Advertisement

ವಾರ ಮುಂಚೆಯೇ ದೀಪಾವಳಿ

06:15 AM Oct 08, 2017 | Team Udayavani |

ದ್ವಾರಕಾ: ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ)ಯ ನಿಯಮಗಳ ಸಡಿಲಿಕೆಯನ್ನು ಪ್ರಧಾನಿ ಮೋದಿ ಅವರು ಶ್ಲಾ ಸಿದ್ದು, “ಜಿಎಸ್‌ಟಿಯಲ್ಲಿನ ಬದಲಾವಣೆಗಳಿಂದಾಗಿ ದೇಶಕ್ಕೆ ಅವಧಿಗೆ ಮುನ್ನವೇ ದೀಪಾವಳಿ ಬಂದಂತಾಗಿದೆ’ ಎಂದು ಬಣ್ಣಿಸಿದ್ದಾರೆ.

Advertisement

ಶನಿವಾರದಿಂದ 2 ದಿನಗಳ ಗುಜರಾತ್‌ ಪ್ರವಾಸ ಕೈಗೊಂಡಿರುವ ಪ್ರಧಾನಿ ಮೋದಿ ಅವರು ಬೆಳಗ್ಗೆ ದ್ವಾರಕಾಧೀಶ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ, ವಿವಿಧ ಯೋಜನೆಗಳಿಗೆ ಚಾಲನೆ ನೀಡಿ, 6 ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ. ದ್ವಾರಕಾದಲ್ಲಿ ಮಾತನಾಡಿದ ಅವರು, “ನೀವೆಲ್ಲರೂ ದೀಪಾವಳಿ ಸಂಭ್ರಮಕ್ಕೆ ಸಿದ್ಧರಾಗುತ್ತಿದ್ದೀರಿ. ನಿಮಗೆ ವಿಶೇಷವಾಗಿ ಗುಜರಾತ್‌ನ ಉದ್ಯಮಿಗಳಿಗೆ 10 ದಿನಗಳ ಮುಂಚೆಯೇ ದೀಪಾವಳಿ ಬಂದಿದೆ. ದೇಶದ ವ್ಯಾಪಾರಿ ವರ್ಗವು ತೊಂದರೆ ಅನುಭವಿಸಬಾರದು ಎಂಬ ಕಾರಣಕ್ಕೆ ಜಿಎಸ್‌ಟಿಯಲ್ಲಿ ಕೆಲ ಬದಲಾವಣೆಗಳನ್ನು ತರಲಾಗಿದೆ. ಏಕರೂಪದ ತೆರಿಗೆ ಜಾರಿಯಾಗಿ 3 ತಿಂಗಳ ನಂತರ ಎಲ್ಲ ಅಂಶಗಳ ಅಧ್ಯಯನ ನಡೆಸಲಾಗುವುದು ಎಂದು ನಾವು ಮೊದಲೇ ಹೇಳಿದ್ದೆವು. 

ಇದೀಗ, ಅದರಲ್ಲಿ ಬದಲಾವಣೆ ತರುವ ಮೂಲಕ ನಾಗರಿಕರ ಹಿತಾಸಕ್ತಿಗೆ ಆದ್ಯತೆ ನೀಡಿದ್ದೇವೆ,’ ಎಂದು ಹೇಳಿದ್ದಾರೆ.
ಡಿಜಿಟಲ್‌ ಸಾಕ್ಷರತೆಯತ್ತ ಭಾರತ: ಶನಿವಾರ ಸಂಜೆ ಗಾಂಧಿನಗರದಲ್ಲಿ ಐಐಟಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, “ನೀವು ಐಐಟಿಯನ್‌ಗಳು. ನಾನು ಟಿ-ಯನ್‌(ಚಾಯ್‌ವಾಲ). ಕೆಲವು ವರ್ಷಗಳ ಹಿಂದೆ ಸಿಎಂ ಆದೆ. ಅದಕ್ಕೂ ಮೊದಲು ಶಾಸಕ ಕೂಡ ಆಗಿರಲಿಲ್ಲ. ನಾನು ಏನೇ ಮಾಡುವುದಿದ್ದರೂ, ನನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ಅತ್ಯುತ್ತಮವಾದದ್ದನ್ನೇ ಮಾಡುತ್ತೇನೆ. ಈಗ ದೇಶದ ಪ್ರತಿ ಮೂಲೆಯಲ್ಲೂ, ಎಲ್ಲ ವಯೋಮಾನದವರಲ್ಲೂ ಡಿಜಿಟಲ್‌ ಸಾಕ್ಷರತೆಯನ್ನು ತಲುಪಿಸಲು ಯತ್ನಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ 6 ಕೋಟಿ ಮಂದಿ ಇದರ ತರಬೇತಿ ಪಡೆದು, ಉದ್ಯೋಗ ಸೃಷ್ಟಿಗೆ ಕಾರಣವಾಗಲಿದ್ದಾರೆ,’ ಎಂದಿದ್ದಾರೆ.

