ಹುಬ್ಬಳ್ಳಿ: ಬೆಳಗಾವಿಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಸರ್ಕಾರ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಿದ್ದು, ಎಂಇಎಸ್ ಬ್ಯಾನ್ ಮಾಡುವ ಕುರಿತು ಚರ್ಚೆ ನಡೆಯುತ್ತಿದೆ ಎಂದು ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್ ಭಾನುವಾರ ಹೇಳಿಕೆ ನೀಡಿದ್ದಾರೆ.
ನಗರದ ಸಿದ್ದಾರೂಢ ಮಠದ ಉಭಯ ಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಿದರು. ನಂತರ ಮಠದ ಗೋ ಶಾಲೆಗೆ ಭೇಟಿ ನೀಡಿ ಪೂಜೆ ನಡೆಸಿ ನಂತರ ಮಾತನಾಡಿದ ಅವರು, ”ಕರ್ನಾಟಕ ನಮ್ಮ ತಾಯಿ, ತಾಯಿಯ ರಕ್ಷಣೆ ಎಲ್ಲ ಮಕ್ಕಳ ಜವಾಬ್ದಾರಿ, ಗಡಿನಾಡಿನಲ್ಲಿ ಕನ್ನಡ ಉಳಿಸುವ ಕೆಲಸ ಮಾಡಲಾಗುತ್ತಿದೆ. ಆದರೆ ಎಂ.ಇ.ಎಸ್ ಪುಂಡಾಟ ಹೆಚ್ಚಾಗುತ್ತಿದೆ. ಈಗಾಗಲೇ ಸದನದಲ್ಲಿ ಈ ವಿಷಯ ಚರ್ಚೆಯಾಗಿದೆ. ಅವರ ಆಟಕ್ಕೆ ಸರ್ಕಾರ ಬ್ರೇಕ್ ಹಾಕಲಿದೆ. ಈಗಾಗಲೇ ಎಂ.ಇ.ಎಸ್ ಬ್ಯಾನ್ ಮಾಡುವ ವಿಚಾರ ಚರ್ಚೆ ನಡೆಯುತ್ತಿದೆ” ಎಂದರು.
ಇದನ್ನೂ ಓದಿ : ಬೆಳಗಾವಿಯಲ್ಲಿ ಸಿಡಿದೆದ್ದ ಕನ್ನಡಿಗರು: ಪಾದಯಾತ್ರೆಗೆ ತಡೆ, ಪ್ರತಿಭಟನಾನಿರತರು ವಶಕ್ಕೆ
ಗೋಹತ್ಯೆ ನಿಷೇಧ ಕಾಯ್ದೆಯನ್ನು ಇನ್ನಷ್ಟು ಬಿಗಿ
”ರಾಜ್ಯದಲ್ಲಿ ಪ್ರತಿ ಜಿಲ್ಲೆಯಲ್ಲಿಯೂ ಗೋಮಾಳ ಜಾಗದಲ್ಲಿ ಗೋಶಾಲೆಗಳನ್ನು ತೆರೆಯಲು ಸೂಚಿಸಲಾಗಿದೆ. ಈ ನಿಟ್ಟಿನಲ್ಲಿ ಗೋಮಾಳ ಜಾಗಗಳನ್ನೂ ಸಹ ನಿಗಧಿಪಡಿಸಲಾಗಿದೆ. ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಾದ ನಂತರ ಸಾವಿರಾರು ಗೋವುಗಳನ್ನು ರಕ್ಷಣೆ ಮಾಡಲಾಗಿದೆ. ಕಸಾಯಿಖಾನೆಯಲ್ಲಿ ಗೋವುಗಳ ಹತ್ಯೆ ವಿಚಾರದಲ್ಲಿ ಅನೇಕ ಪಿಐಎಲ್ ಹೋಗಿದ್ದಾರೆ. ಹಾಗಾಗಿ ನಮ್ಮ ಪರವಾಗಿ ತೀರ್ಪು ಬರುವ ನಿರೀಕ್ಷೆ ಇದೆ. ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯನ್ನು ಇನ್ನಷ್ಟು ಬಿಗಿಗೊಳಿಸಲಾಗುವುದು” ಎಂದರು.