Advertisement

Arrested: ನಕಲಿ ದಾಖಲೆ ನೀಡಿ ಟಿಡಿಎಸ್‌ ಪಡೆಯುತ್ತಿದ್ದ ಆರೋಪಿಯ ಬಂಧಿಸಿದ ಜಾರಿ ನಿರ್ದೇಶನಾಲಯ

11:02 AM Nov 21, 2024 | Team Udayavani |

ಬೆಂಗಳೂರು: ನಕಲಿ ದಾಖಲೆಗಳನ್ನು ನೀಡಿ ಟಿಡಿಎಸ್‌ ಮೊತ್ತವನ್ನು ವಾಪಸ್‌ ಪಡೆದು ಅಕ್ರಮ ಹಣಕಾಸು ವಹಿವಾಟು ನಡೆಸುತ್ತಿದ್ದ ಆರೋಪದ ಮೇಲೆ ಬೆಂಗಳೂರಿನ ದಿಲೀಪ್‌ ಎಂಬಾತನನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬುಧವಾರ ಬಂಧಿಸಿದ್ದಾರೆ.

Advertisement

ಆರೋಪಿ ದಿಲೀಪ್‌ ಹತ್ತಾರು ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ನಕಲಿ ದಾಖಲೆಗಳನ್ನು ಸೃಷ್ಟಿಸಿ, ಬ್ಯಾಂಕ್‌ಗಳಲ್ಲಿ ಸಾಲ ಪಡೆದು ವಂಚನೆ, ಗುರುತಿನ ಚೀಟಿ ದುರುಪಯೋಗ ಪಡಿಸಿಕೊಂಡು ಟಿಡಿಎಸ್‌ ಹಣ ವಾಪಸ್‌ ಪಡೆಯುತ್ತಿದ್ದ. ಅದಕ್ಕಾಗಿ ತನ್ನ ಹೆಸರನ್ನು ಬಿ.ಆರ್‌. ದಿಲೀಪ್‌ ಅಲಿಯಾಸ್‌ ದಿಲೀಪ್‌ ರಾಜೇಗೌಡ ಅಲಿಯಾಸ್‌ ದಿಲೀಪ್‌ ಬಾಲಗಂಚಿ ರಾಜೇಗೌಡ ಎಂಬ ಹೆಸರಿನಲ್ಲಿ  ನಕಲಿ ಪಾನ್‌ ಮತ್ತು ಆಧಾರ್‌ ಕಾರ್ಡ್‌ಗಳನ್ನು ಪಡೆದುಕೊಂಡಿದ್ದಾನೆ. ಈ ಮೂರು ಪಾನ್‌ ಕಾರ್ಡ್‌ಗಳನ್ನು ಪಡೆದುಕೊಂಡು ಹಲವಾರು ಹಣಕಾಸಿನ ವ್ಯವಹಾರ ಮಾಡಿದ್ದಾನೆ. ಪ್ರಮುಖವಾಗಿ ವಾಹನ ಸಾಲ ಪಡೆಯುವುದು. ಕೆಲವರ ದಾಖಲೆಗಳನ್ನು ಅಕ್ರಮವಾಗಿ ಪಡೆದುಕೊಂಡು ಕೆಲ ಬ್ಯಾಂಕ್‌ಗಳಲ್ಲಿ ಖಾತೆಗಳನ್ನು ತೆರೆದಿದ್ದಾನೆ ಎಂಬುದು ತನಿಖೆಯಲ್ಲಿ ಗೊತ್ತಾಗಿದೆ ಎಂದು ಇಡಿ ತಿಳಿಸಿದೆ.

ಟಿಡಿಎಸ್‌ ವಂಚನೆ: ಆರೋಪಿ ಪ್ರಮುಖವಾಗಿ ಟಿಡಿಎಸ್‌ ದಾಖಲೆಗಳನ್ನು ತಿದ್ದುಪಡಿ ಮಾಡಿ ರಿಫ‌ಂಡ್‌ ಪಡೆಯುತ್ತಿದ್ದ. ಕರ್ನಾಟಕ ಸರ್ಕಾರದ ಕಾವೇರಿ ಮತ್ತು ಹರಿಯಾಣ ಸರ್ಕಾರದ ಜಮಬಂದಿ ಪೋರ್ಟಲ್‌ಗ‌ಳನ್ನು ಶೋಧಿಸಿ, ಭಾರತದಲ್ಲಿ ಆಸ್ತಿ ಮಾರಿದ್ದ ಅನಿವಾಸಿ ಭಾರತೀಯ ತೆರಿಗೆದಾರರ ಮಾಹಿತಿಯನ್ನು ಸಂಗ್ರಹಿಸಿ, ಅವರ ಆಸ್ತಿ ದಾಖಲೆಗಳಲ್ಲಿನ ಆಧಾರ್‌ ಮತ್ತು ಪಾನ್‌ ಮಾಹಿತಿ ಪಡೆಯುತ್ತಿದ್ದ. ಬಳಿಕ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಕೆವೈಸಿ ಸಡಿಲಿಕೆ ಇರುವ ಬ್ಯಾಂಕ್‌ಗಳನ್ನು ಆಯ್ಕೆ ಮಾಡಿಕೊಂಡು ಖಾತೆಗಳನ್ನು ತೆರೆಯುತ್ತಿದ್ದ. ಆ ಖಾತೆಗಳನ್ನು ಉಲ್ಲೇಖೀಸಿ ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್‌ ಪೋರ್ಟಲ್‌ ಪ್ರವೇಶಿಸಿ, ಐಟಿಆರ್‌ಗಳಲ್ಲಿ ತೆರಿಗೆ ಭಾದ್ಯತೆಗಳನ್ನು ಪರಿಶೀಲಿಸಿ, ರಿಫ‌ಂಡ್‌ ಮೊತ್ತವನ್ನು ಹೆಚ್ಚಿಸಿಕೊಳ್ಳುತ್ತಿದ್ದ.

ಈ ಹಣವನ್ನು ನಕಲಿ ಖಾತೆಗಳಿಗೆ ವರ್ಗಾವಣೆ ಮಾಡಿಕೊಳ್ಳುತ್ತಿದ್ದ. ಹೀಗೆ ವಂಚಿಸಿದ ಹಣದಲ್ಲಿ ಸುಮಾರು 10 ಕೋಟಿ ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತುಗಳು, ನಗದು ಹಾಗೂ ಕ್ರಿಪ್ಟೋಕರೆನ್ಸಿಗೂ ಹಣ ಹೂಡಿಕೆ ಮಾಡಿದ್ದಾನೆ ಎಂಬುದು ಗೊತ್ತಾಗಿದೆ. ಆರೋಪಿಯನ್ನು ಹೆಚ್ಚಿನ ವಿಚಾರಣೆಗಾಗಿ 7 ದಿನಗಳ ಕಾಲ ವಶಕ್ಕೆ ಪಡೆಯಲಾಗಿದೆ ಎಂದು ಇಡಿ ಮೂಲಗಳು ತಿಳಿಸಿವೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next