ಬೆಂಗಳೂರು: ನಗರ ಜಿಪಂ ವ್ಯಾಪ್ತಿಯಲ್ಲಿ ಕೋವಿಡ್ ಹಿನ್ನಲೆಯಲ್ಲಿ ಅರ್ಧಕ್ಕೆ ನಿಂತಿದ್ದ ಗ್ರಾಪಂಗಳ ಆಸ್ತಿ ಡಿಜಿಟಲೀಕರಣ ಕಾರ್ಯ ಮತ್ತೆ ಆರಂಭವಾಗಿದೆ. ನಗರ ಜಿಪಂ ವ್ಯಾಪ್ತಿಯಲ್ಲಿ ಸುಮಾರು 96 ಗ್ರಾಪಂಗಳಿದ್ದು, ಸುಮಾರು 800 ಕೋಟಿ.ರೂ. ಆದಾಯ ನಿರೀಕ್ಷೆ ಮಾಡಲಾಗಿತ್ತು. ಆ ದೃಷ್ಟಿಯಿಂದಲೇ ಪ್ರಾಥಮಿಕ ಹಂತದಲ್ಲಿ ಸುಮಾರು 31 ಗ್ರಾಪಂಗಳಲ್ಲಿ ಆಸ್ತಿ ಡಿಜಿಟಲೀಕರಣ ಕೆಲಸ ಆರಂಭವಾಗಿತ್ತು.
ಜತೆಗೆ ಮೂರು ತಿಂಗಳಲ್ಲಿ ಆಸ್ತಿಗಳ ಡಿಜಿಟಲೀಕರಣ ಕಾರ್ಯ ಪೂರ್ಣಗೊಳ್ಳುವ ನಿರೀಕ್ಷೆಯಲ್ಲಿತ್ತು. ಆದರೆ ಕೋವಿಡ್ ಹಿನ್ನೆಲೆಯಲ್ಲಿ ಕಾರ್ಯ ಸ್ಥಗಿತವಾಗಿತ್ತು. ಈ ಮತ್ತೆ ಆಸ್ತಿ ಡಿಜಟಲೀಕರಣ ಆರಂಭವಾಗಿದ್ದು, ಒಂದು ತಿಂಗಳ ಒಳಗೆ ಮೂವತ್ತೂಂದು ಗ್ರಾಪಂಗಳಲ್ಲಿ ಆಸ್ತಿ ಡಿಜಿಟಲೀಕರಣ ಕೆಲಸ ಮುಗಿಸಲು ನಿರೀಕ್ಷಿಸಿದ್ದು, ಇದಕ್ಕೆ ಇಸ್ರೋ ಸಹಾಯ ಪಡೆಯಲಾಗುವುದು.ಈಗಾಗಲೇ ಇಸ್ರೋದಿಂದ ನಕ್ಷೆ ಪ್ರತಿ ಪಡೆದಿದ್ದು, ನಕ್ಷೆ ಮುಂದಿಟ್ಟುಕೊಂಡು ಆಸ್ತಿಗಳ ಡಿಜಿಟಲೀಕರಣ ನಡೆಸುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ತೆರಿಗೆ ವ್ಯಾಪ್ತಿಯಿಂದ ಹೊರಗುಳಿದ ಆಸ್ತಿಗಳ ಪತ್ತೆ ಕಾರ್ಯವೂ ನಡೆದಿದೆ. ಪ್ರಸ್ತುತ ವಾರ್ಷಿಕವಾಗಿ 140 ಕೋಟಿ ರೂ. ತೆರಿಗೆ ಸಂಗ್ರಹವಾಗುತ್ತಿದ್ದು, ಡಿಜಿಟಲೀಕರಣದ ಮೂಲಕ ಮತ್ತಷ್ಟು ಆದಾಯ ಸಂಗ್ರಹವಾಗಲಿದೆ ಎಂದು ನಗರ ಜಿಪಂ ಸಹಾಯಕ ಯೋಜನಾಧಿಕಾರಿ ಕೆ.ಜಿ.ಜಗದೀಶ್ ತಿಳಿಸಿದ್ದಾರೆ. ಮರಸೂರು ಗ್ರಾಪಂನಲ್ಲೂ ತೆರಿಗೆ ವ್ಯಾಪ್ತಿಯಿಂದ ಹೊರಗುಳಿದಿರುವ ಆಸ್ತಿಗಳಿವೆ.ಅವುಗಳ ತೆರಿಗೆ ವ್ಯಾಪ್ತಿಗೆ ತರುವ ಕೆಲಸ ನಡೆದಿದೆ. ಇದರಿಂದ ಮುಂದಿನ ದಿನದಲ್ಲಿ ಗ್ರಾಮ ಪಂಚಾಯತಿಗೆ ಮತ್ತಷ್ಟು ಆದಾಯ ಹರಿದು ಬರುವ ನಿರೀಕ್ಷೆ ಇದೆ ಎಂದು ಮರಸೂರು ಗ್ರಾಮ ಪಂಚಾಯ್ತಿ ಪಿಡಿಒ ಶಶಿಕಿರಣ್ ತಿಳಿಸಿದರು.
