Advertisement

ಕಾರ್ಮಿಕರ ಪಿಂಚಣಿ, ಮದುವೆ, ಹೆರಿಗೆ ಭತ್ಯೆ ವಿತರಿಸಿ

05:57 PM Jul 08, 2022 | Team Udayavani |

ಕೋಲಾರ: ಕಟ್ಟಡ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸದ ಅರ್ಜಿಗಳು, ಕಾರ್ಮಿಕ ಪಿಂಚಣಿ, ಮದುವೆ, ಹೆರಿಗೆ ಭತ್ಯೆಯಂತಹ ಸೌಲಭ್ಯಗಳನ್ನು ಕೂಡಲೇ ವಿತರಿಸಬೇಕು ಎಂದು ಜಿಲ್ಲಾ ಕಟ್ಟಡ ಕಾರ್ಮಿಕರ ಸಮನ್ವಯ ಸಮಿತಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟಿಸಿತು.

Advertisement

ಈ ಸಂದರ್ಭದಲ್ಲಿ ಐಎನ್‌ಟಿಯುಸಿ ರಾಜ್ಯ ಕಾರ್ಯದರ್ಶಿ ಶ್ಯಾಮಣ್ಣರೆಡ್ಡಿ ಮಾತನಾಡಿ, ಕೊರೊನಾ, ಕೊರೊನೋತ್ತರ ಕಾಲಘಟ್ಟದಲ್ಲಿ ಕಾರ್ಮಿಕ ಸಚಿವರು ಮತ್ತು ಮಂಡಳಿ ಕಾರ್ಯದರ್ಶಿ, ಆಯುಕ್ತರು ಸೇರಿ ಮಂಡಳಿ ಸಭೆ ಸೇರಿಸದೆ, ಎಲ್ಲಾ ನಿಯಮಾವಳಿ ಹಾಗೂ ಕೇಂದ್ರ ಕಾರ್ಮಿಕ ಇಲಾಖೆಯ ಆದೇಶವನ್ನು ಉಲ್ಲಂಘಿಸಿ, ರೇಷನ್‌, ಟೂಲ್‌, ಬೂಸ್ಟರ್‌ ಕಿಟ್‌ಗಳನ್ನು, ದುಬಾರಿ ಕಾರುಗಳು, ಆ್ಯಂಬುಲೆನ್ಸ್‌, ಕಾರ್ಮಿಕ ಇಲಾಖೆಗೆ ಸ್ವತಂತ್ರ ತಂತ್ರಾಂಶ, ಕಟ್ಟಡ ಕಾರ್ಮಿಕರಿಗೆ ಪ್ರಯೋಜನವಾಗದ ಸಾಮಗ್ರಿಗಳನ್ನು ಖರೀದಿಸಿ, ನೂರಾರು ಕೋಟಿ ರೂ. ಅವ್ಯವಹಾರ ನಡೆಸಿದ್ದಾರೆ ಎಂದು ಆರೋಪಿಸಿದರು.

ಇಲಾಖೆಯಲ್ಲಿ ಭ್ರಷ್ಟಾಚಾರ ತಡೆಯಿರಿ:ಸಂಘಟನೆಯ ಜಿಲ್ಲಾ ಅಧ್ಯಕ್ಷ ಹೊನ್ನೇನಹಳ್ಳಿ ಯಲ್ಲಪ್ಪ ಮಾತನಾಡಿ, ಕಟ್ಟಡ ನಿರ್ಮಾಣದ ಕಾರ್ಮಿಕರ ಹಣದಲ್ಲಿ ಅವ್ಯವಹಾರಕ್ಕೆ ಕಾರಣವಾಗಿರುವ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್‌ ವಜಾಗೊಳಿಸಬೇಕು, ಕಾರ್ಮಿಕ ಆಯುಕ್ತ ಅಕ್ರಂ ಪಾಷಾ ವರ್ಗಾಯಿಸಬೇಕು. ಕಟ್ಟಡ
ಕಾರ್ಮಿಕರಿಗೆ ಪಿಂಚಣಿ, ನಿವೇಶನ, ವಸತಿ ಬಡ್ಡಿ ರಹಿತ ಬ್ಯಾಂಕ್‌ ಸಾಲ ನೀಡುವ ಮೂಲಕ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಖರೀದಿ ಹೆಸರಿನಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ತಡೆಯಬೇಕು ಎಂದು ಹೇಳಿದರು.

ಇದುವರೆಗೆ ನಡೆದ ಕಿಟ್‌ ಖರೀದಿ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು. ಕಾರ್ಮಿಕರು ಮನೆ ನಿರ್ಮಿಸುವುದಕ್ಕೆ 5 ಲಕ್ಷ ರೂ. ಸಹಾಯ ಧನ ಘೋಷಿಸಬೇಕು. ಎಲ್ಲ ಕಾರ್ಮಿಕರಿಗೆ ಉಚಿತ ವೈದ್ಯಕೀಯ ಸೇವೆ ಒದಗಿಸಬೇಕು. ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಭವಿಷ್ಯ ನಿಧಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು. ಎಐಸಿಸಿಟಿಯು ರಾಜ್ಯ ಮುಖಂಡ ಅಪ್ಪಣ್ಣ, ಮುಖಂಡರಾದ ಕೃಷ್ಣಪ್ಪ, ಚಲಪತಿ, ಈಶ್ವರಪ್ಪ, ರಾಜಪ್ಪ, ಚಂದ್ರಪ್ಪ, ನಾರಾಯಣಮ್ಮ, ಸರಿತಮ್ಮ,
ಕಮಲಮ್ಮ, ಮುಂತಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next