ಬೆಳಗಾವಿ: ಸಾರಿಗೆ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ವಾಹನಕ್ಕೆ ವಾಕರಸಾ ಸಂಸ್ಥೆಯ ಡಿಪೋದಲ್ಲಿ ಡೀಸೆಲ್ ಹಾಕಿದ್ದ ಸಿಬ್ಬಂದಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಆರ್. ಮುಂಜಿ ತಿಳಿಸಿದರು.
ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಲಕ್ಷ್ಮಣ ಸವದಿಯವರ ಖಾಸಗಿ ವಾಹನಕ್ಕೆ 44 ಲೀಟರ್ ಇಂಧನವನ್ನು ತುಂಬಲಾಗಿತ್ತು. ಇದು ಸಿಬ್ಬಂದಿಯ ಅಚಾತುರ್ಯದಿಂದ ನಡೆದಿದೆ. ಸಾರಿಗೆ ಸಂಸ್ಥೆ ನಿಯಮ ಉಲ್ಲಂಘಿಸಿರುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಬೆಳಗಾವಿ ಮೂರನೇ ಘಟಕದ ಸಿಬ್ಬಂದಿಗೆ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ:ರಂಗೇನಹಳ್ಳಿ ಬಳಿ ಕಾರುಗಳ ಮುಖಾಮುಖಿ ಢಿಕ್ಕಿ: ಓರ್ವ ಸಾವು, ಮೂವರ ಸ್ಥಿತಿ ಗಂಭೀರ
ನಿಷ್ಕಾಳಜಿಯಿಂದ ಕಾರ್ಯನಿರ್ವಹಿಸಿ ಸಂಸ್ಥೆಯ ಘನತೆಗೆ ಕೆಟ್ಟ ಹೆಸರು ಬರುವಂತೆ ಮಾಡಿದ್ದೀರಿ. ಇದಕ್ಕೆ ನಿಮ್ಮನ್ನು ಹೊಣೆಗಾರರನ್ನಾಗಿ ಮಾಡಿ ಶಿಸ್ತು ಕ್ರಮ ಜರುಗಿಸಬಾರದೇಕೆ? ಏಳು ದಿನಗಳ ಒಳಗೆ ಲಿಖಿತ ಉತ್ತರ ನೀಡುವಂತೆ ಸೂಚಿಸಲಾಗಿದೆ. ಡಿಪೊದಲ್ಲಿ ಹಾಕಿಸಿದ ಡೀಸೆಲ್‌ಗೆ ಆದ 3,542 ರೂ. ಮೊತ್ತವನ್ನು ಸಚಿವರು ತಮ್ಮ ಸಿಬ್ಬಂದಿ ಮೂಲಕ ಡೀಸೆಲ್ ತುಂಬಿಕೊಟ್ಟ ವ್ಯಕ್ತಿಗೆ ಕೊಟ್ಟಿದ್ದಾರೆ. ಅದನ್ನು ಅವರು ಡಿಪೊಗೆ ಪಾವತಿಸಿದ್ದಾರೆ. ಅವರು ನೋಟಿಸ್‌ಗೆ ವಿವರಣೆ ಕೊಟ್ಟ ಬಳಿಕ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಶುಕ್ರವಾರ ಘಟಕದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆಗೆ ಸಚಿವರು ಬಂದಿದ್ದ ವೇಳೆ, ಅವರ ಖಾಸಗಿ ಕಾರಿನ ಕೆಎ 03 ಎನ್.ಎಫ್ 8989 ಚಾಲಕ ಅಲ್ಲಿನ ಡಿಪೊದಿಂದ ಇಂಧನ ಹಾಕಿಸಿಕೊಂಡಿದ್ದರು. ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ವಿರೋಧ ವ್ಯಕ್ತವಾಗುತ್ತಿದ್ದಂತೆಯೇ, ಸಂಸ್ಥೆಯವರು ಸಿಬ್ಬಂದಿಗೆ ನೋಟಿಸ್ ಜಾರಿಗೊಳಿಸಿದ್ದಾರೆ.