ಡಿಜಿಟಲೀಕರಣ ಆಗುತ್ತಿರುವ ಪ್ರದೇಶ : ಕಗ್ಗಲೀಪುರ, ಕುಂಬಳಗೋಡು, ಸೋಮನಹಳ್ಳಿ, ಕೋನಪ್ಪನ ಅಗ್ರಹಾರ, ಆಲೂರು, ರಾಜಾನುಕುಂಟೆ, ದಾಸನಪುರ, ದೊಡ್ಡಜಾಲ, ಚಿಕ್ಕಬಾಣಾವರ, ಚಿಕ್ಕಜಾಲ, ಹೆನ್ನಾಗರ, ಮರಸೂರು, ಯಮರೆ ,ಹುಲಿಮಂಗಲ, ಬಿದರಹಳ್ಳಿ, ಮಂಡೂರು, ಕಿತ್ತಗನೂರು, ದೊಡ್ಡಗುಬ್ಬಿ ಆವಲಹಳ್ಳಿ ಸೇರಿದಂತೆ ಹಲವು ಗ್ರಾಪಂಗಳಲ್ಲಿ ಆಸ್ತಿ ಡಿಜಿಟಲೀಕರಣ ಕಾರ್ಯ ಆರಂಭವಾಗಿದೆ. ಜತೆಗೆ ಯೊಜನೆ ಅನುಷ್ಠಾನಕ್ಕೆ ನೋಡೆಲ್ ಅಧಿಕಾರಿಗಳನ್ನೂ ನೇಮಿಸಲಾಗಿದೆ ಎಂದು ಜಿಪಂ ತಿಳಿಸಿದೆ.
ಪ್ರತಿ ಗ್ರಾಪಂಗೆ 250 ಟ್ಯಾಬ್ : ಡಿಜಿಟಲೀಕರಣ ಮೂರು ಹಂತಗಳಲ್ಲಿ ನಡೆಯಲಿದ್ದು, ಒಂದು ಗ್ರಾಪಂಗೆ ಎಂಟರಂತೆ ಸುಮಾರು 250 ಟ್ಯಾಬ್‌ಗಳನ್ನು ಖರೀದಿಸಲು ಅನುಮತಿ ನೀಡಲಾಗಿದೆ. ಡಿಜಿಟಲೀಕರಣಕ್ಕೆ 5 ಕೋಟಿ.ರೂ. ವೆಚ್ಚವಾಗುವ ನಿರೀಕ್ಷೆಯಿದ್ದು, ಸರ್ಕಾರ ಈಗಾಗಲೇ ಅನುದಾನ ಬಿಡುಗಡೆ ಮಾಡಿದೆ ಎಂದು ಗ್ರಾಪಂ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಾಹಿತಿ ನೀಡಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ಆಸ್ತಿ ಡಿಜಿಟಲೀಕರಣ ಕಾರ್ಯ ಅರ್ಧಕ್ಕೆ ನಿಂತು ಹೋಗಿತ್ತು. ಇದೀಗ ಆ ಪ್ರಕ್ರಿಯೆ ಮತ್ತೆ ಆರಂಭಗೊಂಡಿದೆ. ಆರಂಭಿಕ ಹಂತದಲ್ಲಿ 31 ಗ್ರಾಪಂಗಳಲ್ಲಿ ಆಸ್ತಿ ಡಿಜಿಟಲೀಕರಣ ನಡೆಯಲಿದೆ.
– ಕೆ.ಶಿವರಾಮೇಗೌಡ, ನಗರ ಜಿಪಂ ಸಿಇಒ
– ದೇವೇಶ ಸೂರುಗುಪ್ಪ