Advertisement
ಜಿಲ್ಲೆಯ ಏಳು ಚುನಾವಣಾ ಕ್ಷೇತ್ರಗಳ ಪೈಕಿ ಅತಿ ಹೆಚ್ಚು ಕಾವೇರಿರುವ ಕ್ಷೇತ್ರ ಸಚಿವ ವಿನಯ್ ಕುಲಕರ್ಣಿ ಅವರು ಪ್ರತಿನಿಧಿಸುತ್ತಿರುವ ಧಾರವಾಡ ಗ್ರಾಮೀಣ. ಇಲ್ಲಿ ಕೈ-ಕಮಲ ಪಡೆಯ ಮಧ್ಯೆ ಬಿರುಸಿನ ಸೆಣಸಾಟ ನಡೆದಿದ್ದು, ಇಬ್ಬರು ಪಾಳೇಗಾರರ ಮಧ್ಯೆ ಫೈಟ್ ನಡೆಯುತ್ತಿದೆ. ಸಚಿವ ವಿನಯ್ ಕುಲಕರ್ಣಿ ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟದಲ್ಲಿ ಭಾಗಿಯಾಗಿದ್ದರಿಂದ ಬಿಜೆಪಿ ಹಿಟ್‌ಲಿಸ್ಟ್‌ನಲ್ಲಿದ್ದಾರೆ. ಇವರಿಗೆ ಸೋಲಿನ ರುಚಿ ತೋರಿಸಲೇಬೇಕೆಂದು ಕಮಲ ಪಡೆ ರಣತಂತ್ರ ಹೆಣೆಯುತ್ತಿದೆ. ಇವರ ವಿರುದ್ಧ ಪ್ರಬಲ ಲಿಂಗಾಯತ ಸಮುದಾಯಕ್ಕೆ ಸೇರಿದ ಪಾಳೇಗಾರಿಕೆ ಕುಟುಂಬ ಹಂಗರಕಿ ದೇಸಾಯಿ ಮನೆತನದ ಅಮೃತ ದೇಸಾಯಿ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ.
Related Articles
Advertisement
ಯಾರ ಮೇಲಿದೆ ಲಿಂಗಾಯತರ ಅಭಯ?ಲಿಂಗಾಯತ ಹೋರಾಟದಲ್ಲಿ ಮುಂಚೂಣಿ ನಾಯಕರಾಗಿದ್ದಕ್ಕೆ ನನ್ನನ್ನು ಬಿಜೆಪಿ ಟಾರ್ಗೆಟ್ ಮಾಡುತ್ತಿದೆ ಎನ್ನುತ್ತಲೇ ವಿನಯ್ ಕುಲಕರ್ಣಿ, ಈ ಕ್ಷೇತ್ರದಲ್ಲಿನ ಪ್ರಬಲ ಶಕ್ತಿಯಾಗಿರುವ ಲಿಂಗಾಯತರ ಅನುಕಂಪ ಪಡೆಯುತ್ತಿದ್ದಾರೆ. ಇನ್ನು ಲಿಂಗಾಯತರಲ್ಲಿ ಒಳ ಪಂಗಡಕ್ಕೆ ಬಂದರೆ ಬಿಜೆಪಿ ಅಭ್ಯರ್ಥಿ ಲಿಂಗಾಯತ ಸಾದರ ಸಮುದಾಯಕ್ಕೆ ಸೇರಿದ್ದಾರೆ. ಈ ಸಮುದಾಯದ ಮತಗಳು ಇಲ್ಲಿ ಕೇವಲ 7 ಸಾವಿರ ಮಾತ್ರ. ಆದರೆ, ಪಂಚಮಸಾಲಿ ಸಮುದಾಯ 45 ಸಾವಿರದಷ್ಟು, ಕುಲಬಾಂಧವರು ಸಚಿವ ವಿನಯ್ ಬೆಂಬಲಕ್ಕೆ ನಿಲ್ಲುತ್ತಿದ್ದಾರೆ. ಇನ್ನುಳಿದಂತೆ ಬಿಜೆಪಿ ನಿಷ್ಠರಾಗಿದ್ದ 32 ಸಾವಿರದಷ್ಟಿರುವ ಬಣಜಿಗರು ಈ ಬಾರಿ ತಮ್ಮ ಗುಟ್ಟು ಬಿಟ್ಟುಕೊಟ್ಟಿಲ್ಲ. ಇವರು ಯಾರನ್ನು ಬೆಂಬಲಿಸುತ್ತಾರೆ ಎನ್ನುವುದೇ ಕುತೂಹಲ. ಜಾತೀವಾರು ಲೆಕ್ಕಾಚಾರ
