ಬೆಂಗಳೂರು: ನಗರದಲ್ಲಿ ನಡೆದ ಬೈಕ್ ಕಳ್ಳತನ ಪ್ರಕರಣವನ್ನು ಭೇದಿಸಿರುವ ಪೊಲೀಸರು ಮೂವರನ್ನು ಬಂಧಿಸಿ, 20 ಲಕ್ಷ ರೂ. ಮೌಲ್ಯದ 26 ಸ್ಕೂಟರ್‌ಗಳನ್ನು ವಶಕ್ಕೆ ಪಡೆದಿದ್ದಾರೆ.
ತಮಿಳುನಾಡಿನಿಂದ ಬಸ್‌ನಲ್ಲಿ ಬಂದು ಡಿಯೋ ಬೈಕ್‌ಗಳನ್ನೇ ಕದಿಯುತ್ತಿದ್ದ ನೆಡುಚೇಲಿಯನ್ (23),ತಿರುಪತಿ(25), ವಲ್ಲರಸು (32) ಬಂಧಿತರು. ಈ ಮೂವರು ಆರೋಪಿಗಳು ಹಗಲು ಹೊತ್ತು ಬಸ್ ನಲ್ಲಿ ತಮಿಳುನಾಡಿನಿಂದ ಬೆಂಗಳೂರಿಗೆ ಬರುತ್ತಿದ್ದರು. ರಾತ್ರಿ ಬೆಂಗಳೂರಿನ ಕೆಲ ಗಲ್ಲಿಗಳಲ್ಲಿ ಸುತ್ತಾಡಿ ಪಾರ್ಕಿಂಗ್ ಹಾಗೂ ಮನೆ ಮುಂದೆ ನಿಲುಗಡೆ ಮಾಡುತ್ತಿದ್ದ ಡಿಯೋ ದ್ವಿಚಕ್ರ ವಾಹನಗಳನ್ನು ಮಾತ್ರ ಗುರುತಿಸುತ್ತಿದ್ದರು.
ಮೂವರು ಆರೋಪಿಗಳ ಪೈಕಿ ಓರ್ವ ಬೈಕ್ ಹ್ಯಾಂಡ್ ಲಾಕ್ ಮುರಿದರೆ, ಮತ್ತೂಬ್ಬ ಆರೋಪಿ ಯಾರಾದರೂ ಬರುತ್ತಾರೆಯೇ ಎಂಬುದನ್ನು ಗಮನಿಸುತ್ತಿದ್ದ. ಮೂರನೇ ಆರೋಪಿಯು ದೂರದಲ್ಲಿ ನಿಂತುಕೊಂಡು ಅಪರಿಚಿತನಂತೆ ನಟಿಸಿ ಆ ಪ್ರದೇಶದಲ್ಲಿ ಯಾವುದಾದರೂ ವಾಹನಗಳು ಓಡಾಡಿದರೆ ಮೊಬೈಲ್ ಮೂಲಕ ಕರೆ ಮಾಡಿ ಇವರಿಗೆ ಮಾಹಿತಿ ಕೊಡುತ್ತಿದ್ದ.
ಇದನ್ನೂ ಓದಿ: ದೆಹಲಿ ರೈಲ್ವೆ ನಿಲ್ದಾಣದ ಮೇಲ್ಸೆತುವೆಯಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ, ಆರೋಪಿಗಳ ಸೆರೆ
ಕದ್ದ ಬೈಕ್‌ನಲ್ಲೇ ಮೂವರೂ ತಮಿಳುನಾಡಿಗೆ ಹೋಗುತ್ತಿದ್ದರು. ತಮಿಳುನಾಡಿನಲ್ಲಿ 10- 15 ಸಾವಿರಕ್ಕೆ ಡಿಯೋ ಮಾರಾಟ ಮಾಡುತ್ತಿದ್ದರು. ಕೆಲ ದಿನಗಳ ಹಿಂದೆ, ಕದ್ದ ಡಿಯೋ ಸ್ಕೂಟರ್‌ನಲ್ಲಿ ನಗರದಿಂದ ತಮಿಳುನಾಡಿಗೆ ಹೋಗುತ್ತಿದ್ದಾಗ ಮಾರ್ಗ ಮಧ್ಯೆ ಬೊಮ್ಮನಹಳ್ಳಿ ಬಳಿ ಬೀಟ್ ಪೊಲೀಸರನ್ನು ಕಂಡು ಹೆದರಿ ಯೂ ಟರ್ನ್ ತೆಗೆದುಕೊಂಡು ಪರಾರಿಯಾಗಲು ಯತ್ನಿಸಿದ್ದರು.
ಅನುಮಾನದ ಮೇರೆಗೆ ಪೊಲೀಸರು ಆರೋಪಿಗಳನ್ನು ಬೆನ್ನಟ್ಟಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ತಮಿಳುನಾಡಿನಲ್ಲಿ ಡಿಯೋ ಸ್ಕೂಟರ್‌ಗಳಿಗೆ ಹೆಚ್ಚಿನ ಬೇಡಿಕೆಯಿರುವುದನ್ನು ಗಮನದಲ್ಲಿಟ್ಟುಕೊಂಡು ಆರೋಪಿಗಳು ಡಿಯೋ ಸ್ಕೂಟರ್ ಅನ್ನೇ ಟಾರ್ಗೆಟ್ ಮಾಡಿಕೊಂಡಿದ್ದರು ಎಂದು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ.