ಬೆಂಗಳೂರು: ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಲು ಕೇವಲ ಒಂದು ಹೆಜ್ಜೆ ಮಾತ್ರ ಇದೆ. ಅಧಿಕಾರ ಹಂಚಿಕೆ ಕೇವಲ ಏಳು ಜನರಿಗೆ ಮಾತ್ರ ಗೊತ್ತಿದೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಹೊಸ ಬಾಂಬ್ ಸಿಡಿಸಿದ್ದಾರೆ.
ಅಷ್ಟೇ ಅಲ್ಲದೆ, ಅಧಿಕಾರ ಹಂಚಿಕೆ ವಿಚಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಕೆ.ಸಿ.ವೇಣುಗೋಪಾಲ್ ಹಾಗೂ ಸುಜೇìವಾಲಾ ಅವರಿಗೆ ಮಾತ್ರ ಗೊತ್ತಿದೆ. ಉಳಿದವರು ಯಾರೇ ಮಾತಾಡಿದರೂ ಕೇವಲ ಒಬ್ಬರನ್ನು ಓಲೈಸಿಕೊಳ್ಳಲು ಮಾತ್ರ. ಅದೆಲ್ಲವೂ ಸುಳ್ಳು ಎಂದು ಹೇಳುವ ಮೂಲಕ 50:50 ಅಧಿಕಾರ ಹಂಚಿಕೆ ಸೂತ್ರ ರೂಪಿಸಲಾಗಿದೆ ಎಂದು ಸೂಚ್ಯವಾಗಿ ಹೇಳಿದಂತಿದೆ.
ತಮಗೆ ಸಚಿವ ಸ್ಥಾನ ಕೈತಪ್ಪಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಕಾರಣವೆಂದು ಭಾವಿಸಿರುವ ಹರಿಪ್ರಸಾದ್ ಅವರು ತಮ್ಮ ಮಾತಿನ ಉದ್ದಕ್ಕೂ ಸಿಎಂ ಸಿದ್ದರಾಮಯ್ಯ ಅವರನ್ನೇ ಟಾರ್ಗೆಟ್ ಮಾಡಿ ಮಾತಾಡಿದಂತಿದೆ. ಜತೆಗೆ ಡಿ.ಕೆ.ಶಿವಕುಮಾರ್ ಮುಂದಿನ ಮುಖ್ಯಮಂತ್ರಿ ಎಂಬ ಸಂದೇಶ ರವಾನಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ನಾನು ಸಚಿವ ಸ್ಥಾನ ಬೇಕು ಎಂದು ಕೇಳಿದವನಲ್ಲ. ಐದಾರು ರಾಜ್ಯಗಳಲ್ಲಿ ಮುಖ್ಯಮಂತ್ರಿ ಸಹಿತ ಸಂಪುಟ ರಚನೆ ಮಾಡಿದವನು. ಬಾಡಿಗೆ ಮನೆಯಿಂದ ಬಂದವನು ನಾನಲ್ಲ, ಸ್ವಂತ ಮನೆಯಲ್ಲಿ ಇರುವವನು ಎಂದು ಪರೋಕ್ಷವಾಗಿ ತಮಗೆ ಸಚಿವ ಸ್ಥಾನ ತಪ್ಪಿಸಿದವರಿಗೆ ಟಾಂಗ್ ನೀಡಿದ್ದಾರೆ.
ಮೇಲ್ಮನೆ ವಿಪಕ್ಷ ನಾಯಕರನ್ನು, ಸಭಾನಾಯಕರನ್ನು ಮಾಡೋದು ಸಂಪ್ರದಾಯ, ಪದ್ಧತಿ ಹಿಂದಿನಿಂದಿಲೂ ಇತ್ತು.ಆ ಸಂಪ್ರದಾಯ ಮುರಿದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಸಚಿವ ಸ್ಥಾನ ಅದು ಮುಖ್ಯಮಂತ್ರಿಗಳ ಪರಮಾಧಿಕಾರ. ನಾನೆಂದೂ ಸಚಿವ ಸ್ಥಾನ ಬೇಕು ಎಂದು ಕೇಳಿಲ್ಲ. ಪರಿಷತ್‌ನಲ್ಲಿ ಸಭಾನಾಯಕರನ್ನಾಗಿ ಯಾರನ್ನು ಮಾಡಬೇಕೆಂದು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯವರನ್ನೇ ಕೇಳಿ ಎಂದು ಹೇಳಿದರು.
