ನವದೆಹಲಿ : ನಟ ಸುಶಾಂತ್ ಸಿಂಗ್ ರಜ್ ಪೂತ್ ಅವರ ಕೊನೆಯ ಚಿತ್ರ ‘ದಿಲ್ ಬೆಚರಾ’ ಸಿನಿಮಾದ ಟ್ರೈಲರ್ ಬಿಡುಗಡೆ ದಿನಾಂಕವನ್ನು ಚಿತ್ರದ ನಿರ್ದೇಶಕ ಮುಕೇಶ್ ಚಬ್ರಾ ಸಾಮಾಜಿಕ ಜಾಲತಾಣದಲ್ಲಿ ಹೊಸ ಪೋಸ್ಟರ್ ನೊಂದಿಗೆ ಹಂಚಿಕೊಂಡಿದ್ದಾರೆ.
ದಿಲ್ ಬೆಚರಾ ಚಿತ್ರ ನಿಗದಿಯಂತೆ ಮೇ ತಿಂಗಳಿನಲ್ಲಿ ಚಿತ್ರ ಮಂದಿರದಲ್ಲಿ ಬಿಡುಗಡೆಯಾಗಬೇಕಿತ್ತು. ಕೋವಿಡ್ ಭೀತಿಯಿಂದ ಚಿತ್ರವನ್ನು ನೇರವಾಗಿ ಓಟಿಟಿಯಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದ್ದು, ಸುಶಾಂತ್ ಸಿಂಗ್ ಅನಿರೀಕ್ಷಿತ ಸಾವಿನಿಂದ ನೊಂದಿರುವ ನೂರಾರು ಅಭಿಮಾನಿಗಳು ಅವರ ಕೊನೆಯ ಚಿತ್ರವನ್ನು ಚಿತ್ರಮಂದಿರದಲ್ಲೇ ಬಿಡುಗಡೆ ಮಾಡಲು ಆಗ್ರಹಿಸಿದ್ದಾರೆ. ಚಿತ್ರದ ನಿರ್ದೇಶಕ ಮುಕೇಶ್ ಇಂದು ತಮ್ಮ ಟ್ವಿಟರ್ ನಲ್ಲಿ ಚಿತ್ರದ ಟ್ರೈಲರ್ ಬಿಡುಗಡೆ ದಿನಾಂಕವನ್ನು ಹೊಸ ಪೋಸ್ಟರ್ ಒಂದನ್ನು ಹಾಕಿ ಘೋಷಿಸಿದ್ದಾರೆ. ಸೋಮವಾರ ಜುಲೈ 6 ರಂದು ದಿಲ್ ಬೆಚರಾ ಚಿತ್ರದ ಆಫಿಶೀಯಲ್ ಟ್ರೈಲರ್ ಬಿಡುಗಡೆ ಆಗಲಿದೆ.
ದಿಲ್ ಬೆಚರಾ ಮುಕೇಶ್ ಅವರ ಚೊಚ್ಚಲ ಚಿತ್ರ. ಚಿತ್ರದಲ್ಲಿ ಸುಶಾಂತ್ ಸಿಂಗ್ ಜತೆಗೆ ಮೊದಲ ಬಾರಿ ಬಾಲಿವುಡ್ ಲೋಕಕ್ಕೆ ಕಾಲಿಟ್ಟಿರುವ ಸಂಜನಾ ಸಂಘಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ವಿಶೇಷ ಪಾತ್ರದಲ್ಲಿ ನಟ ಸೈಫ್ ಆಲಿ ಖಾನ್ ಕೂಡ ಬಣ್ಣ ಹಚ್ಚಿದ್ದಾರೆ.
ದಿಲ್ ಬೆಚರಾ ಚಿತ್ರ ಕಥೆ ಮೂಲತಃ ಜಾನ್ ಗ್ರೀನ್ ಅವರ ಹೆಚ್ಚು ಮಾರಾಟವಾದ ಕಾದಂಬರಿ ‘ದಿ ಫಾಲ್ಟ್ ಇನ್ ಅವರ್ ಸ್ಟಾರ್ಸ್’ ದಿಂದ ಆಧಾರಿತವಾಗಿದೆ. ಚಿತ್ರ ಇದೇ ತಿಂಗಳ ಜುಲೈ 24 ರಂದು ಡಿಸ್ನಿ – ಹಾಟ್ ಸ್ಟಾರ್ ನಲ್ಲಿ ಬಿಡುಗಡೆಯಾಗಲಿದ್ದು. ಸುಶಾಂತ್ ಸಿಂಗ್ ಅವರಿಗೆ ಗೌರವ ಸೂಚಿಸುವ ಸಲುವಾಗಿ ಸಿನಿಮಾವನ್ನು ಉಚಿತವಾಗಿ ವೀಕ್ಷಿಸುವ ಅವಕಾಶ ಮಾಡಿಕೊಟ್ಟಿದೆ ಚಿತ್ರ ತಂಡ.
ಜೂನ್ 14 ರಂದು ನಟ ಸುಶಾಂತ್ ಸಿಂಗ್ ರಜಪೂತ್ ಮುಂಬೈಯ ತಮ್ಮ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಇವರ ಅಕಾಲಿಕ ಸಾವು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು.