ಮಣಿಪಾಲ: ರಾಜ್ಯದ ವಿದ್ಯಾರ್ಥಿಗಳಿಗೆ ವಸತಿ ನಿಲಯದ ಕೊರತೆ ಯಾಗದಂತೆ ಶೈಕ್ಷಣಿಕ ವಿಭಾಗಗಳಲ್ಲಿ 1,000 ವಿದ್ಯಾರ್ಥಿಗಳ ಸಾಮರ್ಥ್ಯದ ತಲಾ 50 ಕೋ.ರೂ. ವೆಚ್ಚದಲ್ಲಿ 5 ದೀನ ದಯಾಳ್ ಉಪಾಧ್ಯಾಯ ಹಾಸ್ಟೆಲ್ ನಿರ್ಮಾಣ ಮಾಡಲಾಗುವುದು ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಮಣಿಪಾಲದಲ್ಲಿ 4.24 ಕೋ.ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಇಂದಿರಾ ಗಾಂಧಿ ಮೆಟ್ರಿಕ್ ಅನಂತರದ ನರ್ಸಿಂಗ್ ವಿದ್ಯಾರ್ಥಿನಿಯರ ವಸತಿ ನಿಲಯ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಮೊದಲ ಬಾರಿಗೆ ಪ.ಜಾತಿ, ಪ.ಪಂಗಡ, ಹಿಂದುಳಿದ ವರ್ಗ, ಅಲ್ಪ ಸಂಖ್ಯಾಕರು ಸೇರಿದಂತೆ ಎಲ್ಲ ವಿದ್ಯಾರ್ಥಿಗಳಿಗೆ ಒಂದೇ ವಿದ್ಯಾರ್ಥಿನಿಲಯದಲ್ಲಿ ವಸತಿ ಸೌಲಭ್ಯ ಒದಗಿಸಲು ದೀನ ದಯಾಳ್ ಉಪಾಧ್ಯಾಯ ಹಾಸ್ಟೆಲ್‌ಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ರಾಜ್ಯದ 5 ಕಡೆಗಳಲ್ಲಿ ಈ ಹಾಸ್ಟೆಲ್‌ಗಳ ನಿರ್ಮಾಣಕ್ಕೆ 250 ಕೋ. ರೂ. ವೆಚ್ಚವಾಗಲಿದೆ ಎಂದರು.
ಶಾಸಕ ಕೆ.ರಘುಪತಿ ಭಟ್ ಮಾತನಾಡಿ, ಜಿಲ್ಲೆಯಲ್ಲಿ ಪ್ರತೀ ವರ್ಷ ಸರಕಾರಿ ಹಾಸ್ಟೆಲ್‌ಗೆ ಬೇಡಿಕೆ ಹೆಚ್ಚುತ್ತಿದೆ. ಇನ್ನು 2 ವರ್ಷದಲ್ಲಿ ಜಿಲ್ಲೆಯಲ್ಲಿ ಬೇಡಿಕೆಗೆ ಅನುಗುಣವಾಗಿ ಹಾಸ್ಟೆಲ್‌ಗಳ ನಿರ್ಮಾಣ ಮಾಡಲಾಗುವುದು. ವಿದ್ಯಾರ್ಥಿಗಳು ಹಾಸ್ಟೆಲ್‌ಗಳಲ್ಲಿ ವಿದ್ಯಾಭ್ಯಾಸದ ಜತೆಗೆ ಶಿಸ್ತು ರೂಡಿಸಿಕೊಂಡು, ಉತ್ತಮ ಶಿಕ್ಷಣ ಪಡೆಯಬೇಕು ಎಂದು ಸಲಹೆ ನೀಡಿದರು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಜಿ.ಪಂ. ಸಿಇಒ ಪ್ರಸನ್ನ ಎಚ್., ಕರ್ನಾಟಕ ಗೃಹ ಮಂಡಳಿಯ ಸಹಾಯಕ ಎಂಜಿನಿಯರ್ ಸಹನಾ ಉಪಸ್ಥಿತರಿದ್ದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ದೇವೀಂದ್ರ ಎಸ್. ಬಿರಾದರ್ ಸ್ವಾಗತಿಸಿದರು. ಪ್ರಶಾಂತ್ ಶೆಟ್ಟಿ ಹಾವಂಜೆ ನಿರೂಪಿಸಿ, ವಂದಿಸಿದರು.
ಉಡುಪಿ ನಗರದಲ್ಲಿ 250 ವಿದ್ಯಾರ್ಥಿನಿಯರಿಗೆ ಅನುಕೂಲ ವಾಗುವಂತೆ 6.5 ಕೋ. ರೂ. ವೆಚ್ಚದ ಹಾಸ್ಟೆಲ್ ನಿರ್ಮಾಣಕ್ಕೆ ಶೀಘ್ರ ದಲ್ಲಿ ಶಂಕುಸ್ಥಾಪನೆ ನೆರವೇರಿಸ ಲಾಗುವುದು.
-ಕೋಟ ಶ್ರೀನಿವಾಸ ಪೂಜಾರಿ, ಸಚಿವ