Advertisement

ಮೀಸಲಾತಿ ನೀಡದಿದ್ದರೆ ಹೋರಾಟ ಇನ್ನಷ್ಟು ತೀವ್ರ: ಬಸವ ಜಯಮೃತ್ಯುಂಜಯ ಸ್ವಾಮೀಜಿ

05:03 PM Jul 11, 2022 | Team Udayavani |

ಧಾರವಾಡ: ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡಲು ಆ.22ರವರೆಗೂ ರಾಜ್ಯ ಸರ್ಕಾರಕ್ಕೆ ಗಡುವು ನೀಡಿದ್ದು, ಅಷ್ಟರೊಳಗೆ ಸರ್ಕಾರ ಮೀಸಲಾತಿ ಘೋಷಣೆ ಮಾಡುವ ಭರವಸೆ ಇದೆ. ಒಂದು ವೇಳೆ ಮೀಸಲು ನೀಡದೆ ಹೋದರೆ ಮುಂದಿನ ಹೋರಾಟ ಇನ್ನಷ್ಟು ತೀವ್ರವಾಗಿ ನಡೆಯಲಿದೆ ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

Advertisement

ನರೇಂದ್ರದಲ್ಲಿ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲು ನೀಡುವ ಕುರಿತ ಹೋರಾಟದ ಜಾಗೃತಿ ಸಭೆ ಹಾಗೂ ಪ್ರತಿಜ್ಞೆ ಪಂಚಾಯತ್‌ನಲ್ಲಿ ಮಾತನಾಡಿದರು.

ಅಖಂಡ ಲಿಂಗಾಯತ ಸಮುದಾಯದಲ್ಲಿ ಹಿಂದುಳಿದ ಉಪಜಾತಿಗಳಿಗೆ ಈಗಾಗಲೇ ಮೀಸಲಾತಿ ಲಭಿಸಿದೆ. ಆದರೆ ಕೃಷಿಯನ್ನು ಆಧಾರವಾಗಿ ಇಟ್ಟುಕೊಂಡು ಬಂದಿರುವ ಪಂಚಮಸಾಲಿ ಸಮುದಾಯಕ್ಕೆ ಮಾತ್ರ ಮೀಸಲಾತಿ ಲಭಿಸಿಲ್ಲ. ಈ ಸಮುದಾಯದ ಬಡ ಮಕ್ಕಳಿಗೆ ಶಿಕ್ಷಣ ನೀಡಲು ಪೋಷಕರು ಪರದಾಡುವಂತಾಗಿದೆ. ಇನ್ನು ಕೃಷಿ ಅವಲಂಬಿಸಿ ಬದುಕಲು ಸಾಧ್ಯವಿಲ್ಲ. ಹೀಗಾಗಿ ಪಂಚಮಸಾಲಿ ಸಮಾಜದ ಯುವಕರು ಉದ್ಯೋಗ ಅರಸಿ ಅಲೆದಾಡುತ್ತಿದ್ದಾರೆ. ಅವರ ಭವಿಷ್ಯ ಮೀಸಲಾತಿ ಲಭಿಸದೆ ಹೋದರೆ ಕರಾಳವಾಗಲಿದೆ. ಹೀಗಾಗಿ ಸರ್ಕಾರ ಮೀನ-ಮೇಷ ಎಣಿಸುವುದನ್ನು ಬಿಟ್ಟು ಕೂಡಲೇ ಮೀಸಲಾತಿ ಘೋಷಿಸಬೇಕು ಎಂದು ಆಗ್ರಹಿಸಿದರು.

ಒಂದು ಮನೆಯ ಐದು ಜನ ಅಣ್ಣ ತಮ್ಮಂದಿರಲ್ಲಿ ನಾಲ್ಕು ಜನರು ಮೀಸಲಾತಿ, ಸರ್ಕಾರಿ ಸೌಲಭ್ಯ ಪಡೆದು ಉತ್ತಮ ಸ್ಥಿತಿಯಲ್ಲಿ ಇದ್ದು, ಇನ್ನೊರ್ವ ಸಹೋದರನಿಗೆ ಯಾವುದೇ ಮೀಸಲಾತಿ ಸಿಗದೇ ಕಷ್ಟದಲ್ಲಿ ಇದ್ದಾಗ ಇತರರು ಆತನಿಗೆ ಸಹಾಯ ಮಾಡಬೇಕು. ಇದು ನ್ಯಾಯ ಮತ್ತು ಧರ್ಮ. ಹೀಗಾಗಿ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡುವಂತೆ ಎಲ್ಲಾ ಸಮುದಾಯಗಳು ಬೆನ್ನಿಗೆ ನಿಂತಿವೆ ಎಂದರು.

