Advertisement

ಡೀಸೆಲ್‌ ಕೊರತೆ: ಮೀನುಗಾರರ ಪರದಾಟ, ಬಂದರಿನಲ್ಲಿ ಬೋಟುಗಳ ಲಂಗರು

11:16 PM Feb 17, 2023 | Team Udayavani |

ಮಲ್ಪೆ: ಮೀನುಗಾರಿಕೆಗೆ ಸರಕಾರ ವಾರ್ಷಿಕವಾಗಿ ನೀಡುವ ನಿಗದಿತ ಪ್ರಮಾಣದ ಡೀಸೆಲ್‌ ಬಳಕೆಯಾಗಿರುವ ಹಿನ್ನೆಲೆಯಲ್ಲಿ ಹೆಚ್ಚು ಮತ್ಸé ಸಂಪತ್ತು ಸಿಗುವಂಥ ತಿಂಗಳಿನಲ್ಲೇ ಮೀನುಗಾರಿಕಾ ದೋಣಿಗಳು ಎರಡು ಮೂರು ದಿನಗಳಿಂದ ಸಮುದ್ರಕ್ಕೆ ತೆರಳದೇ ಬಂದರಿನಲ್ಲೇ ಲಂಗರು ಹಾಕಿವೆ.

Advertisement

ಸರಕಾರವು ಎಪ್ರಿಲ್‌ನಿಂದ -ಮಾರ್ಚ್‌ವರೆಗೆ 1.50 ಲಕ್ಷ ಕೆ.ಎಲ್‌. ತೆರಿಗೆ ರಹಿತ ಡೀಸೆಲ್‌ ಪೂರೈಸುತ್ತಿದೆ. ವಾರ್ಷಿಕ ಕೋಟಾ ಮುಗಿದ ಕಾರಣ ಫೆ. 14ರಿಂದ ಯಾವುದೇ ಮೀನುಗಾರಿಕೆ ಬಂಕ್‌ಗಳಲ್ಲಿ ಡೀಸೆಲ್‌ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಬಹುತೇಕ ದೋನಿಗಳು ಮೀನುಗಾರಿಕೆಗೆ ತೆರಳದ ಕಾರಣ ಲಕ್ಷಾಂತರ ರೂ. ವಹಿವಾಟು ಸ್ಥಗಿತಗೊಂಡಿದೆ.

ಉತ್ತಮ ಫಸಲಿನ ಹೊತ್ತು
ಮೀನುಗಾರಿಕೆ ಋತುವಿನ ಮಧ್ಯದ ಅವಧಿಯಲ್ಲಿ ಮೀನುಗಾರಿಕೆ ಹೆಚ್ಚೆನೂ ಇರದು. ಆದರೆ ಫೆಬ್ರವರಿ ಯಿಂದ ಹೆಚ್ಚು ಮೀನುಗಳು ಸಿಗುವ ಸಮಯ. ಹಾಗಾಗಿ ಬಹುತೇಕ ಆಳಸಮುದ್ರ ಮೀನುಗಾರರು ಮೀನುಗಾರಿಕೆಯತ್ತ ಗಮನ ಹರಿಸಿದ್ದರು. ಆದರೆ ಈ ಸಂದರ್ಭದಲ್ಲೇ ಡೀಸೆಲ್‌ ಕೊರತೆ ಎದುರಾಗಿರುವುದು ಮೀನುಗಾರರನ್ನು ಸಂಕಷ್ಟಕ್ಕೆ ತಳ್ಳಿದೆ.

ಕಳೆದ ಬಾರಿಯೂ ಕೊರತೆ
ಕಳೆದ ವರ್ಷ 2 -3 ಸಲ ಚಂಡಮಾರುತ ಎದುರಾದಾಗ ಮೀನುಗಾರಿಕೆ ಸ್ಥಗಿತಗೊಂಡಿತ್ತು. ಹಾಗಾಗಿ ಮಾ. 20ರ ಬಳಿಕ ಡೀಸೆಲ್‌ ಕೊರತೆ ಉದ್ಭವಿಸಿತ್ತು. ಈ ಬಾರಿ ಋತುಮಾನದ ಮಧ್ಯೆ ಮೀನುಗಾರಿಕೆ ಸ್ಥಗಿತಗೊಳ್ಳದ ಕಾರಣ ಫೆಬ್ರವರಿಯಲ್ಲಿಯೇ ಡೀಸೆಲ್‌ ಸಮಸ್ಯೆ ಕಾಡಿದೆ. ಕಳೆದ ಬಾರಿ ಸರಕಾರ ಹೆಚ್ಚುವರಿಯಾಗಿ 10 ಸಾವಿರ ಕೆ.ಎಲ್‌. ಡೀಸೆಲ್‌ ಒದಗಿಸಿತ್ತು. ಪ್ರಸ್ತುತ ಮಲ್ಪೆ ಮೀನುಗಾರ ಸಂಘವು ಬೆಂಗಳೂರಿಗೆ ತೆರಳಿ ಜನಪ್ರತಿನಿಧಿಗಳ ಸಹಕಾರದಲ್ಲಿ ಹೆಚ್ಚುವರಿ ಡೀಸೆಲ್‌ಗೆ ಪ್ರಯತ್ನಿಸುತ್ತಿದೆ ಎನ್ನಲಾಗಿದೆ.

