Advertisement

Train: ಉಡುಪಿ-ಕುಂದಾಪುರದಿಂದ ತಿರುಪತಿಗೆ ನೇರ ರೈಲು

12:22 AM Oct 09, 2024 | Team Udayavani |

ಕುಂದಾಪುರ: ಪ್ರಸಿದ್ಧ ಪುಣ್ಯ ಕ್ಷೇತ್ರವಾದ ತಿರುಪತಿಗೆ ಉಡುಪಿ, ಕುಂದಾಪುರದಿಂದ ನೇರ ರೈಲು ಸಂಪರ್ಕ ಕಲ್ಪಿಸಬೇಕು ಅನ್ನುವ ಈ ಭಾಗದ ಜನರ ಬಹುದಿನಗಳ ಬೇಡಿಕೆ ಕೊನೆಗೂ ಈಡೇರಿದೆ.

Advertisement

ಸಂಸದ ಕೋಟ ಶ್ರೀನಿವಾಸ ಪೂಜಾರಿಯವರ ಮನವಿಗೆ ಸ್ಪಂದಿಸಿರುವ ಕೇಂದ್ರ ರೈಲ್ವೇ ಸಚಿವಾಲಯವು ಮಂಗಳೂರುವರೆಗೆ ಬರುತ್ತಿದ್ದ ರೈಲು (12789/12790) ಅನ್ನು ಮುರ್ಡೇಶ್ವರದವರೆಗೆ ವಿಸ್ತರಿಸಲು ಒಪ್ಪಿಗೆ ನೀಡಿ ಆದೇಶಿಸಿದೆ. ಈ ರೈಲು ಸೇವೆಯೊಂದಿಗೆ ಹೈದರಾಬಾದ್‌ ನಗರಿಯೊಂದಿಗೂ ಸಂಪರ್ಕ ಸಾಧ್ಯವಾಗಲಿದೆ.

ಹೈದರಾಬಾದಿನ ಕಾಚಿಗುಡದಿಂದ ಹೊರಟು ತಿರುಪತಿಯ ರೇಣಿಗುಂಟ ನಿಲ್ದಾಣದ ಮೂಲಕ ಮಂಗಳೂರಿಗೆ ಬರುತ್ತಿದ್ದ ಕಾಚಿಗುಡ – ಮಂಗಳೂರು ನಡುವೆ ವಾರಕ್ಕೆರಡು ದಿನ ಸಂಚರಿಸುತ್ತಿದ್ದ ರೈಲನ್ನು ಉಡುಪಿ, ಕುಂದಾಪುರದ ಮೂಲಕ ಮುರ್ಡೇಶ್ವರದವರೆಗೆ ವಿಸ್ತರಣೆ ಮಾಡಬೇಕೆಂಬ ಸಂಸದರ ಮನವಿಗೆ ಭಾರತೀಯ ರೈಲ್ವೇ ಸ್ಪಂದಿಸಿದೆ.

ರೈಲು ವೇಳಾಪಟ್ಟಿ
ಈ ರೈಲು ಬುಧವಾರ ಮತ್ತು ಶನಿವಾರ ಮುರ್ಡೇಶ್ವರದಿಂದ ಮಧ್ಯಾಹ್ನ 3.20ಕ್ಕೆ ಹೊರಡಲಿದ್ದು, ಕುಂದಾಪುರಕ್ಕೆ ಸಂಜೆ 4.40, ಮಂಗಳೂರು ರಾತ್ರಿ 8, ತಿರುಪತಿ ಬಳಿಯ ರೇಣಿಗುಂಟಕ್ಕೆ ಮರುದಿನ ಬೆಳಗ್ಗೆ 11.45 ಹಾಗೂ ಹೈದರಾಬಾದಿನ ಕಾಚಿಗುಡ ನಿಲ್ದಾಣಕ್ಕೆ ಸಂಜೆ 6ಕ್ಕೆ ತಲುಪಲಿದೆ. ಬಳಿಕ ಮರಳಿ ಕಾಚಿಗುಡದಿಂದ ಬೆಳಗ್ಗೆ 6ಕ್ಕೆ ಹೊರಡಲಿದ್ದು, ರೇಣಿಗುಂಟಕ್ಕೆ ಸಂಜೆ 5, ಮಂಗಳೂರಿಗೆ ಮರುದಿನ ಬೆಳಗ್ಗೆ 9.30, ಕುಂದಾಪುರಕ್ಕೆ 11.59 ಹಾಗೂ ಮುರ್ಡೇಶ್ವರಕ್ಕೆ ಮಧ್ಯಾಹ್ನ 2 ಗಂಟೆಗೆ ತಲುಪಲಿದೆ.

