ಹುಬ್ಬಳ್ಳಿ: ಬಿಜೆಪಿಯಲ್ಲಿ ಮುಖ್ಯಮಂತ್ರಿ ಸ್ಥಾನ ಪಡೆಯಬೇಕಾದರೆ 2,500 ಕೋಟಿ ರೂ.ಗಳನ್ನು ಸಿದ್ದವಿಡಬೇಕು ಎಂದು ಅದೇ ಪಕ್ಷದ ಶಾಸಕ, ಕೇಂದ್ರದ ಮಾಜಿ ಸಚಿವ ಬಸನಗೌಡ ಯತ್ನಾಳ ದೇಶವೇ ತಲ್ಲಣಗೊಳ್ಳುವ ಹೇಳಿಕೆ ನೀಡಿದ್ದು, ಈ ವಿಚಾರದಲ್ಲಿ ಸಿಎಂಗೆ ರಾಜಕೀಯ ಬದ್ದತೆ ಇದ್ದರೆ ಪಕ್ಷದ ಗೌರವ ಉಳಿಸಿಕೊಳ್ಳುವುದು ಅವರಿಗೆ ಬಿಟ್ಟದ್ದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂತ್ರಿ ಸ್ಥಾನಕ್ಕೆ 50 ರಿಂದ 100 ಕೋಟಿ ರೂ. ರೆಡಿ ಮಾಡಿಕೊಂಡು ಬನ್ನಿ ಅಂತ ತಿಳಿಸಿದ್ದಾರೆ. ರಾಜ್ಯದ ಹಗರಣಗಳನ್ನು ಎಲ್ಲರೂ ಗಮನಿಸಿದ್ದಾರೆ. ಈ ಸರಕಾರ ಹುಟ್ಟಿದ್ದೇ ಶಾಸಕರ ಖರೀದಿ ಮೂಲಕ. ಬೇರೆ ಬೇರೆ ಶಾಸಕರಿಗೂ ಬಿಜೆಪಿ ಆಮಿಷ ಒಡ್ಡಿದ್ದನ್ನು ನಾವು ನೋಡಿದ್ದೇವೆ. ಇಂದು ರಾಜ್ಯದ ಜನತೆ ಪ್ರತಿಯೊಂದರಲ್ಲೂ ಭ್ರಷ್ಟಾಚಾರದ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಎಲ್ಲಾ ನೇಮಕಾತಿಗಳಲ್ಲೂ ಸಹ ಒಂದೊಂದು ರೇಟ್ ಫಿಕ್ಸ್ ಆಗಿದೆ. ಹೋಟೆಲ್ ನಲ್ಲಿ ತಿಂಡಿ ಬೆಲೆಗೆ ರೇಟ್ ಹಾಕಿದಂತೆ ಇವರು ರೇಟ್ ಹಾಕಿದ್ದಾರೆ. 2500 ಕೋಟಿ ರೂ. ನಿಮ್ಮ ಸ್ಥಾನಕ್ಕೆ ತಗೊಂಡು ಬನ್ನಿ ಅಂತ ಸಿಎಂನೇ ಕರೆದರೂ ಇನ್ನು ಯಾಕೆ ತನಿಖಾಧಿಕಾರಿ ಸುಮ್ಮನಿದ್ದಾರೆ. ಸಿಎಂ ತಮ್ಮನ್ನೇ ರಕ್ಷಣೆ ಮಾಡುತ್ತಿದ್ದಾರೋ, ಪಕ್ಷದ ರಕ್ಷಣೆಗೆ ನಿಂತಿದ್ದಾರೋ ಗೊತ್ತಿಲ್ಲ. ಕೇಂದ್ರ ಸರಕಾರದ ಏಜೆನ್ಸಿಯವರು ತನಿಖೆ ಮಾಡಬೇಕು. ಯತ್ನಾಳರನ್ನು ಕೂಡಲೇ ವಶಕ್ಕೆ ಪಡೆಯಬೇಕು. ಅವರನ್ನ ಸಾಕ್ಷಿಯಾಗಿಸಿಕೊಂಡು ತನಿಖೆ ಮಾಡಬೇಕು ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಹ ಇದರಲ್ಲಿ ಭಾಗಿಯಾಗಿದ್ದಾರೆ. ಅವರು ಸಹ ಮುಚ್ಚೋಕೆ ಪ್ರಯತ್ನ ಮಾಡುತ್ತಿದ್ದಾರೆ. ಕಾಂಗ್ರೆಸ್ ನವರೇ ಮಾಡಿರಲಿ ತನಿಖೆ ಆಗಲಿ. ಪ್ರಿಯಾಂಕ ಖರ್ಗೆ ಸುದ್ದಿಗೋಷ್ಠಿ ಮಾಡಿದರೆ ಅವರಿಗೆ ನೋಟಿಸ್ ಕೊಟ್ಟಿದ್ದೀರಿ. ಯತ್ನಾಳಗೆ ಯಾಕೆ ಕೊಟ್ಟಿಲ್ಲ? ಮಿಸ್ಟರ್ ಬಿಜೆಪಿ ಪ್ರೆಸಿಡೆಂಟ್, ಯಾಕೆ ಅಕ್ರಮ ಬಯಲಿಗೆಳೆಯುತ್ತಿಲ್ಲ? ಯಾವ ಮಂತ್ರಿ ಇದರಲ್ಲಿ ಭಾಗಿಯಾಗಿದ್ದರೂ ಅದರ ತನಿಖೆ ಆಗಬೇಕು. ಅವರ ವಿರುದ್ಧ ಕ್ರಮ ಆಗಲಿ ಎಂದರು.
ಇದನ್ನೂ ಓದಿ:ನಮಗೆ ಸರ್ಕಾರ ಹೇಗೆ ನಡೆಸಬೇಕೆಂದು ಕಾಂಗ್ರೆಸ್ ನವರು ತಿಳಿಸುವುದು ಬೇಡ: ಸಿಎಂ ಬೊಮ್ಮಾಯಿ
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಅವರ ಹೇಳಿಕೆಯನ್ನು ಇವರು ಕೇಳುತ್ತಿಲ್ಲ. ನಾವು ಸಿಎಂ ರಾಜೀನಾಮೆಗೆ ಒತ್ತಾಯಿಸುವುದಿಲ್ಲ. ನಾನು ಕೇಳಿದರೆ ರಾಜೀನಾಮೆ ಕೊಡ್ತಾರಾ ಅವರು? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನನ್ನ 40 ವರ್ಷದ ರಾಜಕಾರಣದಲ್ಲಿ ಈ ರೀತಿ ನೋಡಿರಲಿಲ್ಲ ಎಂದು ಬಿಜೆಪಿ ಸರಕಾರದ ವಿರುದ್ಧ ಹರಿಹಾಯ್ದರು.