ಟೀಕಾಕಾರರಿಗೆ ಟಾಂಗ್‌: ನಾನು ಇಲ್ಲಿ ಹಿಂದೆಯೇ ಐಐಟಿ ನಿರ್ಮಿಸಲು ಮುಂದಾಗಿದ್ದರೆ, ಕೆಲವರು ನನ್ನ ವಿರುದ್ಧ ಕಿಡಿಕಾರುತ್ತಿದ್ದರು. ಈಗ ಬುಲೆಟ್‌ ರೈಲಿಗೆ ಟೀಕಿಸುತ್ತಿರುವಂತೆಯೇ, ಇದನ್ನು ಮಾಡುವ ಬದಲು ಅದನ್ನು ಮಾಡಿ ಎಂದು ಹೇಳುತ್ತಿದ್ದರು. ಆದರೆ, ಈ ಐಐಟಿ ಈಗ ದೇಶದ ಇತರೆ ಸಂಸ್ಥೆಗಳಿಗೆ ಸರಿಸಮಾನವಾಗಿ ಬೆಳೆದು ನಿಂತಿರುವುದು ಹೆಮ್ಮೆಯ ಸಂಗತಿ ಎನ್ನುವ ಮೂಲಕ ಮೋದಿ ಅವರು ಟೀಕಾಕಾರರಿಗೆ ಟಾಂಗ್‌ ನೀಡಿದರು. ಜತೆಗೆ, ಮಾಧವ್‌ಸಿನ್ಹ ಸೋಲಂಕಿ ಅವರು ಸಿಎಂ ಆಗಿದ್ದಾಗ, “ನೀರಿನ ಟ್ಯಾಂಕ್‌ ಉದ್ಘಾಟಿಸಲು ಸಿಎಂ ಬರುತ್ತಿದ್ದಾರೆ’ ಎಂದು ಪತ್ರಿಕೆಗಳ ಮುಖಪುಟದಲ್ಲಿ ಜಾಹೀರಾತು ನೀಡಲಾಗುತ್ತಿತ್ತು. ಇದು ಅವರ ಅಭಿವೃದ್ಧಿಯ ಕಲ್ಪನೆಯ ಸಂಕುಚಿತತೆ ಎಂದೂ ಪ್ರಧಾನಿ ತಿವಿದರು. 

ಜಿಎಸ್‌ಟಿಯಿಂದಾಗಿ ಜನರೊಳಗೆ ಆಕ್ರೋಶದ ಬೆಂಕಿ ಉರಿಯುತ್ತಿತ್ತು. ಜನಶಕ್ತಿಯ ಮುಂದೆ ಅಹಂಕಾರಿ ಆಡಳಿತಗಾರರಿಗೆ ಬೇರೆ ದಾರಿಯಿರ ಲಿಲ್ಲ. ಹಾಗಾಗಿ ಒತ್ತಡಕ್ಕೆ ಮಣಿದು ಕೇಂದ್ರ ಸರ್ಕಾರವು ಜಿಎಸ್‌ಟಿಯಲ್ಲಿ ಬದಲಾವಣೆ ತಂದಿದೆ.
– ಉದ್ಧವ್‌ ಠಾಕ್ರೆ, ಶಿವಸೇನೆ ಮುಖ್ಯಸ್ಥ

Advertisement

ಜಿಎಸ್‌ಟಿ ಮೂಲಕ ದೇಶವನ್ನು ಪ್ರಗತಿಯ ಪಥದತ್ತ ಒಯ್ಯುವಂಥ ಸುವರ್ಣ ಅವಕಾಶ ಸರ್ಕಾರಕ್ಕಿತ್ತು. ಆದರೆ, ಸರ್ಕಾರದ ದೂರದೃಷ್ಟಿಯ ಕೊರತೆಯಿಂದ ಮತ್ತು ಬಾಲಿಶತನದಿಂದಾಗಿ ಇಂಥ ಅವಕಾಶವನ್ನು ಕಳೆದುಕೊಂಡಿತು.
– ರಣದೀಪ್‌ ಸುಜೇìವಾಲ, ಕಾಂಗ್ರೆಸ್‌ ವಕ್ತಾರ

Advertisement

Udayavani is now on Telegram. Click here to join our channel and stay updated with the latest news.

Next