Advertisement

ಬಿಜೆಪಿ ಸರಕಾರ ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಹೇರಲಿ: ಹರಿಪ್ರಸಾದ್‌ ಆಗ್ರಹ

12:40 AM Aug 01, 2022 | Team Udayavani |

ಮಂಗಳೂರು: ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದ್ದು, ರಾಜ್ಯಪಾಲರು ಕೂಡಲೇ ಬಿಜೆಪಿ ಸರಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕು ಎಂದು ವಿಧಾನಪರಿಷತ್‌ನ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್‌ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.

Advertisement

ಪ್ರವೀಣ್‌ ಹತ್ಯೆ ಪ್ರಕರಣದ ತನಿಖೆಯನ್ನು ಎನ್‌ಐಎಗೆ ಹಸ್ತಾಂತರಿಸುವ ಮೂಲಕ ಮುಖ್ಯಮಂತ್ರಿಯವರು ಆಡಳಿತ ವೈಫ‌ಲ್ಯವನ್ನು ಒಪ್ಪಿಕೊಂಡಂತಾಗಿದೆ. ರಾಜ್ಯ ಪೊಲೀಸರು ಕೊಲೆ ಪ್ರಕರಣವನ್ನು ಭೇದಿಸಲು ಸಮರ್ಥರಿರುವಾಗ ಪ್ರಕರಣದ ತನಿಖೆ ಎನ್‌ಐಎಗೆ ವಹಿಸುವ ಅಗತ್ಯವಿರಲಿಲ್ಲ. ಇದು ಕೇವಲ ಕಣ್ಣೊರೆಸುವ ತಂತ್ರ. ಉತ್ತರ ಕನ್ನಡದಲ್ಲಿ ಪರೇಶ ಮೇಸ್ತ ಕೊಲೆ ಪ್ರಕರಣದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಿ ವರ್ಷಗಳೇ ಕಳೆದರೂ ಯಾರನ್ನೂ ಇದುವರೆಗೆ ಬಂಧಿಸಿಲ್ಲ ಎಂದರು.

ಹಿಂದೆ ಕಾಂಗ್ರೆಸ್‌ ಆಡಳಿತದಲ್ಲಿದ್ದಾಗ ನಡೆದ ಹತ್ಯೆಗಳಲ್ಲಿ ಕಾಂಗ್ರೆಸ್‌ ಮೇಲೆ ಗೂಬೆ ಕೂರಿಸಿ ಅಧಿಕಾರಕ್ಕೆ ಬಂದ ಬಿಜೆಪಿಗೆ ತನ್ನ ಪಕ್ಷದ ಕಾರ್ಯಕರ್ತರನ್ನು ರಕ್ಷಣೆ ಮಾಡಲು ಆಗುತ್ತಿಲ್ಲ. ಅದರ ಪರಿಣಾಮ ಇದೀಗ ಗೃಹಸಚಿವರು, ಸಂಸದರು, ಸಚಿವರು, ಶಾಸಕರು ಎಲ್ಲರೂ ಪ್ರತಿಭಟನೆ ಬಿಸಿ ಎದುರಿಸಬೇಕಾಗಿ ಬಂದಿದೆ ಎಂದವರು ಟೀಕಿಸಿದರು.

ತಾರತಮ್ಯ ನೀತಿ
ಹತ್ಯೆಗೀಡಾದ ಮಸೂದ್‌ ಮತ್ತು ಫಾಝಿಲ್‌ ಕುಟುಂಬಕ್ಕೆ ಯಾವುದೇ ಪರಿಹಾರ ನೀಡದೆ ಮುಖ್ಯಮಂತ್ರಿಯವರು ತಾರತಮ್ಯ ಎಸಗಿದ್ದಾರೆ. ಈ ರೀತಿಯ ತಾರತಮ್ಯ ಯಾಕೆ ಎಂದು ಪ್ರಶ್ನಿಸಿದ ಅವರು ಸಿಎಂ ಆಗಿರುವುದು ರಾಜ್ಯಕ್ಕೋ ಅಥವಾ ಬಿಜೆಪಿಗೋ ಎಂದು ಪ್ರಶ್ನಿಸುವಂತೆ ಆಗಿದೆ ಎಂದರು.

ನಾವು ಪ್ರವೀಣ್‌ ಮನೆಗೆ ಸಾಂತ್ವನ ಹೇಳಲು ಹೋದಾಗ ಬಿಜೆಪಿಯವರು ಬಾಡಿಗೆ ಜನರನ್ನು ಕಳುಹಿಸಿ ಧಿಕ್ಕಾರ ಕೂಗಿಸಿದ್ದಾರೆ ಎಂದು ಆರೋಪಿಸಿದರು.

Advertisement

ಡಿಸಿಸಿ ಅಧ್ಯಕ್ಷ ಹರೀಶ್‌ ಕುಮಾರ್‌, ಮಾಜಿ ಸಚಿವರಾದ ಬಿ. ರಮಾನಾಥ ರೈ, ಅಭಯಚಂದ್ರ ಜೈನ್‌, ವಿಧಾನ ಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಶಾಸಕ ಮೊದಿನ್‌ ಬಾವಾ, ಎಐಸಿಸಿ ಸದಸ್ಯೆ ಕವಿತಾ ಸನಿಲ್‌, ಕಾರ್ಪೊರೇಟರ್‌ಗಳಾದ ಶಶಿಧರ್‌ ಹೆಗ್ಡೆ, ನವೀನ್‌ ಡಿ’ಸೋಜಾ, ಜಿಲ್ಲಾ ಅಲ್ಪಸಂಖ್ಯಾಕ ಘಟಕದ ಅಧ್ಯಕ್ಷ ಸಾಹುಲ್‌ ಹಮೀದ್‌, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್‌ ಶಿವರಾಂ, ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಲುಕಾ¾ನ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next