ಕಳೆದ ವಾರವಷ್ಟೇ ನಟ ಧರ್ಮ ಕೀರ್ತಿರಾಜ್ “ಚಾಣಾಕ್ಷ’ ಚಿತ್ರದ ಮೂಲಕ ಆ್ಯಕ್ಷನ್ ಹೀರೋ ಆಗಿ, ಮಾಸ್ ಲುಕ್‌ನಲ್ಲಿ ಪ್ರೇಕ್ಷಕರ ಮುಂದೆ ಬಂದಿದ್ದರು. ಇಲ್ಲಿಯವರೆಗೆ ಚಾಕೋಲೆಟ್ ಹೀರೋ ಆಗಿ ಗುರುತಿಸಿಕೊಳ್ಳುತ್ತಿದ್ದ ಧರ್ಮ ಅವರಿಗೆ “ಚಾಣಾಕ್ಷ’ ಕೊಂಚ ಮಟ್ಟಿಗೆ ಆ್ಯಕ್ಷನ್ ಹೀರೋ ಇಮೇಜ್ ತಂದುಕೊಟ್ಟಿತ್ತು.
ಇದರ ಬೆನ್ನಲ್ಲೇ ಧರ್ಮ ಕೀರ್ತಿರಾಜ್, “ಖಡಕ್’ ಎನ್ನುವ ಮತ್ತೂಂದು ಔಟ್ ಆ್ಯಂಡ್ ಔಟ್ ಆ್ಯಕ್ಷನ್ ಕಹಾನಿಗೆ ಹೀರೋ ಆಗುತ್ತಿದ್ದು, ನಾಳೆ ಈ ಚಿತ್ರದ ಅಧಿಕೃತವಾಗಿ ಸೆಟ್ಟೇರಲಿದೆ. ಈ ಹಿಂದೆ ಶಶಿಕುಮಾರ್ ಅಭಿನಯದ “ನಾರದ ವಿಜಯ’, “ಡ್ರ್ಯಾಗನ್’, “ಮಿಸ್ಟರ್ ಚೀಟರ್’, “ಅಮಾನುಷಾ’ ಮೊದಲಾದ ಚಿತ್ರಗಳನ್ನು ನಿರ್ಮಿಸಿದ್ದ ನಿರ್ಮಾಪಕ ವಲ್ಲಿ ಮತ್ತು ಸಿದ್ಧರಾಮಯ್ಯ ಸಿಂಗಾಪುರ “ಖಡಕ್’ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಯುವ ನಿರ್ದೇಶಕ ಬಿ. ರಾಜರತ್ನ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ಸದ್ಯ “ಖಡಕ್’ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ಪೂರ್ಣಗೊಂಡಿದ್ದು, ಬುಧವಾರ ಚಿತ್ರದ ಮುಹೂರ್ತ ನಡೆಯಲಿದೆ. ಆರ್.ಟಿ ನಗರದ ಸಾಯಿಬಾಬಾ ದೇವಸ್ಥಾನಲ್ಲಿ ನಡೆಯಲಿರುವ ಮುಹೂರ್ತ ಸಮಾರಂಭದಲ್ಲಿ ನಟ ದರ್ಶನ್, ಚಿತ್ರೀಕರಣಕ್ಕೆ ಚಾಲನೆ ನೀಡಲಿದ್ದಾರೆ.
ಸಚಿವ ಸತೀಶ್ ಜಾರಕಿಹೊಳಿ, ಕೃಷ್ಣ ಭೈರೇಗೌಡ, ಬೈರತಿ ಸುರೇಶ್, ಹಿರಿಯ ನಟ ಕೀರ್ತಿರಾಜ್ ಮೊದಲಾದವರು ಮುಹೂರ್ತ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಅಂಡರ್‌ವರ್ಲ್ಡ್ ಮತ್ತು ಸ್ಮಗ್ಲಿಂಗ್ ಮಾಫಿಯಾ ಕಥಾಹಂದರವಿರುವ “ಖಡಕ್’ ಚಿತ್ರದಲ್ಲಿ ನಟ ಧರ್ಮ ಕೀರ್ತಿರಾಜ್ ಎರಡು ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಉಳಿದಂತೆ ಅನುಷಾ ರೈ ನಾಯಕಿ ಕಬೀರ್ ದುಹಾನ್ ಸಿಂಗ್, ಬುಟೋ ಭಾಯ್, ಕಮಲ್, ಅಶೋಕ್ ಚಕ್ರವರ್ತಿ, ರಾಕ್‌ಲೈನ್ ಸುಧಾಕರ್, ಷಣ್ಮುಖ, ಸಾಯಿಕುಮಾರ್ ಬೈಲಹೊಂಗಲ, ರೆಹಮಾನ್, ಉದಯ ರಾಜು , ರವಿರಾಮ್ ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಚಿತ್ರದ ಹಾಡುಗಳಿಗೆ ಎಂ. ಎನ್ ಕೃಪಾಕರ್ ಸಂಗೀತ ಸಂಯೋಜನೆಯಿದೆ. ಚಿತ್ರಕ್ಕೆ ಶಂಕರ್ ಛಾಯಾಗ್ರಹಣ, ವೆಂಕಟೇಶ್ ಯುಡಿವಿ ಸಂಕಲನ ಕಾರ್ಯ ನಿರ್ವಹಿಸುತ್ತಿದ್ದಾರೆ. ಸುಮಾರು 45 ದಿನಗಳ ಚಿತ್ರೀಕರಣಕ್ಕೆ ಪ್ಲಾನ್ ಹಾಕಿಕೊಂಡಿರುವ ಚಿತ್ರತಂಡ, ಮುಂದಿನ ನವೆಂಬರ್ ವೇಳೆಗೆ “ಖಡಕ್’ ಚಿತ್ರವನ್ನು ತೆರೆಗೆ ತರುವ ಯೋಜನೆಯಲ್ಲಿದೆ.