ಬೆಂಗಳೂರು: ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಬಿಟಿಎಂ ಲೇಔಟ್ ಶಾಸಕ ರಾಮಲಿಂಗಾರೆಡ್ಡಿ ಹಾಗೂ ಮಹಾಲಕ್ಷ್ಮೀ ಲೇಔಟ್ ಶಾಸಕ ಗೋಪಾಲಯ್ಯ ವಿಚಾರಣೆ ಹಾಜರಾಗಲು ಸ್ಪೀಕರ್ ರಮೇಶ್‌ಕುಮಾರ್ ಬಳಿ ಸಮಯ ಕೋರಿದ್ದಾರೆ.
ಜುಲೈ 6 ರಂದು ರಾಜೀನಾಮೆ ಸಲ್ಲಿಸಿರುವ ಹನ್ನೆರಡು ಜನ ಶಾಸಕರಲ್ಲಿ ಕ್ರಮಬದ್ಧವಾಗಿ ರಾಜೀನಾಮೆ ಸಲ್ಲಿಸಿದ್ದ ಐವರು ಶಾಸಕರಲ್ಲಿ ಜುಲೈ 12 ರಂದು ಆನಂದ್‌ಸಿಂಗ್, ಪ್ರತಾಪ್‌ಗೌಡ ಹಾಗೂ ನಾರಾಯಣಸ್ವಾಮಿ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸ್ಪೀಕರ್ ರಮೇಶ್ ಕುಮಾರ್ ನೊಟೀಸ್ ನೀಡಿದ್ದರು. ಆದರೆ, ಮೂವರೂ ಶಾಸಕರು ವಿಚಾರಣೆಗೆ ಹಾಜರಾಗದೇ ಸಮಯವನ್ನೂ ಕೇಳಿರಲಿಲ್ಲ.
ಆದರೆ, ಜುಲೈ 15 ರಂದು ಸೋಮವಾರ ವಿಚಾರಣೆಗೆ ಹಾಜರಾಗುವಂತೆ ರಾಮಲಿಂಗಾರೆಡ್ಡಿ ಹಾಗೂ ಗೋಪಾಲಯ್ಯ ಅವರಿಗೆ ಸ್ಪೀಕರ್ ರಮೇಶ್ ಕುಮಾರ್ ಸಮಯ ನೀಡಿದ್ದರು. ಅವರು ಸ್ಪೀಕರ್ ಕಚೇರಿಗೆ ಹಾಜರಾಗದೇ ಮತ್ತೂಂದು ದಿನ ಸಮಯ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.
ರಾಮಲಿಂಗಾರೆಡ್ಡಿ ಸೋಮವಾರ ಸ್ಪೀಕರ್‌ರನ್ನು ಭೇಟಿ ಮಾಡುವುದಾಗಿ ಹೇಳಿದ್ದರು. ಮಧ್ಯಾಹ್ನ ನಾಲ್ಕು ಮೂವತ್ತಕ್ಕೆ ಹಾಜರಾಗುವಂತೆ ಸ್ಪೀಕರ್ ರಮೇಶ್‌ಕುಮಾರ್ ಸೂಚಿಸಿದ್ದರು. ಆದರೆ, ರಾಮಲಿಂಗಾ ರೆಡ್ಡಿಗೆ ಕಣ್ಣಿನ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ತೆರಳಿದ್ದರಿಂದ ಅರ್ಧಗಂಟೆ ತಡವಾಗಿದ್ದರಿಂದ ಸ್ಪೀಕರ್ ವಿಚಾರಣೆಗೆ ಹಾಜರಾಗಲು ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದೆ.
ಆದರೆ, ಸ್ಪೀಕರ್ ಎದುರು ಹಾಜರಾಗಲು ಮಂಗಳವಾರ ಅಥವಾ ಬುಧವಾರ ಸಮಯ ನೀಡುವಂತೆ ಮನವಿ ಮಾಡಿಕೊಂಡಿದ್ದು, ಸ್ಪೀಕರ್ ಕೂಡ ಎರಡು ದಿನದಲ್ಲಿ ಯಾವಾಗಾದರೂ ಬಂದು ಹಾಜರಾಗುವಂತೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಮಹಾಲಕ್ಷ್ಮೀ ಲೇಔಟ್ ಶಾಸಕ ಗೋಪಾಲಯ್ಯ ರಾಜೀನಾಮೆ ಸಲ್ಲಿಸಿ ಮುಂಬೈಗೆ ತೆರಳಿರುವುದರಿಂದ ಸೋಮವಾರದ ವಿಚಾರಣೆಗೆ ಹಾಜರಾಗಿಲ್ಲ. ಆದರೆ, ಅನ್ಯ ಕಾರ್ಯದ ನಿಮಿತ್ತ ವಿಚಾರಣೆಗೆ ಹಾಜರಾಗಲು ಸಾಧ್ಯವಾಗದ ಕಾರಣ ಬೇರೊಂದು ದಿನ ಸಮಯ ನೀಡುವಂತೆ ಕೋರಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.