“ಹಾಕಿರೋ ದುಡ್ಡು ಬಂದರೆ ಮತ್ತೆ ಸಿನಿಮಾ ಮಾಡ್ತೀನಿ …’ ಹಾಗಂತ ನಿರ್ಮಾಪಕ ಅಶ್ವಿನ್ ಪರೈರಾ ಘೋಷಿಸುತ್ತಿದ್ದಂತೆ ಜನ ಚಪ್ಪಾಳೆ ಹೊಡೆದರು. ಅಶ್ವಿನ್ ಖುಷಿಯಾದರು. ಮಾತು ಮುಂದುವರೆಯಿತು. “ನಾನು ಶಾಲೆಯಲ್ಲಿ ಓದೋವಾಗ 35 ಅಂಕ ಬಂದರೆ ಅದೇ ದೊಡ್ಡ ವಿಷಯ. ಯಾವತ್ತೂ ರ್‍ಯಾಂಕ್ ಯೋಚನೆ ಮಾಡಿದವರೇ ಅಲ್ಲ. 35 ಬಂದರೆ ಸಾಕಾಗಿತ್ತು. ಈಗ ಯಾರು ನೋಡಿದರೂ 90 ಮಾರ್ಕ್ಸ್ ಅಂತಾರೆ.
ಹೆಚ್ಚು ಅಂಕವನ್ನೇನೋ ಪಡೀತಿದ್ದಾರೆ, ಅದರ ಜೊತೆಗೆ ಸಂಬಂಧ ಮರೀತಿದ್ದಾರೆ. ಅದನ್ನ ಈ ಚಿತ್ರದಲ್ಲಿ ತೋರಿಸುತ್ತಿದ್ದೀವಿ. ಈಗ ನೋಡಿ. ನಮ್ಮ ಆಡಿಯೋ ಫಂಕ್ಷನ್ ಆಗ್ತಿದೆ. ಯಾರಾದರೂ ಈ ಸಮಾರಂಭದ ಫೋಟೊ ಹಾಕ್ತಾರೆ. ಅದನ್ನ ನೋಡಿ ಎಷ್ಟೋ ಜನ ಫೇಸ್‌ಬುಕ್‌ನಲ್ಲಿ ಲೈಕ್ ಒತ್ತುತ್ತಾರೆ. ಮಾತನಾಡದಷ್ಟು ಬಿಝಿ ಆಗಿºಟ್ಟಿದ್ದಾರೆ. ಈ ವಿಷಯ ಇಟ್ಟುಕೊಂಡೇ ಈ ಸಿನಿಮಾ ಮಾಡಿದ್ದೇವೆ’ ಎಂದರು ಅಶ್ವಿನ್.
ಕಳೆದ ವಾರವಷ್ಟೇ ದುಬೈನಲ್ಲಿ “ಅಸತೋಮ ಸದ್ಗಮಯ’ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಬಂದ ಅಶ್ವಿನ್, ಈಗ ಬೆಂಗಳೂರಿನಲ್ಲಿ ಹಾಡುಗಳನ್ನು ಬಿಡುಗಡೆ ಮಾಡಿಸಿದ್ದಾರೆ. ಹಾಡುಗಳನ್ನು ಬಿಡುಗಡೆ ಮಾಡುವುದಕ್ಕೆ ಚಂದನ್ ಶೆಟ್ಟಿ ಬಂದಿದ್ದರು. ನಿರ್ಮಾಪಕ ಮನು ಗೌಡ ಇದ್ದರು. ಇಂಡಿಯನ್ ಎಕನಾಮಿಕ್ ಟ್ರೇಡ್ ಆರ್ಗನೈಸೇಷನ್‌ನ ಅಧ್ಯಕ್ಷರಾದ ಆಸಿಫ್ ಇಕ್ಬಾಲ್ ಬಂದಿದ್ದರು ಅವರೆಲ್ಲರ ಜೊತೆಗೆ ಚಿತ್ರತಂಡದವರು ಇದ್ದರು. ನಾಯಕ ಕಿರಣ್ ರಾಜ್ ಒಬ್ಬರನ್ನು ಬಿಟ್ಟು.