ದೋಣಿಗಳ ಸಂಖ್ಯೆಗೆ ಸಾಲದು
ಉಡುಪಿ ಮತ್ತು ದ.ಕ. ಜಿಲ್ಲೆ ಒಟ್ಟಾಗಿ 5000ಕ್ಕೂ ಹೆಚ್ಚು ದೋಣಿಗಳನ್ನು ಹೊಂದಿವೆ. ಈ ಹಿಂದೆ 140 ಅಶ್ವಶಕ್ತಿ ಎಂಜಿನ್‌ ಆಧಾರದಲ್ಲಿ 2014ರಿಂದ 1.50 ಲಕ್ಷ ಕೆ. ಎಲ್‌. ಡೀಸೆಲ್‌ ನೀಡಲಾಗುತ್ತಿತ್ತು. ಇದೀಗ ಎಲ್ಲ ದೋಣಿಯಲ್ಲೂ 350 ಅಶ್ವಶಕ್ತಿ ಎಂಜಿನ್‌ಗಳಿವೆ. ಜತೆಗೆ ದೋಣಿಗಳ ಸಂಖ್ಯೆಯೂ ಹೆಚ್ಚಾಗಿದೆ. ಆದರೆ ಸರಕಾರ ನೀಡುವ ಡೀಸೆಲ್‌ ಪ್ರಮಾಣವನ್ನು ಹೆಚ್ಚಿಸಿಲ್ಲ. ವಾರ್ಷಿಕವಾಗಿ ಕನಿಷ್ಠ 2 ಲಕ್ಷ ಕೆ. ಎಲ್‌. ನೀಡಬೇಕೆಂಬ ಮೀನುಗಾರರ ಬೇಡಿಕೆ ಇನ್ನೂ ಈಡೇರಿಲ್ಲ.

Advertisement

ಹೆಚ್ಚವರಿ ಡೀಸೆಲ್‌ ಪ್ರಸ್ತಾವನೆಗೆ ಮುಖ್ಯಮಂತ್ರಿ ಒಪ್ಪಿಗೆ ಸೂಚಿಸಿದ್ದಾರೆ. ಇದರ ಕಡತಗಳನ್ನು ಆರ್ಥಿಕ ಇಲಾಖೆಗೆ ಕಳುಹಿಸಲಾಗಿದೆ. ಅತೀ ಶೀಘ್ರದಲ್ಲಿ ಸಿಗುವ ನಿರೀಕ್ಷೆ ಇದೆ.
– ಎಸ್‌. ಅಂಗಾರ, ಮೀನುಗಾರಿಕೆ ಮತ್ತು ಒಳನಾಡು ಸಾರಿಗೆ ಸಚಿವರು.

ಒಂದೂವರೆ ತಿಂಗಳ ಮೊದಲೇ ಡೀಸೆಲ್‌ ಖಾಲಿಯಾಗಿದೆ. ಮೀನುಗಾರರಿಗೆ ವಾರ್ಷಿಕ 2 ಲಕ್ಷ ಕೆ. ಎಲ್‌ ಡೀಸೆಲ್‌ ನೀಡಬೇಕೆಂಬ ಬೇಡಿಕೆ ಇನ್ನೂ ಈಡೇರಿಲ್ಲ. ಸರಕಾರ ಈಗಲಾದರೂ ಡೀಸೆಲ್‌ ಪ್ರಮಾಣ ಏರಿಸಬೇಕು.
– ದಯಾನಂದ ಕೆ. ಸುವರ್ಣ, ಅಧ್ಯಕ್ಷರು, ಮೀನುಗಾರರ ಸಂಘ, ಮಲ್ಪೆ

ಹೆಚ್ಚುವರಿ 25 ಸಾವಿರ ಕೆ.ಎಲ್‌. ಡೀಸೆಲ್‌ ಒದಗಿಸಲು ಕೋರಿ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಇಲಾಖೆ ಮಟ್ಟದಲ್ಲಿ ಪ್ರಕ್ರಿಯೆ ನಡೆಯುತ್ತಿದೆ.
– ಶಿವಕುಮಾರ್‌, ಉಪ ನಿರ್ದೇಶಕರು, ಮೀನುಗಾರಿಕೆ ಇಲಾಖೆ (ಪ್ರಭಾರ ಜಂಟಿ ನಿರ್ದೇಶಕರು )

– ನಟರಾಜ್‌ ಮಲ್ಪೆ

Advertisement

Udayavani is now on Telegram. Click here to join our channel and stay updated with the latest news.

Next