ಡಿಂಪಲ್ ಹುಡುಗನ ಸಿಂಪಲ್ ಸ್ಟೋರಿ ನಿರ್ದೇಶಕ ಮಂಜುನಾಥ್ ಹೊಳೆನರಸೀಪುರ ಬಂದು ಕಥೆ ಹೇಳುವಾಗ ದಿಗಂತ್ ತಲೆಯಲ್ಲಿ ಒಂದಂಶ ಓಡುತ್ತಿತ್ತಂತೆ. ಅದೇನೆಂದರೆ ಇವರು ಯಾವ ಕೆಟಗರಿಗೆ ಸೇರುವ ನಿರ್ದೇಶಕರೆಂಬುದು. ಏಕೆಂದರೆ, ದಿಗಂತ್ ತಮ್ಮ ಇಷ್ಟು ವರ್ಷದ ಅನುಭದಲ್ಲಿ ಎರಡು ರೀತಿಯ ನಿರ್ದೇಶಕರನ್ನು ನೋಡಿದ್ದಾರೆ.
ಮೊದಲನೇಯ ಕೆಟಗರಿಯ ನಿರ್ದೇಶಕರು ತುಂಬಾ ಚೆನ್ನಾಗಿ, ಕಥೆ ಹೇಳುತ್ತಾರೆ. ಆದರೆ, ಹೇಳಿದಂತೆ ಸಿನಿಮಾ ಮಾಡುವಲ್ಲಿ ಎಡವುತ್ತಾರೆ. ಇನ್ನು ಎರಡನೇಯ ಕೆಟಗರಿ ನಿರ್ದೇಶಕರು ಕಥೆ ಹೇಳಿದಂತೆ ಸಿನಿಮಾ ಮಾಡುತ್ತಾರೆ. ಹಾಗಾಗಿ, ಮಂಜುನಾಥ್
ಯಾವ ಕೆಟಗರಿಗೆ ಸೇರುತ್ತಾರೆಂಬ ಅನುಮಾನವಿತ್ತಂತೆ. ಆದರೆ, ಶೂಟಿಂಗ್‌ನಲ್ಲಿ ಇವರು ಕಥೆ ಹೇಳಿದಂತೆ ಸಿನಿಮಾ ಮಾಡುವ ನಿರ್ದೇಶಕ ಎಂದು ಗೊತ್ತಾಯಿತಂತೆ. ದಿಗಂತ್ ಹೀಗೆ ಹೊಸ ನಿರ್ದೇಶಕರ ಬಗ್ಗೆ ಹೇಳಲು ಕಾರಣ “ಫಾರ್ಚೂನರ್’. ಇದು ದಿಗಂತ್ ಅವರ ಹೊಸ ಸಿನಿಮಾ.
ಸದ್ದಿಲ್ಲದೇ ಬಹುತೇಕ ಚಿತ್ರೀಕರಣ ಕೂಡಾ ಮುಗಿಸಿದ್ದಾರೆ. “ಕಥೆ ತುಂಬಾ ಚೆನ್ನಾಗಿ ಮಾಡಿಕೊಂಡಿದ್ದಾರೆ. ನಾನಿಲ್ಲಿ ಶ್ರೀಮಂತ ಕುಟುಂಬದ ಹುಡುಗನಾಗಿ ಕಾಣಿಸಿಕೊಂಡಿದ್ದೇನೆ. ನನ್ನ ಜೀವನದಲ್ಲಿ ಅದೃಷ್ಟ ಯಾವ ರೀತಿ ಪಾತ್ರ ವಹಿಸುತ್ತದೆ ಎಂಬ ಅಂಶದೊಂದಿಗೆ ಕಥೆ ಸಾಗುತ್ತದೆ’ ಎಂದು ತಮ್ಮ ಸಿನಿಮಾ ಬಗ್ಗೆ ಹೇಳುತ್ತಾರೆ ದಿಗಂತ್.
ನಿರ್ದೇಶಕ ಮಂಜುನಾಥ ಕೂಡಾ ಚಿತ್ರದಲ್ಲಿ ಅದೃಷ್ಟ ದೊಡ್ಡ ಪಾತ್ರ ವಹಿಸುತ್ತದೆ. ಅದು ನಾಯಕನ ಜೀವನದಲ್ಲಿ ಏನೆಲ್ಲಾ ಮಾಡುತ್ತದೆ ಎಂಬ ಅಂಶಗಳೊಂದಿಗೆ ಸಿನಿಮಾ ಮಾಡಿದ್ದೇವೆ. ಇಲ್ಲಿ ನಾಯಕನ ಪಾತ್ರ ತುಂಬಾ ವಿಶಿಷ್ಟವಾಗಿದೆ ಎಂದರು. ಇನ್ನು, ಚಿತ್ರಕ್ಕೆ ಎಂ.ಎಸ್. ನರಸಿಂಹಮೂರ್ತಿ ಸಂಭಾಷಣೆ ಬರೆದಿದ್ದಾರೆ. ಹೊಸ ಹುಡುಗ ಮಂಜುನಾಥ್ ಒಳ್ಳೆಯ ಕಥೆ ಮಾಡಿಕೊಂಡಿದ್ದು, ಅವರ ಜೊತೆಗೆ ಉತ್ಸಾಹಿ ತಂಡವಿದೆ ಎಂದು ತಂಡದ ಬಗ್ಗೆ ಮಾತನಾಡಿದರು ನರಸಿಂಹ ಮೂರ್ತಿ. ಚಿತ್ರದ ಕಥೆ ಚೆನ್ನಾಗಿದ್ದು, ಹೊಸತನದಿಂದ ಕೂಡಿದೆ ಎಂಬುದು ಅವರ ಮಾತು.
ಚಿತ್ರವನ್ನು ಗುಲೇಚಾ ಬ್ರದರ್ ಆದ ದಿಲೀಪ್, ಭರತ್, ರಾಜೇಶ್ ಸೇರಿ ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ಸೋನು ಗೌಡ ಹಾಗೂ ಸ್ವಾತಿ ಶರ್ಮಾ ನಾಯಕಿಯರು. ಪೂರ್ಣ ಚಂದ್ರ ತೇಜಸ್ವಿಯವರ ಸಂಗೀತ ಚಿತ್ರಕ್ಕಿದೆ.