ಮೊದಲು ಟ್ರೇಲರ್ ತೋರಿಸಿ ಮಾತು ಶುರು ಮಾಡಲಾಯಿತು. ಈ ಚಿತ್ರವನ್ನು ರಾಜೇಶ್ ವೇಣೂರು ಬರೆದು ನಿರ್ದೇಶಿಸಿದ್ದಾರೆ. ಅವರು ಹೇಳುವಂತೆ ಮಕ್ಕಳು ಮತ್ತು ಪೋಷಕರು ನೋಡಬೇಕಾದ ಚಿತ್ರವಂತೆ. “ಟ್ರೇಲರ್ ನೋಡಿದರೆ, ಇದು ಯಾವ ಜಾನರ್‌ಗೆ ಸೇರಿದ ಚಿತ್ರ ಎಂಬ ಪ್ರಶ್ನೆ ಬರುವುದು ಸಹಜ. ಇದು ಯಾವ ಜಾನರ್ ಎನ್ನುವುದಕ್ಕಿಂತ ಮಕ್ಕಳು ಮತ್ತು ಪೋಷಕರು ನೋಡಲೇಬೇಕಾದ ಸಿನಿಮಾ ಎಂದರೆ ತಪ್ಪಲ್ಲ.
ಇವತ್ತಿನ ತಲೆಮಾರಿನವರಿಗೆ ಡಿಗ್ರಿ ಜಾಸ್ತಿ, ಸಾಮಾನ್ಯ ಜ್ಞಾನ ಕಡಿಮೆ. ಈ ವಿಷಯವನ್ನಿಟ್ಟುಕೊಂಡು ಸಿನಿಮಾ ಮಾಡಿದ್ದೇವೆ. ಸಂಗೀತ ನಿರ್ದೇಶಕ ವಹಾಬ್ ಸಲೀಮ್ ಇವತ್ತು ಬಂದಿಲ್ಲ. ಈ ಚಿತ್ರಕ್ಕಾಗಿ ವೆರೈಟಿಯ ಹಾಡುಗಳನ್ನು ಕೊಟ್ಟಿದದ್ದಾರೆ. ಈಗಾಗಲೇ ಚಿತ್ರದ ಸೆನ್ಸಾರ್ ಆಗಿದೆ. ಈ ತಿಂಗಳ ಕೊನೆಗೆ ಚಿತ್ರ ಬಿಡುಗಡೆಯಾಗಲಿದೆ’ ಎಂದರು. ಚಂದನ್ ಶೆಟ್ಟಿಗೆ ಈ ಸಮಾರಂಭಕ್ಕೆ ಬರುವುದಕ್ಕೆ ಮುಖ್ಯ ಕಾರಣ ಲಾಸ್ಯ ನಾಗರಾಜ್.
ಚಂದನ್ ಹಾಗೂ ಲಾಸ್ಯ ಇಬ್ಬರೂ ಕೆಲವು ದಿನಗಳ ಕಾಲ “ಬಿಗ್ ಬಾಸ್’ ಮನೆಯಲ್ಲಿದ್ದರು. ಅಲ್ಲಿ ಅವರಿಬ್ಬರ ಪರಿಚಯವಾಯಿತಂತೆ. ಅದೇ ಸ್ನೇಹದ ಮೇಲೆ ಅವರು ಅಂದಿನ ಸಮಾರಂಭಕ್ಕೆ ಬಂದಿದ್ದರು. “ಅಂದು ಲಾಸ್ಯ ನನಗೆ ತುಂಬಾನೇ ಸಪೋರ್ಟ್ ಮಾಡಿದ್ದರು. ಇವತ್ತು ಅವಳ ಚಿತ್ರಕ್ಕೆ ಸಪೋರ್ಟ್ ಮಾಡೋಕೆ ಬಂದಿದ್ದೀನಿ’ ಎಂದು ಚಂದನ್ ಹೇಳುವುದರ ಜೊತೆಗೆ, ಚಿತ್ರಕ್ಕೆ ಮತ್ತು ಚಿತ್ರತಂಡಕ್ಕೆ ಶುಭ ಹಾರೈಸಿದರು.
ಅಂದು ರಾಧಿಕಾ ಚೇತನ್, ಲಾಸ್ಯ ನಾಗರಾಜ್, ಯಮುನಾ ಶ್ರೀನಿಧಿ ಮುಂತಾದವರು ವೇದಿಕೆಯ ಮೇಲಿದ್ದು, ಚಿತ್ರದ ಅನುಭವಗಳನ್ನು ಹಂಚಿಕೊಂಡರು.