ಮುರ್ಡೇಶ್ವರದ ಮೂಲಕ ಬೈಂದೂರು,ಕುಂದಾ ಪುರ, ಉಡುಪಿ, ನಗರಗಳು ಕೊಯಮತ್ತೂರು, ತಿರುಪತಿ, ಮಂತ್ರಾಲಯ ಸಮೀಪದ ದೊನೆ ಜಂಕ್ಷನ್‌ ಸೇರಿದಂತೆ ಹೈದರಾಬಾದ್‌ವರೆಗೆ ರೈಲು ಸಂಪರ್ಕ ಪಡೆಯಲಿದೆ.

Advertisement

ಅಸಂಖ್ಯ ಭಕ್ತರು
ಕರಾವಳಿಯಿಂದ ತಿರುಪತಿ ದೇವಸ್ಥಾನಕ್ಕೆ ತೆರಳುವ ಅಸಂಖ್ಯಾತ ಭಕ್ತವರ್ಗವಿದೆ. ಈವರೆಗೆ ಮಂಗಳೂರು ವರೆಗೆ ಮಾತ್ರ ರೈಲು ಸಂಪರ್ಕವಿದ್ದ ಕಾರಣ ಕರಾವಳಿಯ ಜನರಿಗೆ ಇದರ ಪ್ರಯೋಜನ ಸಿಕ್ಕಿರಲಿಲ್ಲ.


ಪುಣ್ಯ ಕ್ಷೇತ್ರಗಳನ್ನು ಬೆಸೆಯುವ ರೈಲು
ದಕ್ಷಿಣದ ಎಲ್ಲ ರಾಜ್ಯಗಳ ಜತೆ ಕೊಂಕಣ ರೈಲ್ವೇ ಮೂಲಕ ಈ ರೈಲು ಸಂಪರ್ಕ ಲಭಿಸಿದೆ. ಪುಣ್ಯಕ್ಷೇತ್ರ ತಿರುಪತಿಯನ್ನು ಉಡುಪಿ ಶ್ರೀ ಕೃಷ್ಣಮಠ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದ ಮೂಲಕ ಮುರ್ಡೇಶ್ವರದವರೆಗಿನ ವಿವಿಧ ಪುಣ್ಯಸ್ಥಳಗಳಿಗೆ ಈ ರೈಲು ಸಂಪರ್ಕ ಬೆಸೆಯುತ್ತಿದೆ. ಅತ್ಯಂತ ಕ್ಷಿಪ್ರವಾಗಿ ಮನವಿಗೆ ಸ್ಪಂದಿಸಿದ ಭಾರತೀಯ ರೈಲ್ವೇಯ ಅಧಿಕಾರಿಗಳಿಗೆ, ರಾಜ್ಯ ಸಚಿವ ಸೋಮಣ್ಣ ಹಾಗೂ ಕೇಂದ್ರ ಸಚಿವ ಅಶ್ವಿ‌ನ್‌ ವೈಷ್ಣವ್‌ ಅವರಿಗೆ ವಂದನೆಗಳು.
– ಕೋಟ ಶ್ರೀನಿವಾಸ ಪೂಜಾರಿ, ಸಂಸದ

ಹಲವು ವರ್ಷಗಳ ಬೇಡಿಕೆ
ತಿರುಪತಿ ಮತ್ತು ಕರಾವಳಿ ನಡುವೆ ರೈಲು ಬೇಕು ಅನ್ನುವುದು ನಮ್ಮ ಹಲವು ದಶಕಗಳ ಬೇಡಿಕೆಯಾಗಿತ್ತು. ಸಂಸದ ಕೋಟ ಅವರು ನಮ್ಮ ಬೇಡಿಕೆಯನ್ನು ಶೀಘ್ರ ಈಡೇರಿಸುವ ಭರವಸೆ ನೀಡಿದ್ದರು. ಅಂತೆಯೇ ಈಗ ತಿರುಪತಿ ಜತೆಗೆ ಉದ್ಯಮ ನಗರಿ ಹೈದರಾಬಾದ್‌ಗೂ ಸಂಪರ್ಕ ಸಾಧ್ಯವಾಗಿದೆ. ವಾರಕ್ಕೊಂದು ದಿನ ಘೊಷಣೆಯಾಗಬೇಕಿದ್ದ ಹೊಸ ರೈಲಿನ ಬದಲು ವಾರಕ್ಕೆರಡು ದಿನದ ಕಾಚಿಗುಡ ರೈಲಿನ ವಿಸ್ತರಣೆ ಕೂಡ ಸಮರ್ಪಕ ನಡೆಯಾಗಿದೆ.
– ಗಣೇಶ್‌ ಪುತ್ರನ್‌ , ಕುಂದಾಪುರ ರೈಲು ಪ್ರ. ಹಿ. ಸಮಿತಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next