ಕಲಬುರಗಿ: ಮಕ್ಕಳೇ ನಮ್ಮೆಲ್ಲರ ಸಂಪತ್ತು. ಅವರನ್ನು ಕೇವಲ ಸ್ಕೂಲ್, ಟ್ಯೂಷನ್, ಪರೀಕ್ಷೆ, ರ್‍ಯಾಂಕ್‌ಗಳು ಎಂಬ ಗೋಡೆಗಳಲ್ಲಿ ಬಂಧಿಗಳಾಗಿಸಬೇಡಿ ಎಂದು ರಾಜ್ಯಸಭಾ ಸದಸ್ಯ ಹಾಗೂ ವಿಕಾಸ ಅಕಾಡೆಮಿ ಅಧ್ಯಕ್ಷ ಡಾ| ಬಸವರಾಜ ಪಾಟೀಲ ಸೇಡಂ ಪಾಲಕರಿಗೆ ಕಿವಿಮಾತು ಹೇಳಿದರು.
ನಗರದ ಎಸ್‌ಆರ್‌ಎನ್ ಮೆಹತಾ ಶಾಲೆಯಲ್ಲಿ ರಂಗತೋರಣ ಶುಕ್ರವಾರ ಹಮ್ಮಿಕೊಂಡಿದ್ದ ಮಕ್ಕಳ ಚಂದಮಾಮ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳು ಕೂಡ ತಮ್ಮ ವಿದ್ಯಾರ್ಥಿ ಜೀವನವನ್ನು ಕೇವಲ ಮೊಬೈಲ್, ವಿಡಿಯೋ ಗೇಮ್ಸ್, ಫೇಸ್‌ಬುಕ್, ವಾಟ್ಸ್‌ಆ್ಯಪ್ ಗಳಲ್ಲಿ ಕಳೆದು ಹೋಗುವಂತೆ ಮಾಡಿಕೊಳ್ಳಬಾರದು ಎಂದು ಹೇಳಿದರು.
ರಂಗತೋರಣದ ಹೊಸ ಯೋಜನೆ ಚಂದಮಾಮ ಅಂಗಳದಲ್ಲಿ ಇಲ್ಲಿ ಎಲ್ಲ ಮಕ್ಕಳು ಆಡಿ, ಹಾಡಿ, ನಲಿದು, ಕುಣಿದು ಕುಪ್ಪಳಿಸಿ ಹೊಸದನ್ನು ಕಲಿತು ಸಮಾಜದಲ್ಲಿ ಅಚ್ಚರಿ ತರಬೇಕು ಎಂದು ಕಿವಿಮಾತು ಹೇಳಿದರು.
ಬಳ್ಳಾರಿ ರಂಗತೋರಣ ಸಂಸ್ಥೆ ಕಲಬುರಗಿಯಲ್ಲಿ ಕಲಬುರ್ಗಿ ರಂಗತೋರಣ ಸಂಸ್ಥೆ ಪ್ರಾರಂಭಿಸಿ ಇಂತಹ ಶಿಬಿರ ಮಾಡುವುದರ ಮೂಲಕ ವಿದ್ಯಾರ್ಥಿಗಳಲ್ಲಿ ಸಂಸ್ಕೃತಿ, ಕಲೆಗಳ ಕುರಿತು ಆಶಾಭಾವನೆ ಮೂಡಿಸುತ್ತಿರುವುದು ತುಂಬಾ ಹೆಮ್ಮೆಯ ವಿಷಯ ಎಂದು ಅವರು ಸಂತೋಷ ವ್ಯಕ್ತಪಡಿಸಿದರು.
ಮಕ್ಕಳು ಕೇವಲ ಅಂಕಗಳನ್ನು ಗಳಿಸುವ ಸಾಧನಗಳ್ಳನಾಗಿಸದೇ ಅವರಲ್ಲಿರುವ ಸೂಪ್ತ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವುದು ಅಗತ್ಯ. ಈ ಹಿನ್ನೆಲೆಯಲ್ಲಿ ಇಂತಹ ಶಿಬಿರಗಳು ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಹೇಳಿದರು.
ಉದ್ಯಮಿ ಶಿವಕುಮಾರ ಕುಕ್ಕುಂದಾ, ರಂಗತೋರಣ ಗೌರವಾಧ್ಯಕ್ಷ ಉಮೇಶ ಶೆಟ್ಟಿ ಅತಿಥಿಗಳಾಗಿ ಆಗಮಿಸಿದ್ದರು. ಚಕೋರ ಮೆಹತಾ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಜಲಿ ಪ್ರಾರ್ಥನಾಗೀತೆ ಹಾಡಿದರು. ಮಂಜು ಸ್ವಾಗತಿಸಿದರು. ಶಿಬಿರದ ಸಂಚಾಲಕ ಪ್ರವೀಣ ನಾಯಕ ಕಾರ್ಯಕ್ರಮ ನಿರೂಪಿಸಿದರು.