Related Articles
ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ನಾನು ಎಲ್ಲೂ ಹೇಳಿಲ್ಲ. ಅದೆಲ್ಲ ವಾಟ್ಸ್‌ಅಪ್ ಯುನಿವರ್ಸಿಟಿ ವಿಷಯ. ಸೋನಿಯಾ ಗಾಂಧಿಯವರು ನನ್ನ ಮೇಲೆ ಜವಾಬ್ದಾರಿ ಕೊಟ್ಟು ಪರಿಷತ್ ಸದಸ್ಯತ್ವ ಸ್ಥಾನ ನೀಡಿದ್ದಾರೆ. ಅದನ್ನು ನಿಭಾಯಿಸುತ್ತಿದ್ದೇನೆ. ರಾಜೀನಾಮೆ ನೀಡುವುದಾದರೆ ಅವರಿಗೆ ಹಾಗೂ ಸಭಾಪತಿಯವರಿಗೆ ನೀಡುತ್ತೇನೆ. ಸಚಿವ ಸ್ಥಾನ ಇಲ್ಲದಿದ್ದರೂ ನಾನು ಪರಿಷತ್ ನಲ್ಲಿ ಸಾಮಾನ್ಯ ಸದಸ್ಯನಾಗಿರುತ್ತೇನೆಂದು ಸ್ಪಷ್ಟಪಡಿಸಿದರು.
ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ನಲ್ಲಿ ಸಿಎಂ ಆಗಲಿದ್ದಾರೆ ಎಂದು ಒಕ್ಕಲಿಗ ಸಮುದಾಯ ಕಾಂಗ್ರೆಸ್ ಕಡೆ ಬಂತು. ಜೆಡಿಎಸ್‌ನ ಮತಗಳೆಲ್ಲ ಕಾಂಗ್ರೆಸ್ ಕಡೆ ಬಂದಿದೆ. ಇದರಿಂದ ಜೆಡಿಎಸ್ ಮತಗಳು ಕುಸಿದಿದೆ. ಖರ್ಗೆ, ಕೆ.ಎಚ್.ಮುನಿಯಪ್ಪ, ಪರಮೇಶ್ವರ್ ಅವರಿಂದ ದಲಿತ ಸಮುದಾಯದ ಮತಗಳು ಚದುರಿಲ್ಲ ಎಂದು ಸೂಕ್ಷ್ಮವಾಗಿ ಹೇಳಿದರು.
ನನ್ನ ಸಾಮಾಜಿಕ ನ್ಯಾಯದ ಸಿದ್ಧಾಂತಕ್ಕೂ, ಅಹಿಂದ ರಾಜಕೀಯಕ್ಕೂ ವ್ಯತ್ಯಾಸ ಇದೆ. ನಾನು ಸರ್ವಧರ್ಮ ಸಮ ಬಾಳ್ವೆಯಲ್ಲಿ ನಂಬಿಕೆ ಇಟ್ಟವನು. ಕಾಂಗ್ರೆಸ್ ಸಿದ್ಧಾಂತದಲ್ಲಿ ನಂಬಿಕೆ ಇಟ್ಟಿದ್ದೇನೆ. ಎಲ್ಲಿಯವರೆಗೂ ಇರು ಅಂತಾರೋ, ಅಲ್ಲಿಯವರೆಗೂ ಇರುತ್ತೇನೆ. ಕಾಲ ಬಂದಾಗ ಎಲ್ಲ ಹೇಳುತ್ತೇನೆ. ಯಾವ ಸಂಕೋಚವೂ ಇಲ್ಲ, ತಾಪತ್ರಯವೂ ಇಲ್ಲ.
– ಬಿ.ಕೆ.ಹರಿಪ್ರಸಾದ್ ಮೇಲ್ಮನೆ ವಿಪಕ್ಷ ನಾಯಕ