ಭೋಪಾಲ್/ಐಜ್ವಾಲ್: ಮಧ್ಯ ಪ್ರದೇಶ ಚುನಾವಣೆಯಲ್ಲಿ ಗೆಲ್ಲಲೇ ಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಮಾಜಿ ಸಚಿವ ಕಮಲ್‌ನಾಥ್ ಮತ್ತಿತರರು ಓಡಾಡುತ್ತಿರುವ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್ “ನಾನು ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿದರೆ ಸೋಲುತ್ತಾರೆ’ ಎಂದು ಹೇಳಿದ್ದಾರೆ. ಅ.13ರಂದು ಈ ವೀಡಿಯೋ ರೆಕಾರ್ಡ್ ಮಾಡಲಾಗಿದೆ. ಗಮನಾರ್ಹ ವೆಂದರೆ ರಾಹುಲ್ ಗಾಂಧಿ ಮಧ್ಯಪ್ರದೇಶದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿರುವಾಗಲೇ ಈ ಘಟನೆ ನಡೆದಿದೆ. “ನಾನು ಪ್ರಚಾರ ಮಾಡುವುದಿಲ್ಲ, ಭಾಷಣ ಮಾಡುವುದಿಲ್ಲ. ನಾನು ಭಾಷಣ ಮಾಡಿದ ಸಂದರ್ಭಗಳಲ್ಲಿ ಕಾಂಗ್ರೆಸ್ ಬರುವ ಮತಗಳು ಕಡಿಮೆಯಾ ಗುತ್ತದೆ. ಹೀಗಾಗಿ ನಾನು ಹೋಗುವುದಿಲ್ಲ’ ಎಂದು ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಹೇಳಿದ್ದಾರೆ. ಕಾಂಗ್ರೆಸ್ ನಾಯಕ ಜಿತು ಪಟ್ವಾರಿ ನಿವಾಸದಲ್ಲಿ ಸಾಂದರ್ಭಿಕವಾಗಿ ಮಾತನಾಡಿದ್ದ ವೇಳೆ ಅದನ್ನು ಚಿತ್ರೀಕರಿಸಲಾಗಿದೆ. “ಕಠಿನವಾಗಿ ಕೆಲಸ ಮಾಡದೇ ಇದ್ದರೆ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ. ಅದಕ್ಕಾಗಿ ಕನಸು ಕಂಡರೆ ಸಾಲದು’ ಎಂದಿದ್ದಾರೆ.
ಅದಕ್ಕೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಕಾಂಗ್ರೆಸ್ ತನ್ನ ಹಿರಿಯ ನಾಯಕನನ್ನು ಈ ರೀತಿ ಚಿತ್ರಿಸಬಾರದು ಎಂದು ವ್ಯಂಗ್ಯವಾಡಿದ್ದಾರೆ. ಕಾಂಗ್ರೆಸಿ ಗರು ತಮ್ಮ ನಾಯಕರನ್ನು ಗೌರವಿಸಲು ಕಲಿಯಲಿ ಎಂದು ಹೇಳಿದ್ದಾರೆ. ಮಧ್ಯಪ್ರದೇಶ ಕಾಂಗ್ರೆಸ್ ನಾಯಕ ಕಮಲ್‌ನಾಥ್ “ದಿಗ್ವಿಜಯ ಸಿಂಗ್ ಯಾವ ಅರ್ಥದಲ್ಲಿ ಮಾತಾಡಿದ್ದಾರೋ ಗೊತ್ತಿಲ್ಲ’ ಎಂದು ಹೇಳಿದ್ದಾರೆ.