ನಮ್ಮ ಹೋರಾಟದ ಫಲವಾಗಿ ಇಂದು ಸರ್ಕಾರದ ಮಟ್ಟದಲ್ಲಿ ಕೂಡ ಮೀಸಲಾತಿ ನೀಡುವುದು ಸೂಕ್ತ ಎನ್ನುವ ಹಂತಕ್ಕೆ ಎಲ್ಲರೂ ಬಂದಿದ್ದಾರೆ. ಆದಷ್ಟು ಬೇಗ ಮೀಸಲಾತಿ ಘೋಷಣೆ ಮಾಡಬೇಕು. ಮುಂಬರುವ ದಿನಮಾನದಲ್ಲಿ ಬಡ ಮತ್ತು ಕೃಷಿ ಆಧಾರಿತ ಪಂಚಮಸಾಲಿ ಕುಟುಂಬಗಳ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗಕ್ಕೆ ಮೀಸಲಾತಿ ಅನಿವಾರ್ಯವಾಗಿದ್ದು, ಪಕ್ಷ ಬೇಧ ಮರೆತು ಸಮಾಜದ ಎಲ್ಲ ಮುಖಂಡರು ಹೋರಾಟಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಿದರು.

Advertisement

ಜಿಲ್ಲಾ ಪಂಚಮಸಾಲಿ ಸಂಘದ ಅಧ್ಯಕ್ಷ ನಿಂಗಣ್ಣ ಕರಿಕಟ್ಟಿ ಮಾತನಾಡಿ, ಇಡೀ ರಾಜ್ಯಕ್ಕೆ ಪಂಚಮಸಾಲಿ ಸಮುದಾಯದ ಕೊಡುಗೆಯನ್ನು ಸರ್ಕಾರ ಒಮ್ಮೆ ಪರಿಶೀಲನೆ ಮಾಡಬೇಕು. ಸ್ವಾತಂತ್ರ್ಯ ಹೋರಾಟದಿಂದ ಹಿಡಿದು ಇಂದಿನವರೆಗೂ ಕೃಷಿ ಸೇರಿದಂತೆ ಹಲವು ಕ್ಷೇತ್ರದಲ್ಲಿ ಸಮಾಜ ಉತ್ತಮ ಕೊಡುಗೆ ನೀಡಿದೆ. ಇಂತಹ ಸಮಾಜದ ಬಡ ಮಕ್ಕಳ ಶಿಕ್ಷಣಕ್ಕೆ ಮತ್ತು ಉದ್ಯೋಗಕ್ಕೆ ಮೀಸಲು ನೀಡಲು ಹಿಂದೇಟು ಹಾಕುವುದು ಸರಿಯಲ್ಲ ಎಂದರು.

ತಾಲೂಕು ಪಂಚಮಸಾಲಿ ಸಂಘದ ಅಧ್ಯಕ್ಷ ಪ್ರದೀಪಗೌಡ, ಸಮಾಜದ ಮುಖಂಡ ಮಂಜುನಾಥ ತಿರ್ಲಾಪುರ ಇನ್ನಿತರರಿದ್ದರು.

ಜಿಲ್ಲೆಯ ಲಿಂಗಾಯತ ಸಮುದಾಯದಲ್ಲಿ ಹೆಚ್ಚು ಜನ ಪಂಚಮಸಾಲಿ ಸಮುದಾಯದ ಜನರಿದ್ದು, ಅವರೆಲ್ಲರೂ ಮೀಸಲಾತಿ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ಹೀಗಾಗಿ ಜು.30ರವರೆಗೂ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಸಭೆ ಮತ್ತು ಪ್ರತಿಜ್ಞೆ ಪಂಚಾಯತಗಳನ್ನು ಮಾಡಿ ಇನ್ನಷ್ಟು ಜಾಗೃತಿ ಮೂಡಿಸುವ ಕೆಲಸ ನಡೆಯಲಿದೆ. ಕೊನೆಗೆ ಜು. 30ಕ್ಕೆ ಜಿಲ್ಲಾಧಿಕಾರಿ ಕಚೇರಿ ಎದುರು ಪಂಚಮಸಾಲಿ 2ಎ ಮೀಸಲಾತಿಗಾಗಿ ಒತ್ತಾಯ ಮಾಡಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುತ್ತದೆ. –ಬಸವ ಜಯಮೃತ್ಯುಂಜಯ ಸ್ವಾಮೀಜಿ

Advertisement

Udayavani is now on Telegram. Click here to join our channel and stay updated with the latest news.

Next