ಪರ್ತ್: ಐಸಿಸಿ ಟಿ20 ವಿಶ್ವಕಪ್ ಕೂಟಕ್ಕೆ ದಿನಗಣನೆ ಆರಂಭವಾಗಿದೆ. ಕೂಟದಲ್ಲಿ ಭಾಗವಹಿಸುವ ಎಲ್ಲಾ 16 ತಂಡಗಳು ಆಸ್ಟ್ರೇಲಿಯಾಗೆ ಬಂದಾಗಿದೆ. ವಾರಗಳ ಹಿಂದೆಯೇ ಕಾಂಗರೂ ಊರಿಗೆ ಪ್ರಯಾಣ ಬೆಳೆಸಿರುವ ಟೀಂ ಇಂಡಿಯಾ ಈಗಾಗಲೇ ಎರಡು ಅಭ್ಯಾಸ ಪಂದ್ಯಗಳನ್ನಾಡಿದೆ.
ಶುಕ್ರವಾರ ಎಲ್ಲಾ 16 ತಂಡಗಳ ನಾಯಕರು ಒಂದೆಡೆ ಸೇರಿ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು. ನಂತರ ಫೋಟೋಶೂಟ್ ಕೂಡಾ ನಡೆದಿದೆ. ಭಾರತದ ನಾಯಕ ರೋಹಿತ್ ಶರ್ಮಾ ಮತ್ತು ಪಾಕಿಸ್ಥಾನದ ನಾಯಕ ಬಾಬರ್ ಅಜಂ ಅವರ ಫೋಟೊಗಳು ಇದೀಗ ಟ್ರೋಲಾಗುತ್ತಿದೆ.
ಕೆಲವು ಅಭಿಮಾನಿಗಳು ಈ ಫೋಟೊಶೂಟನ್ನು ತಮಾಷೆಯಾಗಿಯೇ ಸ್ವೀಕರಿಸಿದರೆ, ಕೆಲವರು ಮಾತ್ರ ಇದರಿಂದ ಭಾರತ – ಪಾಕಿಸ್ಥಾನ ನಡುವಿನ ಹೋರಾಟದ ತೀವೃತೆ ಕಡಿಮೆಯಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಹಿಂದಿಗೆ ಡಬ್ ಆದ ‘ಕಾಂತಾರ’ ಮೊದಲ ದಿನ ಗಳಿಸಿದ್ದೆಷ್ಟು? ಗಾಡ್ ಫಾದರ್ ಮೀರಿಸಿದ ರಿಷಬ್ ಸಿನಿಮಾ
ಐಸಿಸಿ ಈವೆಂಟನ್ನು ಎಷ್ಟು ಸಾಧ್ಯವೋ ಅಷ್ಟು ಪ್ರಚಾರ ಮಾಡಲು ತಮ್ಮ ಮಾರುಕಟ್ಟೆ ತಂತ್ರಗಳಿಗೆ ಮೊರೆ ಹೋಗಿದೆ. ಆದರೆ ಸಾಂಪ್ರದಾಯಿಕ ಎದುರಾಳಿ ತಂಡಗಳ ನಾಯಕರುಗಳಾದ ಬಾಬರ್ ಮತ್ತು ರೋಹಿತ್ ಒಟ್ಟಿಗೆ ನಗುತ್ತಿರುವ ಚಿತ್ರಗಳು ಕೆಲವು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಭಾರತದ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ಅವರೂ ಫೋಟೋಶೂಟ್ ಗೆ ಪ್ರತಿಕ್ರಿಯೆ ನೀಡಿದ್ದು, “ಕಿತ್ನಾ ಪರಿವಾರಿಕ್ ಮಹೌಲ್ ಹೈ” ಎಂದು ಚಿತ್ರಗಳ ಕೊಲಾಜ್ ಅನ್ನು ಟ್ವೀಟ್ ಮಾಡಿದ್ದಾರೆ.
ಟ್ವೀಟ್ ನಲ್ಲಿ ಅಭಿಮಾನಿಗಳು ನೀವು ವಿಶ್ವಕಪ್ ಆಡಲು ಹೋಗಿದ್ದೀರಾ ಅಥವಾ ಮದುವೆ ಫೋಟೋಶೂಟ್ ಮಾಡಲು ಹೋಗಿದ್ದೀರಾ ಎಂಬಿತ್ಯಾದಿ ರೀತಿಯಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.