ಪ್ರಚಾರ ಮಾತ್ರ: ಮಧ್ಯಪ್ರದೇಶದ ಶಿವಪುರದಲ್ಲಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ “ಬಿಜೆಪಿ ಸರಕಾರ ತನ್ನ ಸಾಧನೆಗಳ ಬಗ್ಗೆ ವ್ಯಾಪಕ ಪ್ರಚಾರ ನಡೆಸುತ್ತಿದೆ. ಆದರೆ ಅಪೌಷ್ಟಿಕತೆಯಿಂದ ನರಳುತ್ತಿರುವ ಮಕ್ಕಳ ಬಗ್ಗೆ ಯೋಚನೆಯನ್ನೇ ಮಾಡಿಲ್ಲ’ ಎಂದು ದೂರಿದ್ದಾರೆ. ಪ್ರಚಾರ ಕಾರ್ಯಕ್ರಮಕ್ಕೆ ಮೊದಲು ಗ್ವಾಲಿಯರ್‌ನ ಗುರುದ್ವಾರಕ್ಕೆ ಭೇಟಿ ನೀಡಿದರು.
ಕಾಂಗ್ರೆಸ್ ಸೋಲಿಸಲು ದುಡಿಯಿರಿ: ಮಧ್ಯ ಪ್ರದೇಶದ ರೇವಾದಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಚುನಾವಣೆಯಲ್ಲಿ ಜಯ ಗಳಿಸಲು ಮಾತ್ರ ದುಡಿಯಬೇಡಿ. ಕಾಂಗ್ರೆಸ್ ಪಕ್ಷವನ್ನು ಬೇರು ಸಹಿತ ಕಿತ್ತು ಹಾಕಲು ಶ್ರಮ ವಹಿಸಿ ಎಂದು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಈ ಚುನಾವಣೆಯಲ್ಲಿ ಕನಿಷ್ಠ 200 ಸ್ಥಾನಗಳನ್ನು ಗೆಲ್ಲುವಂತೆ ಮಾಡಬೇಕು ಎಂಬ ಬಗ್ಗೆ ಕಾರ್ಯಕರ್ತರಿಗೆ ಪ್ರತಿಜ್ಞಾ ವಿಧಿಯನ್ನೂ ಬೋಧಿಸಿದ್ದಾರೆ ಅಮಿತ್ ಶಾ. ಸದ್ಯ ಬಿಜೆಪಿಯಲ್ಲಿ 11 ಕೋಟಿ ಸದಸ್ಯರಿದ್ದಾರೆ. 2019ರ ಲೋಕಸಭೆ ಚುನಾವಣೆಯಲ್ಲಿಯೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಮತ್ತೆ ಅಧಿಕಾರ ಬರುವಂತೆ ಮಾಡಲು ಶ್ರಮಿಸಬೇಕು ಎಂದು ಮನವಿ ಮಾಡಿದ್ದಾರೆ.
ಜಸ್ವಂತ್ ಪುತ್ರ ಇಂದು ಕಾಂಗ್ರೆಸ್‌ಗೆ: ಬಿಜೆಪಿಯ ಹಿರಿಯ ನಾಯಕ ಜಸ್ವಂತ್ ಸಿಂಗ್ ಪುತ್ರ ಮಾನವೇಂದ್ರ ಸಿಂಗ್ ಬುಧವಾರ ದಿಲ್ಲಿಯಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಲಿದ್ದಾರೆ. ರಾಜಸ್ಥಾನ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಾಜೇಶ್ ಪೈಲಟ್ ಈ ಮಾಹಿತಿ ನೀಡಿದ್ದಾರೆ. ಕಳೆದ ತಿಂಗಳು ಬಾರ್ಮರ್‌ನಲ್ಲಿ ಆಯೋಜಿಸಲಾಗಿದ್ದ ಬೃಹತ್ ರ್ಯಾಲಿಯಲ್ಲಿ ಮಾನವೇಂದ್ರ ಸಿಂಗ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರುವುದಾಗಿ ಘೋಷಿಸಿದ್ದರು. ಜಸ್ವಂತ್ ಸಿಂಗ್ ಪುತ್ರ ಪಕ್ಷ ತ್ಯಜಿಸುವುದರಿಂದ ಪರಿಣಾಮ ಬೀರದು ಎಂದು ಬಿಜೆಪಿ ಹೇಳಿದೆ.