ಹೊಸದಿಲ್ಲಿ: ಮಾರಾಟಕ್ಕೆ ಸಿದ್ಧವಾಗಿರುವ ಸರಕಾರಿ ಸ್ವಾಮ್ಯದ ಏರ್ ಇಂಡಿಯಾ ವಿಮಾನ ಹಿರಿಯ ನಾಗರಿಕರಿಗೆ ವಿಶೇಷ ಕೊಡುಗೆಗಳನ್ನು ನೀಡಲು ಮುಂದಾಗಿದೆ. ಇದರನ್ವಯ ಟಿಕೆಟ್ ನಲ್ಲಿ ಶೇ. 50ರ ರಿಯಾಯಿತಿ ಘೋಷಿಸಿದೆ.
60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಈ ರಿಯಾಯಿತಿ ಸೌಲಭ್ಯ ದೊರೆಯಲಿದೆ. ಈ ಯೋಜನೆಯ ಕುರಿತು ವಿಮಾನಯಾನ ಸಚಿವಾಲಯ ಬುಧವಾರ ಮಾಹಿತಿ ನೀಡಿದ್ದು, ಇದಕ್ಕಾಗಿ ಕೆಲವು ಷರತ್ತುಗಳನ್ನು ಸಹ ಇರಿಸಲಾಗಿದೆ. ಉದಾಹರಣೆಗೆ ಪ್ರಯಾಣದ ದಿನಕ್ಕೆ ಕನಿಷ್ಠ 7 ದಿನಗಳ ಮೊದಲು ಟಿಕೆಟ್ ಬುಕಿಂಗ್ ಮಾಡಿದರೆ ಮಾತ್ರ ಈ ಯೋಜನೆಯ ಪ್ರಯೋಜ ಪಡೆಯಬಹುದಾಗಿದೆ. ಇಂದು ಟಿಕೆಟ್ ಬುಕ್‌ಮಾಡಿ ನಾಳೆ ಅಥವಾ ನಾಳಿದ್ದು ಸಂಚರಿಸಿದರೆ ಇದರ ಸೌಲಭ್ಯ ಪಡೆಯಬಹುದಾಗಿದೆ.
ಈ ವಿನಾಯಿತಿಯ ಯೋಜನೆಯು ದೇಶೀಯ ವಿಮಾನಗಳಿಗಾಗಿ ಮಾತ್ರ ನೀಡಲಾಗಿದೆ. ಟಿಕೇಟ್ ಬುಕ್‌ಮಾಡುವಾಗ ಮತ್ತು ಚೆಕ್-ಇನ್ ಸಮಯದಲ್ಲಿ ID ತೋರಿಸಬೇಕು. ಈ ಸಂದರ್ಭ ನೀವು ಅದನ್ನು ತೋರಿಸಲು ವಿಫಲವಾದರೆ ಟಿಕೆಟ್ ಮೂಲ ಶುಲ್ಕವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದಲ್ಲದೇ ಮರುಪಾವತಿ ಇರುವುದಿಲ್ಲ. ಈ ಯೋಜನೆಯ ಸಂಪೂರ್ಣ ವಿವರಗಳನ್ನು ಏರ್ ಇಂಡಿಯಾದ ವೆಬ್‌ಸೈಟ್‌ನಲ್ಲಿ ನೀಡಲಾಗಿದೆ.
ಭಾರತೀಯ ಪ್ರಜೆಯಾಗಿದ್ದು, 60 ವರ್ಷಗಳ ಮೇಲೆ ಇರಬೇಕು. ಹುಟ್ಟಿದ ದಿನಾಂಕ ಸಹಿತ ಮಾನ್ಯವಾದ ಫೋಟೋ ಐಡಿ ಹೊಂದಿರಬೇಕು. ಎಕಾನಮಿ ಕ್ಯಾಬಿನ್ ಬುಕಿಂಗ್ ವಿಭಾಗಕ್ಕೆ ಮೂಲ ಶುಲ್ಕದ ಶೇ.50 ರಷ್ಟು ಪಾವತಿಸಬೇಕಾಗುತ್ತದೆ. ಈ ಕೊಡುಗೆ ಭಾರತದ ಯಾವುದೇ ವಲಯಕ್ಕೆ ಪ್ರಯಾಣಿಸಲು ಮಾನ್ಯವಾಗಿರುತ್ತದೆ. ಟಿಕೆಟ್ ಮುದ್ರಣಗೊಂಡ ದಿನಾಂಕದಿಂದ ಆರಂಭಗೊಂಡಂತೆ ಒಂದು ವರ್ಷದವರೆಗೆ ಈ ಕೊಡುಗೆ ಅನ್ವಯವಾಗುತ್ತದೆ.
ಏರ್ ಇಂಡಿಯಾವು 60 ಸಾವಿರ ಕೋಟಿಗಿಂತ ಹೆಚ್ಚಿನ ಸಾಲವನ್ನು ಹೊಂದಿದೆ. ಹೀಗಾಗಿ ಸರ್ಕಾರ ಅದನ್ನು ಮಾರಾಟ ಮಾಡಲು ಬಯಸಿದೆ. ಇದಕ್ಕಾಗಿ ಬಿಡ್‌ಗಳನ್ನು ಕೋರಲಾಗಿದೆ. ಮುಂದಿನ ವರ್ಷ ಅದರ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡು ಬಿಡುಗಡೆಯಾಗಲಿದೆ.