಿದಲ್ಲಿ ಇಂದು ಜನರು ಕನ್ನಡದ ಪರ ಅಭಿಮಾನವನ್ನು ತೋರ್ಪಡಿಸುವುದಲ್ಲದೇ ಅನ್ಯ ಭಾಷೆಗಳನ್ನು ಹೆಚ್ಚಾಗಿ ಬಳಸುತ್ತಿದ್ದರೂ ಶುದ್ಧ ಕನ್ನಡವನ್ನೇ ಇಷ್ಟಪಡುತ್ತಿದ್ದರು.

ಇನ್ನು ನಮ್ಮ ಗಾಂಧಿನಗರದ ವಿಷಯಕ್ಕೆ ಬರೋಣ. ಕನ್ನಡ ಭಾಷಾ ಹೋರಾಟಕ್ಕೆ ಯಾವಾಗಲೂ ಬೆಂಬಲ ನೀಡುವ ನಮ್ಮ ಸಿನೆಮಾ ಕ್ಷೇತ್ರದವರೆಷ್ಟು ಕನ್ನಡವನ್ನು ಉಳಿಸಿದ್ದಾರೆ ಎನ್ನುವುದನ್ನು ನಾವು ಗಮನಿಸುವುದೇ ಇಲ್ಲ. “ಈ ಖಾಕಿ ಖದರ್‌ ನಿನೆYàನೋ ಗೊತ್ತು’ ಎಂದು ನಾಯಕ ಹೇಳಿದ್ದೇ ಹೇಳಿದ್ದು ಏನು ಸೀಟಿ, ಏನು ಚಪ್ಪಾಳೆ. ನಾಯಕ ಬಳಸಿದ ಬಹುತೇಕ ಶಬ್ದಗಳು ಅನ್ಯಭಾಷೆಯದ್ದೇ ಆಗಿದ್ದವು. ನಾನೇನು ಸಿನೆಮಾದಲ್ಲೂ ಅತಿಶುದ್ಧ ಕನ್ನಡವನ್ನೇ ಬಳಸಬೇಕೆಂದು ಹೇಳುತ್ತಿಲ್ಲ. ಆದರೂ ಅಗತ್ಯವಿದ್ದಲ್ಲಿ ಮಾತ್ರ ಅನ್ಯಭಾಷೆಯ ಪದಗಳನ್ನು ಬಳಸುವುದು ಸೂಕ್ತ ಎನ್ನುತ್ತಿದ್ದೇನೆ.

ನಮ್ಮ ದೂರದರ್ಶನದ ಮಾಧ್ಯಮಮಿತ್ರರು ಬೆಳಗ್ಗಿನಿಂದ ರಾತ್ರಿಯವರೆಗೂ ಅಪಭ್ರಂಶ ಶಬ್ದಗಳ ಗುಡ್ಡವನ್ನೇ ಕಟ್ಟುತ್ತಿರುತ್ತಾರೆ. ವಾರ್ತೆ ಓದುವಾಕೆಯೂ ಅಷ್ಟೇ, ವಾರ್ತೆಯನ್ನು ವಿಶ್ಲೇಷಿಸುವಾಗ yes, ok, alright, small break, we’ll be right back  ಎಂಬೆಲ್ಲ ಪದಗಳನ್ನು ಬಳಸಿ ಕನ್ನಡವನ್ನು ಅನಾವಶ್ಯಕವಾಗಿ ಕಂಗ್ಲೀಷು ಮಾಡುತ್ತಿದ್ದಾರೆ. ಇಂತಹ ಸಣ್ಣ ಸಣ್ಣ ವಿಷಯಗಳನ್ನು ಸರಿಪಡಿಸಿಕೊಳ್ಳುವುದು ಸ್ವಲ್ಪ ಕಷ್ಟಸಾಧ್ಯವಾದರೂ ಸಾಹಿತ್ಯಿಕವಾಗಿ ಕನ್ನಡವೆಂಬ ಸುಂದರ ಭಾಷೆಯನ್ನು ಉಳಿಸಬೇಕಾದಲ್ಲಿ ಈ ವಿಷಯಗಳೆಡೆಗೆಗಮನಹರಿಸಲೇಬೇಕಾಗಿದೆ.

 ನಿಶಾಂತ್‌ ಪ್ರಭು ಕೆ.
 ದ್ವಿತೀಯ ಇಂಜಿನಿಯರಿಂಗ್‌ ಶ್ರೀ ಮಧ್ವ ವಾದಿರಾಜ ಇನ್‌ಸ್ಟಿಟ್ಯೂಟ್‌, ಬಂಟಕಲ್ಲು 

Advertisement

Udayavani is now on Telegram. Click here to join our channel and stay updated with the latest news.

Next