ಲಿಂಗಾಯತರು: 91,000
ಮುಸ್ಲಿಮರು: 31,000
ಎಸ್‌ಸಿ,ಎಸ್‌ಟಿ: 35,000
ಕುರುಬರು: 12,000
ಮರಾಠರು: 9,000
ಇನ್ನುಳಿದ ಜಾತಿಗಳು: 19,000
ಒಟ್ಟು ಮತಗಳು: 1,97,263 ನಾನು ಲಿಂಗಾಯತ ಸ್ವತಂತ್ರ ಧರ್ಮ ಹೋರಾಟ ಮಾಡಿದ್ದಕ್ಕೆ ನನ್ನನ್ನು ಬಿಜೆಪಿ ಟಾರ್ಗೆಟ್ ಮಾಡುತ್ತಿದೆ. ಆದರೆ ನಾನು ಅಂಜುವವನಲ್ಲ. ಬಸವಣ್ಣನ ಕಾಯಕ ಮತ್ತು ಸಮಾನತೆಯ ತತ್ವ ನನ್ನ ಕ್ಷೇತ್ರದ ಜನರಿಗೂ ಗೊತ್ತು. ಬಿಜೆಪಿಯವರು ಏನೇ ಷಡ್ಯಂತ್ರ ಮಾಡಿದರೂ ನನ್ನ ಗೆಲುವು ನಿಶ್ಚಿತ.
– ವಿನಯ್ ಕುಲಕರ್ಣಿ, ಕಾಂಗ್ರೆಸ್ ಅಭ್ಯರ್ಥಿ ಸಚಿವ ವಿನಯ್ ಕುಲಕರ್ಣಿ ಧಾರವಾಡ ಗ್ರಾಮೀಣ ಕ್ಷೇತ್ರವನ್ನು ರಣಾಂಗಣ ಮಾಡಿಟ್ಟಿದ್ದಾರೆ. ಇದನ್ನು ಸರಿಪಡಿಸಿ ಜನರಿಗೆ ನೆಮ್ಮದಿ ಜೀವನ ನಡೆಸುವುದ ಕ್ಕಾಗಿ ನನಗೆ ಮತ ಹಾಕುತ್ತಾರೆ ಎನ್ನುವ ವಿಶ್ವಾಸವಿದೆ. ಎರಡು ಬಾರಿ ನನಗೆ ಅವಕಾಶ ಕೊಟ್ಟಿಲ್ಲ. ಈ ಬಾರಿ ಕೊಡುತ್ತಾರೆ ಎನ್ನುವ ನಂಬಿಕೆ ಇದೆ.
– ಅಮೃತ ದೇಸಾಯಿ, ಬಿಜೆಪಿ ಅಭ್ಯರ್ಥಿ. ನಾನು ಇಬ್ಬರು ಪಾಳೇಗಾರರ ಜತೆಗೆ ಸೆಣಸಾಟ ನಡೆಸುತ್ತಿದ್ದೇನೆ. ಆದರೆ ಇಂದು ಈ ಕ್ಷೇತ್ರದಲ್ಲಿನ ಜನರಿಗೆ ರೈತರ ಸಾಲ ಮನ್ನಾ ಮಾಡುವ ಮುಖ್ಯಮಂತ್ರಿ ಬೇಕಾಗಿದ್ದಾರೆ. ಹೀಗಾಗಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಲು ರೈತರು ನನ್ನ ಗೆಲ್ಲಿಸುವುದು ಖಂಡಿತ.
– ಶ್ರೀಕಾಂತ ಜಮುನಾಳ, ಜೆಡಿಎಸ್ ಅಭ್ಯರ್ಥಿ – ಬಸವರಾಜ ಹೊಂಗಲ್